ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಬಗ್ಗೆ ಇಲಾನ್ ಮಸ್ಕ್ ಅಪಸ್ವರ; ಭಾರತದಲ್ಲಿ ಮತ್ತೆ ಶುರುವಾಯ್ತು ಇವಿಎಂ ವಾರ್

Elon Musk unhappy with use of EVMs for Elections: ವಿಶ್ವದ ಅತ್ಯಂತ ಸೃಜನಶೀಲ ಉದ್ಯಮಿಗಳಲ್ಲಿ ಒಬ್ಬರೆನಿಸಿರುವ ಇಲಾನ್ ಮಸ್ಕ್ ಅವರು ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್​ಗಳ ಬಗ್ಗೆ ಅಪಸ್ವರ ಎತ್ತಿದ್ದಾರೆ. ಪ್ಯೂರ್ಟೋ ರಿಕೋ ದೇಶದಲ್ಲಿ ನಡೆದ ಚುನಾವಣೆಯಲ್ಲಿ ಇವಿಎಂ ಅಕ್ರಮಗಳಾಗಿರುವ ಆರೋಪದ ಹಿನ್ನೆಲೆಯಲ್ಲಿ ಅವರು ವಿದ್ಯುನ್ಮಾನ ಮತಯಂತ್ರಗಳನ್ನು ದೂರ ಮಾಡಬೇಕು ಎನ್ನುವ ಸಲಹೆ ನೀಡಿದ್ದಾರೆ. ಇವರ ಈ ಹೇಳಿಕೆ ಭಾರತದಲ್ಲಿ ಇವಿಎಂ ಬಗ್ಗೆ ಮತ್ತೆ ಸಂವಾದ ಹುಟ್ಟುಹಾಕಿದೆ.

ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಬಗ್ಗೆ ಇಲಾನ್ ಮಸ್ಕ್ ಅಪಸ್ವರ; ಭಾರತದಲ್ಲಿ ಮತ್ತೆ ಶುರುವಾಯ್ತು ಇವಿಎಂ ವಾರ್
ಇವಿಎಂ

Updated on: Jun 16, 2024 | 2:36 PM

ನವದೆಹಲಿ, ಜೂನ್ 16: ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ (EVM) ಬಗ್ಗೆ ತಕರಾರು ಭಾರತದಲ್ಲಿ ಮಾತ್ರವಲ್ಲ ವಿಶ್ವದ ವಿವಿಧೆಡೆ ಇದೆ. ಎಲ್ಲೆಲ್ಲಿ ಇವಿಎಂ ಮೂಲಕ ಚುನಾವಣೆಯಲ್ಲಿ ಮತದಾನ ನಡೆಯುವ ವ್ಯವಸ್ಥೆ ಇದೆಯೋ ಅಲ್ಲೆಲ್ಲಾ ವಿರೋಧಗಳಿವೆ. ವಿಶ್ವದ ದೊಡ್ಡ ಉದ್ಯಮಿ ಇಲಾನ್ ಮಸ್ಕ್ (Elon Musk) ಅವರೂ ಈಗ ಇವಿಎಂ ಬಗ್ಗೆ ಅಪಸ್ವರ ಎತ್ತಿದ್ದಾರೆ. ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್​ಗಳನ್ನು ತೊಲಗಿಸಬೇಕು. ಈ ವಿದ್ಯುನ್ಮಾನ ಮತಯಂತ್ರಗಳನ್ನು ಮನುಷ್ಯರು ಅಥವಾ ಎಐನಿಂದ ಹ್ಯಾಕ್ ಮಾಡುವ ಅಪಾಯ ಹೆಚ್ಚಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿರುವ ರಾಬರ್ ಕೆನಡಿ ಜೂನಿಯರ್ ಅವರು ಪ್ಯೂರ್ಟೋ ರಿಕೋ ದೇಶದ ಚುನಾವಣೆಯಲ್ಲಿ ನಡೆದ ಇವಿಎಂ ಅಕ್ರಮಗಳ ಬಗ್ಗೆ ಎಕ್ಸ್​ನಲ್ಲಿ ಮಾಡಿದ ಪೋಸ್ಟ್​ಗೆ ಇಲಾನ್ ಮಸ್ಕ್ ಪ್ರತಿಕ್ರಿಯಿಸುತ್ತಾ, ಇವಿಎಂ ಯಂತ್ರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಸ್ಕ್ ಅವರ ಈ ಪೋಸ್ಟ್​ಗೆ ಭಾರತದ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ಪಂದಿಸಿ, ಭಾರತದ ವೋಟಿಂಗ್ ಮೆಷೀನ್​​ಗೂ ಬೇರೆ ಕಡೆಯ ಮೆಷೀನ್​ಗೂ ಇರುವ ವ್ಯತ್ಯಾಸವನ್ನು ತಿಳಿಹೇಳುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ಮುಂದಿನ 48 ಗಂಟೆಗಳಲ್ಲಿ ಮೂರನೇ ವಿಶ್ವಯುದ್ಧ ಆರಂಭ? ಸಂಚಲನ ಮೂಡಿಸಿದ ಭವಿಷ್ಯವಾಣಿ

