ಚುನಾವಣೆ ನಡೆಯಲಿರುವ ಪಂಚರಾಜ್ಯಗಳಲ್ಲಿ ಪ್ರಚಾರಸಭೆ, ರೋಡ್ ಶೋಗಳಿಗೆ ಹೇರಿದ್ದ ನಿರ್ಬಂಧ ಮತ್ತೆ ವಿಸ್ತರಣೆ; ಜ.31ರವರೆಗೂ ಇಲ್ಲ ಅವಕಾಶ
ಮೊದಲ ಹಂತದಲ್ಲಿ ಚುನಾವಣೆ ಎದುರಿಸಲಿರುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಜನವರಿ 28ರಿಂದ ತುಸು ರಿಯಾಯಿತಿ ನೀಡಲಾಗುವುದು. ಜನಮಿತಿಯಲ್ಲಿ ಅವರು ಸಾರ್ವಜನಿಕ ಸಭೆ ನಡೆಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಪಂಚರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಸಭೆಗಳು, ರೋಡ್ಶೋ, ರ್ಯಾಲಿಗಳು ಸೇರಿ ಭೌತಿಕ ಸಭೆಗಳಿಗೆ ಹೇರಲಾಗಿದ್ದ ನಿರ್ಬಂಧವನ್ನು ಚುನಾವಣಾ ಆಯೋಗ ಜನವರಿ 31ರವರೆಗೆ ವಿಸ್ತರಿಸಿದೆ. ಮೊಟ್ಟಮೊದಲು ಜನವರಿ 8ರಂದು ಸುದ್ದಿಗೋಷ್ಠಿ ನಡೆಸಿದ್ದ ಚುನಾವಣಾ ಆಯೋಗದ ಅಧಿಕಾರಿಗಳು ಐದು ರಾಜ್ಯಗಳಾದ ಗೋವಾ, ಮಣಿಪುರ, ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್ಗಳಲ್ಲಿ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿತ್ತು. ಆದರೆ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳೂ ಜನವರಿ 15ರವರೆಗೆ ರೋಡ್ ಶೋ, ಸಾರ್ವಜನಿಕ ಪ್ರಚಾರದ ನೆಪದಲ್ಲಿ ಜನರನ್ನು ಸೇರಿಸುವ, ಪ್ರಚಾರ ಸಭೆ, ರ್ಯಾಲಿಗಳನ್ನು ನಡೆಸುವಂತಿಲ್ಲ ಎಂದು ಹೇಳಿದ್ದರು. ನಂತರ ಜನವರಿ 15ರಂದು ಮತ್ತೊಮ್ಮೆ ಸಭೆ ನಡೆಸಿ, ನಿರ್ಬಂಧ ಅವಧಿಯನ್ನು ಜನವರಿ 22ರವರೆಗೆ ವಿಸ್ತರಣೆ ಮಾಡಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಚುನಾವಣಾ ಆಯೋಗದ ವಕ್ತಾರ, ವಿಧಾನಸಭೆ ಚುನಾವಣೆ ನಡೆಯಲಿರುವ ಪಂಚರಾಜ್ಯಗಳಲ್ಲಿ ಭೌತಿಕ ರ್ಯಾಲಿಗಳು ಮತ್ತು ರೋಡ್ ಶೋಗಳಿಗೆ ಹೇರಲಾಗಿದ್ದ ನಿಷೇಧವನ್ನು ಜನವರಿ 31ರವರೆಗೂ ವಿಸ್ತರಿಸಲಾಗಿದೆ. ಹಾಗಿದ್ದಾಗ್ಯೂ ಮೊದಲ ಹಂತದಲ್ಲಿ ಚುನಾವಣೆ ಎದುರಿಸಲಿರುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಜನವರಿ 28ರಿಂದ ತುಸು ರಿಯಾಯಿತಿ ನೀಡಲಾಗುವುದು. ಜನಮಿತಿಯಲ್ಲಿ ಅವರು ಸಾರ್ವಜನಿಕ ಸಭೆ ನಡೆಸಬಹುದು. ಮನೆಮನೆ ಪ್ರಚಾರಕ್ಕೆ ವಿಧಿಸಲಾಗಿದ್ದ ಜನಮಿತಿಯನ್ನು 5 ಜನರಿಂದ 10 ಜನರಿಗೆ ವಿಸ್ತರಿಸಲಾಗಿದೆ. ಗೊತ್ತುಪಡಿಸಿದ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರಕ್ಕಾಗಿ ವೀಡಿಯೊ ವ್ಯಾನ್‌ಗಳನ್ನು ಬಳಸುವುದನ್ನು ಅನುಮತಿಸಲಾಗಿದೆ ಎಂದು ಹೇಳಿದ್ದಾರೆ.
