ನಿರ್ಭಯಾ ಪ್ರಕರಣಕ್ಕೆ 8 ವರ್ಷ: ರೇಪ್​ ಸಂತ್ರಸ್ತರ ಪರ ಹೋರಾಟ ಮುಂದುವರಿಸುವೆ ಎಂದ ನಿರ್ಭಯಾ ತಾಯಿ

| Updated By: ಸಾಧು ಶ್ರೀನಾಥ್​

Updated on: Dec 16, 2020 | 3:59 PM

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ನಿರ್ಭಯಾಳಿಗೆ ನ್ಯಾಯ ಒದಗಿಸಿಕೊಡಲು ಆಕೆಯ ಅಮ್ಮ ಆಶಾದೇವಿ ನಿರಂತರ ಹೋರಾಟ ನಡೆಸಿದ್ದರು. ಇನ್ನು ಮುಂದೆಯೂ ತಾನು ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಹೋರಾಟ ನಡೆಸುತ್ತೇನೆ ಎಂದು ಅವರು ಹೇಳಿದ್ದಾರೆ.

ನಿರ್ಭಯಾ ಪ್ರಕರಣಕ್ಕೆ 8 ವರ್ಷ: ರೇಪ್​ ಸಂತ್ರಸ್ತರ ಪರ ಹೋರಾಟ ಮುಂದುವರಿಸುವೆ ಎಂದ ನಿರ್ಭಯಾ ತಾಯಿ
Follow us on

ನವದೆಹಲಿ: ದೇಶವನ್ನೇ ತಲೆತಗ್ಗಿಸುವಂತೆ ನಿರ್ಭಯಾ ಅತ್ಯಾಚಾರ ಪ್ರಕರಣ ನಡೆದು 8 ವರ್ಷ ಕಳೆದಿದೆ. 2012ರಲ್ಲಿ ದೆಹಲಿಯಲ್ಲಿ ಅರೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಮೇಲೆ ಕಾಮುಕರು ಪೈಶಾಚಿಕ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ಪ್ರಕರಣದ ಅಪರಾಧಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಿ 9 ತಿಂಗಳು ಕಳೆದಿವೆ.

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ನಿರ್ಭಯಾಳಿಗೆ ನ್ಯಾಯ ಒದಗಿಸಿಕೊಡಲು ಆಕೆಯ ಹೆತ್ತಮ್ಮ ಆಶಾದೇವಿ ನಿರಂತರ ಹೋರಾಟ ನಡೆಸಿದ್ದರು. ಇನ್ನು ಮುಂದೆಯೂ.. ಅತ್ಯಾಚಾರ ಸಂತ್ರಸ್ತರು ಯಾರೇ ಆಗಿರಲಿ ನ್ಯಾಯ ಒದಗಿಸಲು ಅವರ ಪರ ಹೋರಾಟ ನಡೆಸುತ್ತೇನೆ. ಪಾಪಿಗಳನ್ನು ಗಲ್ಲಿಗೆ ಹಾಕುವ ಮೂಲಕ ನನ್ನ ಮಗಳಿಗೆ ನ್ಯಾಯ ಲಭಿಸಿದೆ. ಹಾಗಂತ ನಾನು ಸುಮ್ಮನೆ ಕುಳಿತುಕೊಳ್ಳಲಾರೆ. ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತರ ಪರವಾಗಿ ನಾನು ಹೋರಾಟ ನಡೆಸುವೆ. ಅತ್ಯಾಚಾರದ ವಿರುದ್ಧ ನಾವೆಲ್ಲರೂ ಜತೆಯಾಗಿ ದನಿಯೆತ್ತಬೇಕಿದೆ ಎಂದು ಅವರು ಹೇಳಿದ್ದಾರೆ.

ನಿರ್ಭಯಾಗೆ ನ್ಯಾಯ ಒದಗಿಸಲು 7 ವರ್ಷಗಳ ಕಾಲ ಆಶಾ ದೇವಿ ಕಾನೂನು ಹೋರಾಟ ಮಾಡಿದ್ದರು. ಇದರ ಫಲವಾಗಿ ಅತ್ಯಾಚಾರ ಪ್ರಕರಣದ ಅಪರಾಧಿಗಳಾದ ಮುಕೇಶ್ ಸಿಂಗ್, ಅಕ್ಷಯ್ ಸಿಂಗ್ ಠಾಕೂರ್, ವಿನಯ್ ಶರ್ಮಾ ಮತ್ತು ಪವನ್ ಗುಪ್ತಾನನ್ನು ಮಾರ್ಚ್ 20 ರಂದು ಗಲ್ಲಿಗೇರಿಸಲಾಗಿತ್ತು.

