ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಏಕನಾಥ್ ಶಿಂಧೆ
ಈ ಪ್ರಸ್ತಾವನೆಯು ಬಹಳ ಸಮಯದಿಂದ ಪರಿಗಣನೆಯಲ್ಲಿದೆ. ಆದಷ್ಟು ಬೇಗ ಇದಕ್ಕೆ ಅನುಮೋದನೆಯನ್ನು ನೀಡಬೇಕು ಎಂದು ನಾನು ವಿನಂತಿಸುತ್ತೇನೆ ಎಂದು ಸಿಎಂ ಏಕನಾಥ್ ಶಿಂಧೆ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಮುಂಬೈ: ಮರಾಠಿ (Marathi) ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ಅನುಮತಿ ನೀಡಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಒತ್ತಾಯಿಸಿದ್ದಾರೆ. ಈ ಕುರಿತು ಮಹಾರಾಷ್ಟ್ರ ಸರ್ಕಾರವು 2013ರ ನವೆಂಬರ್ 16ರಂದು ಕೇಂದ್ರ ಸರ್ಕಾರಕ್ಕೆ ವಿವರವಾದ ಪ್ರಸ್ತಾವನೆಯನ್ನು ಕಳುಹಿಸಿತ್ತು ಎಂದು ಏಕನಾಥ್ ಶಿಂಧೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.
“ಈ ಪ್ರಸ್ತಾವನೆಯ ಸ್ಥಿತಿಗತಿಯ ಕುರಿತು ಮಹಾರಾಷ್ಟ್ರ ನಿಯಮಿತವಾಗಿ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ. ಮಹಾರಾಷ್ಟ್ರದ ಜನರು ಸಹಿ ಅಭಿಯಾನವನ್ನು ನಡೆಸಿದ್ದಾರೆ. ಈ ಬೇಡಿಕೆಯನ್ನು ಬೆಂಬಲಿಸಿ 1.20 ಲಕ್ಷ ಸಹಿಗಳನ್ನು ಸಂಗ್ರಹಿಸಲಾಗಿದೆ. ಇದನ್ನು ಭಾರತದ ರಾಷ್ಟ್ರಪತಿಗಳಿಗೆ ಕಳುಹಿಸಲಾಗಿದೆ” ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ನೂತನ ಸಚಿವರಿಗೆ ಖಾತೆಗಳ ಹಂಚಿಕೆ: ಫಡ್ನವಿಸ್ಗೆ ಹಣಕಾಸು, ಗೃಹ ಇಲಾಖೆ
ಈ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಈ ವರ್ಷದ ಫೆಬ್ರವರಿ 3ರಂದು ರಾಜ್ಯಸಭೆಗೆ ತಿಳಿಸಿದ್ದರು. ಈ ಪ್ರಸ್ತಾವನೆಯು ಬಹಳ ಸಮಯದಿಂದ ಪರಿಗಣನೆಯಲ್ಲಿದೆ. ಆದಷ್ಟು ಬೇಗ ಇದಕ್ಕೆ ಅನುಮೋದನೆಯನ್ನು ನೀಡಬೇಕು ಎಂದು ನಾನು ವಿನಂತಿಸುತ್ತೇನೆ ಎಂದು ಸಿಎಂ ಏಕನಾಥ್ ಶಿಂಧೆ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.