ನವದೆಹಲಿ: ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ (Uddhav Thackeray) ಅವರ ಪುತ್ರ ಆದಿತ್ಯ ಠಾಕ್ರೆ (Adithya Thackeray) ವಿರುದ್ಧ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಾಗ್ದಾಳಿ ನಡೆಸಿದ್ದು, ಆದಿತ್ಯ ಠಾಕ್ರೆ ತನ್ನ ವಯಸ್ಸನ್ನು ಅರಿತುಕೊಂಡು, ಅದಕ್ಕೆ ತಕ್ಕಂತೆ ಮಾತನಾಡಬೇಕು ಎಂದು ಹೇಳಿದ್ದಾರೆ. ಜೂನ್‌ನಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರದ ಪತನಕ್ಕೆ ಕಾರಣವಾದ ಶಿವಸೇನೆಯ 39 ಶಾಸಕರೊಂದಿಗಿನ ಬಂಡಾಯದ ಹಿನ್ನೆಲೆಯಲ್ಲಿ ಮಾಜಿ ಸಚಿವ ಆದಿತ್ಯ ಠಾಕ್ರೆ ಸಿಎಂ ಏಕನಾಥ್ ಶಿಂಧೆ (Eknath Shinde) ಅವರ ವಿರುದ್ಧ ಹಲವಾರು ಸಂದರ್ಭಗಳಲ್ಲಿ ದಾಳಿ ಮಾಡಿದ್ದರು. ಉದ್ಧವ್ ಮತ್ತು ಆದಿತ್ಯ ಠಾಕ್ರೆ ಶಿವಸೇನೆ ಬಂಡುಕೋರರನ್ನು ದೇಶದ್ರೋಹಿಗಳು ಎಂದು ಕರೆದಿದ್ದರು.
ಆದಿತ್ಯ ಠಾಕ್ರೆ ತಮ್ಮ ವಯಸ್ಸನ್ನು ಅರಿತು ಮಾತನಾಡಬೇಕು. ಅವರು ಮತ್ತು ಇತರರು ಅಧಿಕಾರಕ್ಕಾಗಿ ಬಾಳಾಸಾಹೇಬರ ಚಿಂತನೆಯಿಂದ ದೂರ ಸರಿದರು. ಅದೇ ನಮ್ಮನ್ನು ಬಂಡಾಯವೆದ್ದು, ಈ ದಿಟ್ಟ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ. ಬಂಡಾಯ ಶಾಸಕರ ವಿರುದ್ಧ ಆದಿತ್ಯ ಠಾಕ್ರೆ ದೇಶದ್ರೋಹಿ ಎಂದು ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಏಕನಾಥ್ ಶಿಂಧೆ ವಾಗ್ದಾಳಿ ನಡೆಸಿದ್ದಾರೆ.
“ಆದಿತ್ಯ ಅವರು ಜಿದ್ದಾಜಿದ್ದಿಯಲ್ಲಿದ್ದಾಗ ನಾನು ಶಿವಸೇನೆಯಲ್ಲಿ ಸಕ್ರಿಯನಾಗಿದ್ದೆ. ಅವರಿಗೆ ಈಗ ಕೇವಲ 32 ವರ್ಷ. ನಮ್ಮನ್ನು ಟೀಕಿಸಲು ಅವರಿಗೆ ಏನು ಹಕ್ಕಿದೆ? ಅವರು ಯಾರು? ಅವರು ದಿವಂಗತ ಬಾಳಾಸಾಹೇಬ್ ಅಥವಾ ಉದ್ಧವ್ ಠಾಕ್ರೆಯವರ ಆಸ್ತಿಗೆ ವಾರಸುದಾರರಾಗಬಹುದು. ಆದರೆ ಅವರು ಶಿವಸೇನೆ ಪಕ್ಷದ ಪರಂಪರೆಯನ್ನು ಪಡೆಯಲು ಸಾಧ್ಯವಿಲ್ಲ. ನಾವು 35 ವರ್ಷಗಳಿಂದ ಕೇಸರಿ ಬಾವುಟವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದೇವೆ. ಆದರೆ ಈಗ ಅವರು ನಮ್ಮನ್ನು ಟೀಕಿಸುತ್ತಿದ್ದಾರೆ ಎಂದು ಏಕನಾಥ್ ಶಿಂಧೆ ಬಣದ ನಾಯಕರು ಆಕ್ರೋಶ ಹೊರಹಾಕಿದ್ದಾರೆ.