ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ತಮ್ಮ ಮೊದಲ ಭಾಷಣ ಮಾಡಿದ್ದಾರೆ. ತಮ್ಮ ಭಾಷಣದ ಸಮಯದಲ್ಲಿ ಸಿಎಂ ಏಕನಾಥ್ ಶಿಂಧೆ ತಮ್ಮ ಕುಟುಂಬವು ಎದುರಿಸುತ್ತಿರುವ ಕಷ್ಟಗಳನ್ನು ವಿವರಿಸುವಾಗ ಭಾವುಕರಾಗಿ, ಕೆಲಕಾಲ ಮಾತು ನಿಲ್ಲಿಸಿದರು. ತಮ್ಮ ಮಕ್ಕಳು ಸಾವನ್ನಪ್ಪಿದ ದಿನಗಳನ್ನು ನೆನೆದು ಭಾವುಕರಾದ ಅವರು ಕರಾಳ ದಿನಗಳ ಬಗ್ಗೆ ಅಧಿವೇಶನದಲ್ಲಿ ಹೇಳಿಕೊಂಡರು.
ಶಿವಸೇನೆಯು ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ನಾನು ಬಹುತೇಕ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವವನಿದ್ದೆ. ಆದರೆ, ಶಿವಸೇನೆ ಪಕ್ಷದೊಳಗೆ ಆಕ್ಷೇಪ ವ್ಯಕ್ತವಾದ ನಂತರ ನಾನು ಸಿಎಂ ಹುದ್ದೆಯನ್ನು ನಿರಾಕರಿಸಿದೆ ಎಂದು ಏಕನಾಥ್ ಶಿಂಧೆ ಸದನದಲ್ಲಿ ಬಹಿರಂಗಪಡಿಸಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಾಗ ನನ್ನ ಕುಟುಂಬಕ್ಕೆ ಬೆದರಿಕೆ ನೀಡಲಾಯಿತು ಎಂದು ಏಕನಾಥ್ ಶಿಂಧೆ ಆರೋಪಿಸಿದ್ದಾರೆ. ಶಿಂಧೆ ತಮ್ಮ ಮಕ್ಕಳು ಮತ್ತು ಅವರ ತಾಯಿ ಕೆಲವು ವರ್ಷಗಳ ಹಿಂದೆ ಹೇಗೆ ಸಾವನ್ನಪ್ಪಿದರು ಎಂಬ ಬಗ್ಗೆ ತಮ್ಮ ಭಾಷಣದಲ್ಲಿ ಹೇಳುವಾಗ ಭಾವುಕರಾಗಿ ಕಣ್ಣೀರು ಹಾಕಿದರು.
#WATCH | Maharashtra CM Eknath Shinde breaks down as he remembers his family in the Assembly, “While I was working as a Shiv Sena Corporator in Thane, I lost 2 of my children & thought everything is over…I was broken but Anand Dighe Sahab convinced me to continue in politics.” pic.twitter.com/IVxNl16HOW
— ANI (@ANI) July 4, 2022
ಅವರು ನನ್ನ ಕುಟುಂಬದ ಮೇಲೆ ದಾಳಿ ಮಾಡಿದರು. ನನ್ನ ತಂದೆ ಬದುಕಿದ್ದಾರೆ, ಆದರೆ, ನನ್ನ ತಾಯಿ ಸಾವನ್ನಪ್ಪಿದರು. ನನ್ನ ಹೆತ್ತವರಿಗೆ ನಾನು ಹೆಚ್ಚು ಸಮಯ ನೀಡಲು ಸಾಧ್ಯವಾಗಲಿಲ್ಲ. ನಾನು ಮನೆಗೆ ಬರುವಾಗ ಅವರು ಮಲಗಿರುತ್ತಿದ್ದರು. ನಾನು ಮಲಗಿರುವಾಗ ಅವರು ಕೆಲಸಕ್ಕೆ ಹೋಗುತ್ತಿದ್ದರು ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
