ಮಹಾಕುಂಭ ಕಾಲ್ತುಳಿತ, ಪ್ರಸ್ತುತ ಸ್ಥಿತಿ ಬಗ್ಗೆ ಸಿಎಂ ಯೋಗಿ ಬಳಿ ಮಾಹಿತಿ ಪಡೆದ ಪ್ರಧಾನಿ ಮೋದಿ
ಪ್ರಯಾಗರಾಜ್ ಮಹಾಕುಂಭದಲ್ಲಿ ತಡರಾತ್ರಿ ಕಾಲ್ತುಳಿತದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಅವರಿಂದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಪ್ರಧಾನಿ ಮೋದಿ ಅವರು ಬೆಳವಣಿಗೆಗಳನ್ನು ಪರಿಶೀಲಿಸಿದರು ಮತ್ತು ತಕ್ಷಣದ ಪರಿಹಾರ ಕ್ರಮಗಳಿಗೆ ಕರೆ ನೀಡಿದರು. ಕಳೆದ ಒಂದು ಗಂಟೆಯಲ್ಲಿ ಪ್ರಧಾನಿ ಮೋದಿ ಎರಡು ಬಾರಿ ಮಾತನಾಡಿದ್ದಾರೆ. ಇದಲ್ಲದೆ, ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರೊಂದಿಗೆ ಮಾತನಾಡಿದ್ದಾರೆ.
![ಮಹಾಕುಂಭ ಕಾಲ್ತುಳಿತ, ಪ್ರಸ್ತುತ ಸ್ಥಿತಿ ಬಗ್ಗೆ ಸಿಎಂ ಯೋಗಿ ಬಳಿ ಮಾಹಿತಿ ಪಡೆದ ಪ್ರಧಾನಿ ಮೋದಿ](https://images.tv9kannada.com/wp-content/uploads/2025/01/modi-2025-01-29t085019.213.jpg?w=1280)
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ತಡರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಹಲವರು ಗಾಯಗೊಂಡಿದ್ದಾರೆ. ಘಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕುಂಭಮೇಳದ ಪರಿಸ್ಥಿತಿಯ ಮೇಲೆ ಕಣ್ಣಿರಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಮಾತನಾಡಿ ಮಾಹಿತಿ ಪಡೆದಿದ್ದಾರೆ. ಒಂದು ಗಂಟೆಯಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಪ್ರಧಾನಿ ಮೋದಿಯವರು ಕುಂಭಮೇಳದ ವ್ಯವಸ್ಥೆಗಳ ಬಗ್ಗೆ ಬಹಳ ಜಾಗರೂಕರಾಗಿದ್ದು, ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಘಟನೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರದಿಂದ ಸಂಪೂರ್ಣ ನೆರವು ನೀಡುವುದಾಗಿ ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದರು.
ಅಮಿತ್ ಶಾ ಅವರು ಮುಖ್ಯಮಂತ್ರಿಯಿಂದ ದೂರವಾಣಿ ಮೂಲಕ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ರಾಜ್ಯ ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಕ್ತರು ಸಂಗಮದ ಮಧ್ಯ ಭಾಗಕ್ಕೆ ತೆರಳಬೇಡಿ, ಹತ್ತಿರದ ಘಾಟ್ನಲ್ಲಿ ಸ್ನಾನಮಾಡಿ ಎಂದು ಮನವಿ ಮಾಡಿದ್ದಾರೆ. ಆಡಳಿತ ನೀಡುವ ಸೂಚನೆಗಳನ್ನು ಪಾಲಿಸಿ ಆಡಳಿತಕ್ಕೆ ಸಹಕರಿಸುವಂತೆ ಮನವಿ ಮಾಡಿದರು. ಭಕ್ತರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಮತ್ತಷ್ಟು ಓದಿ: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ, ಹಲವು ಮಂದಿಗೆ ಗಂಭೀರ ಗಾಯ
ಮಹಾಕುಂಭದ ಎರಡನೇ ಅಮೃತ ಸ್ನಾನ ಇಂದು ಮೌನಿ ಅಮಾವಾಸ್ಯೆಯ ಮುನ್ನ ನಡೆಯುತ್ತಿತ್ತು, ಪ್ರಯಾಗರಾಜ್‌ನ ಸಂಗಮ ಪ್ರದೇಶದಲ್ಲಿ ತಡರಾತ್ರಿ ಕಾಲ್ತುಳಿತ ಸಂಭವಿಸಿದೆ. ಮೌನಿ ಅಮಾವಾಸ್ಯೆಗೆಂದು ಭಕ್ತರು ಆಗಮಿಸಿದ್ದರು. ಜನಜಂಗುಳಿ ಹೆಚ್ಚಾದ ಕಾರಣ ಬ್ಯಾರಿಕೇಡ್ಗಳನ್ನು ಮುರಿದು ಮಲಗಿದ್ದ ಭಕ್ತರ ಮೇಲೆ ಹತ್ತಿದ್ದರು .
ಎಲ್ಲಾ 13 ಅಖಾರಾಗಳ ಅಮೃತ ಸ್ನಾನವನ್ನು ರದ್ದುಗೊಳಿಸಲಾಗಿದೆ. ಗಾಯಾಳುಗಳಿಗೆ ಜಾತ್ರೆ ಪ್ರದೇಶದ ಸೆಕ್ಟರ್ 2ರ ಸೆಂಟ್ರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದ್ದರೂ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