ದೇಶವನ್ನೇ ನಡುಗಿಸಿದ ಅತ್ಯಾಚಾರ ಪ್ರಕರಣ

2012 ಡಿಸೆಂಬರ್ 16ರಂದು 23ರ ಹರೆಯದ ಅರೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಬಸ್ ನಲ್ಲಿ ಸಂಚರಿಸುತ್ತಿದ್ದಾಗ ಆಕೆಯ ಮೇಲೆ ಬಸ್ ಚಲಿಸುತ್ತಿದ್ದಾಗಲೇ 6 ಕಾಮುಕರು ಅತ್ಯಾಚಾರವೆಸಗಿದ್ದರು. ಅತ್ಯಾಚಾರವೆಸಗಿದ ಕಾಮುಕರ ಪೈಕಿ ಒಬ್ಬ ಅಪ್ರಾಪ್ತ ವಯಸ್ಸಿನವನೂ ಇದ್ದ. ಪೈಶಾಚಿಕ ರೀತಿಯಲ್ಲಿ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ಕೆಲವು ದಿನಗಳ ನಂತರ ಸಿಂಗಾಪುರ ಆಸ್ಪತ್ರೆಯಲ್ಲಿ ಅಸು ನೀಗಿದ್ದಳು.

ನಿರ್ಭಯಾ ಪ್ರಕರಣದಲ್ಲಿ ಅತ್ಯಾಚಾರ ಅಪರಾಧಿಗಳಿಗೆ ಶಿಕ್ಷೆಯಾದ ನಂತರ ಇದು ಮೊದಲ ಡಿಸೆೆಂಬರ್ 16ರ ದಿನವಾಗಿದೆ. ನಿರ್ಭಯಾ ಪ್ರಕರಣದಲ್ಲಿ ನಮಗೆ ನ್ಯಾಯ ಸಿಕ್ಕಿದೆ ಎಂದು ಆಶಾದೇವಿ ಹೇಳಿದ್ದಾರೆ. ಪ್ರಸ್ತುತ ಪ್ರಕರಣದ ಕಾನೂನು ಹೋರಾಟದ ಬಗ್ಗೆ ಮಾತನಾಡಿದ ಅವರು, ಅಪರಾಧಿಗಳ ಪರ ವಾದಿಸಿದ ವಕೀಲರು ತಮ್ಮ ಕಕ್ಷಿದಾರರನ್ನು ಕಠಿಣ ಶಿಕ್ಷೆಯಿಂದ ಪಾರು ಮಾಡುವುದಕ್ಕಾಗಿ ಹಲವಾರು ರೀತಿಯಲ್ಲಿ ಶ್ರಮಿಸಿದ್ದರು. ಹಲವಾರು ಬಾರಿ ಶಿಕ್ಷೆ ವಿಧಿಸುವ ಆದೇಶ ಮುಂದೂಡಲ್ಪಟ್ಟಿತ್ತು. ಎಷ್ಟೇ ವಿಳಂಬವಾದರೂ.. ಕೊನೆಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಯಿತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ ಆಶಾದೇವಿ.

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ನಾಲ್ವರು ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸುವ ಮೂಲಕ ಸಮಾಜಕ್ಕೆ ಪ್ರಬಲವಾದ ಸಂದೇಶವನ್ನು ರವಾನಿಸಲಾಗಿದೆ. ಈ ಮೂಲಕ ನ್ಯಾಯಕ್ಕಾಗಿ ಹೋರಾಡುತ್ತಿರುವ ಅತ್ಯಾಚಾರ ಸಂತ್ರಸ್ತರಿಗೆ ಕಾನೂನು ವ್ಯವಸ್ಥೆಯಲ್ಲಿ ನಂಬಿಕೆ ಹುಟ್ಟುವಂತೆ ಮಾಡಿದೆ.