ECI extends ban on physical rallies and road shows till January 31, 2022. Relaxation for Physical public meetings of Political parties or contesting candidates for Phase 1 allowed from January 28, 2022 and for Phase 2 from February 1, 2022.(1/2)
— Spokesperson ECI (@SpokespersonECI) January 22, 2022
ಕಳೆದ ಬಾರಿ ಪರಿಶೀಲನೆ ಸಭೆ ನಡೆಸಿ, ಜನವರಿ 22ರವರೆಗೆ ನಿರ್ಬಂಧ ವಿಧಿಸಿದ್ದ ಚುನಾವಣಾ ಆಯೋಗ, ಆಗಲೇ ಒಂದಷ್ಟು ನಿಯಮಗಳನ್ನು ಸಡಿಲಿಸಿತ್ತು. ರಾಜಕೀಯ ಪಕ್ಷಗಳು ವರ್ಚ್ಯುವಲ್ ಆಗಿ ಬಹಿರಂಗ ಪ್ರಚಾರ ನಡೆಸಬಹುದು. ಆದರೆ ಒಳಾಂಗಣ ಸಭೆಗಳನ್ನು ಭೌತಿಕವಾಗಿಯೇ ನಡೆಸಬಹುದು. ಇದರಲ್ಲಿ ಸುಮಾರು 300 ಜನರು ಅಥವಾ ಸಭೆ ನಡೆಸುವ ಸಭಾಂಗಣದ ಶೇ.50ರಷ್ಟು ಸಾಮರ್ಥ್ಯ ಇರಬೇಕು ಎಂದು ಹೇಳಿತ್ತು. ಅಷ್ಟೇ ಅಲ್ಲ, ಇದಕ್ಕೂ ಮುಂದೆ ನಿರ್ಬಂಧ ಮುಂದುವರಿಸಬೇಕಾ? ಬೇಡವಾ ಎಂಬ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ದೇಶದ ಕೊವಿಡ್ 19 ಪರಿಸ್ಥಿತಿ ಬಗ್ಗೆ ಗಮನ ಇಟ್ಟುಕೊಂಡು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಚುನಾವಣಾ ಆಯೋಗದ ಮುಖ್ಯ ಆಯುಕ್ತರು ತಿಳಿಸಿದ್ದರು. ಅಷ್ಟೇ ಅಲ್ಲ, ಚುನಾವಣೆ ಮುಗಿದು ಮತ ಎಣಿಕೆಯ ಬಳಿಕ ಯಾವುದೇ ರಾಜಕೀಯ ಪಕ್ಷಗಳು ವಿಜಯೋತ್ಸವ ಆಚರಣೆ ಮಾಡುವಂತಿಲ್ಲ ಎಂಬ ಸ್ಪಷ್ಟ ಸಂದೇಶವನ್ನೂ ಚುನಾವಣಾ ಆಯೋಗ ನೀಡಿದೆ.
ಫೆ.10ರಿಂದ ಚುನಾವಣೆ ನಡೆಯಲಿದ್ದು, ಇದರಲ್ಲಿ ಉತ್ತರಪ್ರದೇಶದಲ್ಲಿ ಒಟ್ಟು ಏಳುಹಂತದಲ್ಲಿ ಮತದಾನ ನಡೆಯಲಿದೆ. ಇಲ್ಲಿ 403 ಕ್ಷೇತ್ರಗಳಿರುವ ಕಾರಣ ಒಟ್ಟು ಏಳು ಹಂತದಲ್ಲಿ ಚುನಾವಣೆ ನಡೆಸಲಿದೆ. ಮಣಿಪುರದಲ್ಲಿ ಎರಡು ಹಂತದಲ್ಲಿ ನಡೆಯಲಿದೆ. ಗೋವಾ, ಉತ್ತರಾಖಂಡ್ನಲ್ಲಿ ಫೆ.14ರಂದು ಒಂದೇ ಹಂತದಲ್ಲಿ ಮತ್ತು ಪಂಜಾಬ್ನಲ್ಲಿ ಫೆ.20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಐದೂ ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 10ರಂದು ಹೊರಬೀಳಲಿದೆ. ಆದರೆ ದೇಶದಲ್ಲಿ ಕೊವಿಡ್ 19 ಕೂಡ ಹೆಚ್ಚುತ್ತಿದ್ದು, ಒಂದು ದಿನದಲ್ಲಿ 3 ಲಕ್ಷಕ್ಕೂ ಅಧಿಕ ಕೇಸ್ಗಳು ದಾಖಲಾಗುತ್ತಿರುವುದು, ಚುನಾವಣಾ ಪ್ರಚಾರಗಳಿಗೆ ಅಡ್ಡಿಯಾಗುತ್ತಿದೆ.
Published On - 6:39 pm, Sat, 22 January 22