‘ಇದು ಬಹಳ ಜನರಲೈಸ್ ಮಾಡಿ ನೀಡಿರುವ ಹೇಳಿಕೆಯಾಗಿದೆ. ಸುರಕ್ಷಿತವಾದ ಡಿಜಿಟಲ್ ಹಾರ್ಡ್​ವೇರ್ ಅನ್ನು ಯಾರೂ ನಿರ್ಮಿಸಲು ಸಾಧ್ಯವಿಲ್ಲ ಎಂದು ಅರ್ಥೈಸಿದಂತಾಗುತ್ತದೆ.

‘ಇಲಾನ್ ಮಸ್ಕ್ ಅವರ ಈ ಅಭಿಪ್ರಾಯವು, ಇಂಟರ್ನೆಟ್ ಜೋಡಿತ ವೋಟಿಂಗ್ ಮೆಷೀನ್ ನಿರ್ಮಿಸಲು ಸಾಮಾನ್ಯ ಗಣಕ ಪ್ಲಾಟ್​ಫಾರ್ಮ್​ಗಳನ್ನು ಬಳಸುವಂತಹ ಅಮೆರಿಕ ಹಾಗೂ ಇತರ ಸ್ಥಳಗಳಿಗೆ ಅನ್ವಯ ಆಗಬಹುದು.

‘ಆದರೆ, ಭಾರತದ ಇವಿಎಂಗಳನ್ನು ಯಾವುದೇ ನೆಟ್ವರ್ಕ್ ಅಥವಾ ಮೀಡಿಯಾದಿಂದ ಪ್ರತ್ಯೇಕಗೊಳಿಸಿ ನಿರ್ಮಿಸಲಾಗಿರುತ್ತದೆ. ಯಾವ ಕನೆಕ್ಟಿವಿಟಿ, ಬ್ಲೂಟೂತ್, ವೈಫೈ, ಇಂಟರ್ನೆಟ್ ಯಾವುದರ ಮೂಲಕವೂ ಅಕ್ಸೆಸ್ ಇರೋದಿಲ್ಲ. ರೀಪ್ರೋಗ್ರಾಮಿಂಗ್ ಮಾಡಲು ಸಾಧ್ಯವಿಲ್ಲದಂತಹ ಕಂಟ್ರೋಲರ್ಸ್ ಅನ್ನು ಇವು ಹೊಂದಿರುತ್ತವೆ’ ಎಂದು ರಾಜೀವ್ ಚಂದ್ರಶೇಖರ್ ಅವರು ಇಲಾನ್ ಮಸ್ಕ್ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ.

ಅಷ್ಟೇ ಅಲ್ಲ, ಭಾರತದಲ್ಲಿರುವಂತೆ ಇವಿಎಂ ಮೆಷೀನ್​ಗಳನ್ನು ಸರಿಯಾದ ರೀತಿಯಲ್ಲಿ ನಿರ್ಮಿಸಲು ಸಾಧ್ಯವಿದೆ. ಈ ವಿಚಾರದಲ್ಲಿ ಇಲಾನ್​ಗೆ ಪಾಠ ಮಾಡಲು ನಾವು ತಯಾರು ಎಂದೂ ಮಾಜಿ ಕೇಂದ್ರ ಸಚಿವರು ತಿಳಿಸಿದ್ದಾರೆ.

ಇದಕ್ಕೆ ಮಸ್ಕ್ ಕೂಡ ಪ್ರತಿಕ್ರಿಯಿಸಿ, ‘ಏನನ್ನೂ ಬೇಕಾದರೂ ಹ್ಯಾಕ್ ಮಾಡಬಹುದು’ ಎಂದು ಒನ್​ಲೈನರ್​ನಲ್ಲಿ ತಿಳಿಸಿದ್ದಾರೆ.