8 ವರ್ಷಗಳ ಹಿಂದೆಯೇ ಅತ್ಯಾಚಾರ ಸಂತ್ರಸ್ತರ ಪರ ನಾನು ದನಿಯೆತ್ತಬೇಕು ಎಂದು ನಿರ್ಧರಿಸಿಕೊಂಡಿದ್ದೆ. ಮುಂದೆಯೂ ನಾನು ಈ ಹೋರಾಟವನ್ನು ಮುಂದುವರಿಸುತ್ತೇನೆ. ನನ್ನ ಮಗಳು 10-12 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಳು. ಅವಳಿಗೆ ಒಂದು ಹನಿ ನೀರು ಕುಡಿಯಲು ಸಾಧ್ಯವಾಗುತ್ತಿರಲಿಲ್ಲ. ಆಗಲೇ ನಾನು ಅತ್ಯಾಚಾರದ ವಿರುದ್ಧ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ್ದೆ. ಅತ್ಯಾಚಾರ ಸಂತ್ರಸ್ತೆಯರ ಮುಖದಲ್ಲಿ ನಾನೀಗ ನನ್ನ ಮಗಳು ಕಾಣುತ್ತೇನೆ. ನನ್ನ ಮಗಳು ಆಕೆಯ ಬದುಕಿನ ಕೊನೆ ಗಳಿಗೆಯಲ್ಲಿ ಆಸ್ಪತ್ರೆಯಲ್ಲಿ ಅನುಭವಿಸಿದ ನೋವು ನನಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಪುರುಷರ ಮನಃಸ್ಥಿತಿ ಬದಲಾದರೆ ಈ ರೀತಿಯ ಘಟನೆಗಳು ಸಂಭವಿಸದಂತೆ ತಡೆಯಬಹುದು. ಪೊಲೀಸರು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಹೇಳಿದ ಆಶಾದೇವಿ, ಹಾಥರಸ್ ಅತ್ಯಾಚಾರ ಸಂತ್ರಸ್ತೆಯ ಮೃತದೇಹವನ್ನು ಉತ್ತರ ಪ್ರದೇಶದ ಪೊಲೀಸರು ರಾತ್ರೋರಾತ್ರಿ ಸುಟ್ಟು ಹಾಕಿದ್ದನ್ನು ಪ್ರಶ್ನೆ ಮಾಡಿದ್ದಾರೆ.

ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿದ್ದು ತಿಹಾರ್ ಜೈಲಿನಲ್ಲಿ

ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ 2020 , ಮಾರ್ಚ್ 20ರಂದು ಬೆಳಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
ಒಟ್ಟು 6 ಜನರು ನಿರ್ಭಯಾ ಮೇಲೆ ಅತ್ಯಾಚಾರವೆಸಗಿದ್ದರು. ಇದರಲ್ಲಿ ರಾಮ್ ಸಿಂಗ್ ಎಂಬ ಅಪರಾಧಿ ತಿಹಾರ್ ಜೈಲಿನಲ್ಲಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. 6ನೇ ಅಪರಾಧಿ ಅಪ್ರಾಪ್ತ ಎಂದು ಬಾಲ ನ್ಯಾಯಮಂಡಳಿ ಘೋಷಿಸಿತ್ತು. ಅಪ್ರಾಪ್ತ ಅಪರಾಧಿಗೆ ಮೂರು ವರ್ಷ ರಿಮಾಂಡ್ ಹೋಮ್ ನಲ್ಲಿ ಶಿಕ್ಷೆ ವಿಧಿಸಿ ಬಿಡುಗಡೆಗೊಳಿಸಲಾಗಿತ್ತು.

ಬದಲಾಗಲಿ ಪುರುಷ ಮನಸ್ಥಿತಿ

ನಿರ್ಭಯಾಳ ಕುಟುಂಬಕ್ಕೆ ಕಾನೂನು ಹೋರಾಟ ನಡೆಸಲು ಸಹಾಯ ಮಾಡಿದ್ದು ಯೋಗಿತಾ ಭಯಾನ. ಈಕೆ ನಿರ್ಭಯಾ ಕುಟುಂಬದ ಆಪ್ತಳಾಗಿದ್ದು, ಸರ್ಕಾರ ಮಹಿಳೆಯರ ರಕ್ಷಣೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದರು. ಮಹಿಳೆಯರಿಗೆ ಸ್ವಯಂ ರಕ್ಷಣೆ ಕಲೆಯ ತರಬೇತಿ ನೀಡುವ ಬದಲು ಪುರುಷರ ಮನಸ್ಥಿತಿಯನ್ನು ಬದಲಿಸಲು ಜನರು ಪ್ರಯತ್ನಿಸಬೇಕು. ಮಹಿಳೆಯರಿಗೆ ಗೌರವ ಕೊಡಬೇಕು ಎಂದು ಪುರುಷರಿಗೆ ಕಲಿಸಿದರೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕಡಿಮೆಯಾಗಬಹುದು ಅಂತಾರೆ ಸಾಮಾಜಿಕ ಕಾರ್ಯಕರ್ತೆ ಯೋಗಿತಾ.

ಕೊನೆಗೂ ಫಲಿಸಿತು ನಿರ್ಭಯಾ ತಾಯಿಯ ನಿರಂತರ ಹೋರಾಟ!