ನನ್ನ ಮಗ ಶ್ರೀಕಾಂತ್‌ಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗಲಿಲ್ಲ. ನನ್ನ ಇಬ್ಬರು ಮಕ್ಕಳು ಕೂಡ ಸಾವನ್ನಪ್ಪಿದರು. ಆ ಸಮಯದಲ್ಲಿ ಬದುಕೇ ಮುಗಿದುಹೋಯಿತು ಎನಿಸಿಬಿಟ್ಟಿತ್ತು. ಆಗ ಆನಂದ್ ದಿಘೆ ಅವರು ನನಗೆ ಸಾಂತ್ವನ ಹೇಳಿದರು. ಇನ್ನು ಬದುಕಲು ಏನಿದೆ? ಇನ್ನಾದರೂ ನಾನು ನನ್ನ ಕುಟುಂಬದೊಂದಿಗೆ ಇರಬೇಕು ಎಂದು ನಿರ್ಧರಿಸಿದ್ದೆ. ಆದರೆ, ಆನಂದ್ ದಿಘೆ ಅವರು ನೀನು ಬೇರೆಯವರ ಕಣ್ಣೀರನ್ನು ಒರೆಸುವ ಕೆಲಸ ಮಾಡಬೇಕು, ಹೀಗೆಲ್ಲ ಕಣ್ಣೀರು ಹಾಕುತ್ತಾ ಕೂರಬಾರದು ಎಂದು ನನಗೆ ಧೈರ್ಯ ತುಂಬಿದರು. ನನ್ನ ರಾಜಕೀಯದ ಎಲ್ಲ ಗೆಲುವಿಗೆ ಆನಂದ್ ದಿಘೆ ಅವರೇ ಕಾರಣ. ಆನಂದ್ ದಿಘೆ ನನಗೆ ಮಕ್ಕಳ ಸಾವಿನ ಆಘಾತದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿದರು. ನನ್ನನ್ನು ವಿಧಾನಸಭೆಯಲ್ಲಿ ಶಿವಸೇನೆಯ ನಾಯಕನನ್ನಾಗಿ ಮಾಡಿದರು ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
CM @mieknathshinde gets emotional remembering the incident when he lost two of children and wanted to quit politics, but it was Anand Dighe who consoled him and brought him back in politics. pic.twitter.com/48wy8GNmKQ
— Singh Varun (@singhvarun) July 4, 2022
ಅದು ನನ್ನ ಜೀವನದ ಕರಾಳ ದಿನ. ಈ ಘಟನೆ ನಡೆದದ್ದು 2000ರ ಜೂನ್ 2ರಂದು. ಆಗ ನನ್ನೊಳಗೆ ಏನೂ ಉಳಿದಿರಲಿಲ್ಲ, ನಾನು ಮಾನಸಿಕವಾಗಿ ದಣಿದಿದ್ದೆ. ಆ ಸಮಯದಲ್ಲಿ ಆನಂದ್ ದಿಘೆ ಸಾಹೇಬರು ಪ್ರತಿದಿನ ನನ್ನ ಮನೆಗೆ ಬಂದು ನನ್ನೊಂದಿಗೆ ಮಾತನಾಡುತ್ತಿದ್ದರು. ತಾವು ಯಾವಾಗಲೂ ನನ್ನ ಹಿಂದೆ ಬೆಂಬಲವಾಗಿ ನಿಲ್ಲುವುದಾಗಿ ನನಗೆ ಭರವಸೆ ನೀಡಿದ್ದರು ಎಂದು ಏಕನಾಥ್ ಶಿಂಧೆ ಕಣ್ತುಂಬಿಕೊಂಡರು.
ಇದನ್ನೂ ಓದಿ: Maharashtra Floor Test Result 2022: ವಿಶ್ವಾಸಮತಯಾಚನೆಯಲ್ಲಿ ಗೆದ್ದು ಬೀಗಿದ ಏಕನಾಥ್ ಶಿಂಧೆ; ಸಿಎಂಗೆ 164 ಶಾಸಕರ ಬೆಂಬಲ
ಏಕನಾಥ್ ಶಿಂಧೆಯವರ ಹಿರಿಯ ಮಗ ಶಿವಸೇನೆಯ ಸಂಸದರಾಗಿದ್ದಾರೆ. ಅವರ ಇಬ್ಬರು ಮಕ್ಕಳು 2000ರಲ್ಲಿ ತಮ್ಮ ಗ್ರಾಮಕ್ಕೆ ಹೋದಾಗ ದೋಣಿ ಮುಳುಗಿ ಸಾವನ್ನಪ್ಪಿದ್ದರು. ಆಗ ಅವರ ಮಗನಿಗೆ 11 ವರ್ಷವಾಗಿತ್ತು. ಮಗಳಿಗೆ 7 ವರ್ಷವಾಗಿತ್ತು. ಆ ಕಹಿ ಘಟನೆಯಿಂದ ಅವರು ಹೊರಬರಲು ಬಹಳ ಸಮಯ ಬೇಕಾಯಿತು. ಅದಾದ ನಂತರ ಅವರು ಶಿವಸೇನೆಯ ಶಾಸಕರಾದರು.
Published On - 9:11 am, Tue, 5 July 22