ಯಮುನಾ ನದಿಗೆ ವಿಷ ಹಾಕಿದ ಅರವಿಂದ್ ಕೇಜ್ರಿವಾಲ್ ಆರೋಪಕ್ಕೆ ಸಾಕ್ಷಿ ಕೇಳಿದ ಚುನಾವಣಾ ಆಯೋಗ

ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಗೆ ಹರಿದುಬರುತ್ತಿರುವ 'ಯಮುನಾ ನದಿಗೆ ವಿಷಪ್ರಾಶನ' ಮಾಡಲಾಗುತ್ತಿದೆ ಎಂಬ ಹೇಳಿಕೆಯನ್ನು ನೀಡಿದ್ದರು. ಹರಿಯಾಣ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ಮಾಡಿದ್ದ ಆರೋಪದ ಕುರಿತು ಸಾಕ್ಷಿಗಳನ್ನು ನೀಡುವಂತೆ ಚುನಾವಣಾ ಆಯೋಗ ಪುರಾವೆ ಸಹಿತ ಉತ್ತರ ಕೋರಿದೆ.

ಯಮುನಾ ನದಿಗೆ ವಿಷ ಹಾಕಿದ ಅರವಿಂದ್ ಕೇಜ್ರಿವಾಲ್ ಆರೋಪಕ್ಕೆ ಸಾಕ್ಷಿ ಕೇಳಿದ ಚುನಾವಣಾ ಆಯೋಗ
Arvind Kejriwal

Updated on: Jan 28, 2025 | 10:07 PM

ನವದೆಹಲಿ: ಭಾರತೀಯ ಚುನಾವಣಾ ಆಯೋಗವು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದು, ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರದ ವಿರುದ್ಧ ಅವರು ಮಾಡಿರುವ ‘ಯಮುನಾ ವಿಷಪ್ರಾಶನ’ದ ಆರೋಪಕ್ಕೆ ಸಾಕ್ಷಿ ಕೇಳಿದೆ. ದೆಹಲಿಯಲ್ಲಿ ತೀವ್ರ ಚುನಾವಣಾ ಪ್ರಚಾರದ ನಡುವೆಯೂ ಬಿಜೆಪಿ ಮತ್ತು ಕಾಂಗ್ರೆಸ್​ನಿಂದ ಆಮ್ ಆದ್ಮಿ ಪಕ್ಷ ತೀವ್ರ ಟೀಕೆಗೆ ಗುರಿಯಾಗಿದೆ.

ಯಮುನಾ ನದಿಗೆ ವಿಷಪ್ರಾಶನ ಮತ್ತು ಸಾಮೂಹಿಕ ನರಮೇಧದ ಬಗ್ಗೆ ಅರವಿಂದ್ ಕೇಜ್ರಿವಾಲ್ ಮಾಡಿರುವ ಗಂಭೀರ ಆರೋಪಗಳನ್ನು ಸತ್ಯಗಳೊಂದಿಗೆ ಸಾಬೀತುಪಡಿಸುವಂತೆ ಚುನಾವಣಾ ಸಮಿತಿ ಕೇಳಿದೆ. ರಾಷ್ಟ್ರೀಯ ಏಕೀಕರಣ ಮತ್ತು ಸಾರ್ವಜನಿಕ ಸಾಮರಸ್ಯದ ವಿರುದ್ಧದ ದುರುದ್ದೇಶಪೂರಿತ ಹೇಳಿಕೆಗಳಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ವಿವಿಧ ಕಾನೂನು ನಿಬಂಧನೆಗಳನ್ನು ಚುನಾವಣಾ ಆಯೋಗ ಉಲ್ಲೇಖಿಸಿದೆ.

ಇದನ್ನೂ ಓದಿ: ರಾಬರ್ಟ್ ವಾದ್ರಾಗೆ ಬಿಜೆಪಿಯಿಂದ ಕ್ಲೀನ್ ಚಿಟ್ ಸಿಕ್ಕಿದ್ದು ಹೇಗೆ?; ರಾಹುಲ್ ಗಾಂಧಿಗೆ ಕೇಜ್ರಿವಾಲ್ ತಿರುಗೇಟು

ಚುನಾವಣಾ ಆಯೋಗವು ಜನವರಿ 29ರಂದು ರಾತ್ರಿ 8 ಗಂಟೆಯೊಳಗೆ ದೂರುಗಳಿಗೆ ವಾಸ್ತವಿಕ ಮತ್ತು ಕಾನೂನು ಮ್ಯಾಟ್ರಿಕ್ಸ್ ಮತ್ತು ಸಾಕ್ಷ್ಯಾಧಾರಗಳ ಕುರಿತು ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಅರವಿಂದ್ ಕೇಜ್ರಿವಾಲ್ ಅವರಿಗೆ ನಿರ್ದೇಶನ ನೀಡಿದೆ. ಇದರಿಂದಾಗಿ ಚುನಾವಣಾ ಆಯೋಗವು ವಿಷಯವನ್ನು ಪರಿಶೀಲಿಸಲು ಮತ್ತು ಸೂಕ್ತವಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.


ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಇಂದು ದೆಹಲಿ ಮುಖ್ಯಮಂತ್ರಿ ಅತಿಶಿಗೆ ಪತ್ರ ಬರೆದು, ಯಮುನಾ ನೀರಿನಲ್ಲಿ ವಿಷ ಬೆರೆಸಲಾಗುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ನರಮೇಧದ ಪ್ರಯತ್ನ ನಡೆಯುತ್ತಿದೆ ಎಂಬ ಕೇಜ್ರಿವಾಲ್ ಅವರ ಆರೋಪಗಳು ಅತ್ಯಂತ ಆಕ್ಷೇಪಾರ್ಹ ಮತ್ತು ದುರದೃಷ್ಟಕರ. ಇದು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತವೆ ಎಂದು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