ರಾಜೀವ್ ಚಂದ್ರಶೇಖರ್ ಈ ಸಂವಾದ ಮುಂದುವರಿಸಿದ್ದು, ‘ತಾಂತ್ರಿಕವಾಗಿ ನೀವು ಸರಿ, ಏನು ಬೇಕಾದರೂ ಮಾಡಬಹುದು. ಉದಾಹರಣೆಗೆ, ಕ್ವಾಂಟಂ ಕಂಪ್ಯೂಟಿಂಗ್​ನಲ್ಲಿ ಯಾವ ಹಂತದ ಎನ್​ಕ್ರಿಪ್ಷನ್ ಇದ್ದರೂ ಅದನ್ನು ಡೀಕ್ರಿಪ್ಟ್ ಮಾಡಬಹುದು. ಜೆಟ್ ವಿಮಾನದ ಗಾಜಿನ ಕಾಕ್​ಪಿಟ್​ನ ಫ್ಲೈಟ್ ಕಂಟ್ರೋಲ್​ಗಳು ಸೇರಿದಂತೆ ಯಾವುದೇ ಡಿಜಿಟಲ್ ಹಾರ್ಡ್​ವೇರ್ ಅನ್ನು ನಾನು ಹ್ಯಾಕ್ ಮಾಡಬಹುದು. ಆದರೆ, ಅದು ಬೇರೆಯೇ ಸಂವಾದ ಆಗುತ್ತದೆ. ಪೇಪರ್ ವೋಟಿಂಗ್​ಗೆ ಹೋಲಿಸಿದರೆ ಇವಿಎಂಗಳು ಸುರಕ್ಷಿತವಾ ಎಂಬ ಚರ್ಚೆಗೆ ಅದು ಅಪ್ರಸ್ತುತ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಟ್ವಿಟ್ಟರ್ ಖರೀದಿಸಿದ ಮೊತ್ತಕ್ಕೆ ಟೆಸ್ಲಾದಲ್ಲಿ ಇಲಾನ್ ಮಸ್ಕ್​ಗೆ ಸಂಭಾವನೆ; ಷೇರುದಾರರಿಂದ ಒಪ್ಪಿಗೆ ಮುದ್ರೆ, ಇನ್ನೇನಿದ್ರೂ ಕೋರ್ಟ್ ಒಪ್ಪಿಗೆ ಬಾಕಿ

ಇವಿಎಂಗಳು ಬ್ಲ್ಯಾಕ್ ಬಾಕ್ಸ್: ರಾಹುಲ್ ಗಾಂಧಿ

‘ಭಾರತದಲ್ಲಿ ವಿದ್ಯುನ್ಮಾನ ಮತಯಂತ್ರಗಳು ಬ್ಲ್ಯಾಕ್ ಬಾಕ್ಸ್ ಇದ್ದಂತೆ. ಅವುಗಳನ್ನು ಪರಿಶೀಲಿಸಲು ಯಾರಿಗೂ ಅನುಮತಿ ಇರುವುದಿಲ್ಲ. ನಮ್ಮ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಗಂಭೀರ ಸ್ವರೂಪದ ಆರೋಪಗಳು ಕೇಳಿಬರುತ್ತಿವೆ. ಸಾಂಸ್ಥಿಕ ಪಾರದರ್ಶತೆ ಇಲ್ಲದಾಗ ಪ್ರಜಾತಂತ್ರ ವ್ಯವಸ್ಥೆಗೆ ದುರ್ಗತಿಯೇ ಕಾದಿರುತ್ತದೆ’ ಎಂದು ರಾಹುಲ್ ಗಾಂಧಿ ಎಕ್ಸ್ ಪೋಸ್ಟ್ ಹಾಕಿದ್ದಾರೆ.

ಮುಂಬೈನಲ್ಲಿ ಶಿವಸೇನಾ ಅಭ್ಯರ್ಥಿ ಮಂಗೇಶ್ ಪಾಂಡಲಿಕರ್ ಎಂಬುವವರು ತಮ್ಮ ಮೊಬೈಲ್ ಫೋನ್ ಬಳಸಿ ಇವಿಎಂ ಮೆಷೀನ್ ಅನ್ನು ತೆರೆದರು ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ತನಿಖೆ ವೇಳೆ ಈ ವಿಚಾರವನ್ನು ಬೆಳಕಿಗೆ ತಂದಿದ್ದಾರೆ ಎಂದು ಹೇಳಲಾಗುತ್ತಿರುವ ಪ್ರಕರಣವೊಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸುದ್ದಿಯ ಪೇಪರ್ ಕ್ಲಿಪ್ ಅನ್ನು ರಾಹುಲ್ ಗಾಂಧಿ ತಮ್ಮ ಪೋಸ್ಟ್​ನಲ್ಲಿ ಲಗತ್ತಿಸಿದ್ದಾರೆ. ಇಲಾನ್ ಮಸ್ಕ್ ಅವರ ಆ ಪೋಸ್ಟ್​ಗೆ ಪೂರಕವಾಗಿ ರಾಹುಲ್ ಗಾಂಧಿ ಈ ಪೋಸ್ಟ್ ಹಾಕಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