ಸನಾತನ ಧರ್ಮ ಕುರಿತ ವಿವಾದಾತ್ಮಕ ಹೇಳಿಕೆ; ಸಚಿವ ಉದಯನಿಧಿ ಸ್ಟಾಲಿನ್ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

|

Updated on: Nov 22, 2024 | 4:19 PM

ತಮಿಳುನಾಡು ಯುವಜನ ಕಲ್ಯಾಣ ಮತ್ತು ಕ್ರೀಡಾ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಉದಯನಿಧಿ ಸ್ಟಾಲಿನ್ ಖ್ಯಾತ ಚಲನಚಿತ್ರ ನಟರೂ ಆಗಿದ್ದಾರೆ. 2023ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಸಮ್ಮೇಳನದಲ್ಲಿ ಭಾಷಣ ಮಾಡಿ ವಿವಾದಕ್ಕೆ ಸಿಲುಕಿದ್ದರು. ತಮ್ಮ ಭಾಷಣದಲ್ಲಿ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮ ಕೊರೊನಾ ರೋಗವಿದ್ದಂತೆ ಎಂದು ಹೇಳಿದ್ದರು.

ಸನಾತನ ಧರ್ಮ ಕುರಿತ ವಿವಾದಾತ್ಮಕ ಹೇಳಿಕೆ; ಸಚಿವ ಉದಯನಿಧಿ ಸ್ಟಾಲಿನ್ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
ಉದಯನಿಧಿ ಸ್ಟಾಲಿನ್
Follow us on

ನವದೆಹಲಿ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಕುರಿತಾದ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಅವರ ವಿರುದ್ಧ ದಾಖಲಾಗಿರುವ ಅನೇಕ ಎಫ್‌ಐಆರ್‌ಗಳನ್ನು ಕ್ರೋಢೀಕರಿಸಲು ಕೋರಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಮುಂದೂಡಿದೆ. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆಯನ್ನು 2025ರ ಫೆಬ್ರವರಿಗೆ ಮರು ನಿಗದಿಪಡಿಸಿದೆ.

ತಮಿಳುನಾಡಿನ ಯುವಜನ ಕಲ್ಯಾಣ ಮತ್ತು ಕ್ರೀಡಾ ಸಚಿವ ಹಾಗೂ ನಟನೂ ಆಗಿರುವ ಉದಯನಿಧಿ ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿ ಮತ್ತು ಆಡಳಿತಾರೂಢ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಅವರ ಪುತ್ರನೂ ಹೌದು. ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ತಮ್ಮ “ಸನಾತನ ಧರ್ಮವನ್ನು ನಿರ್ಮೂಲನೆ ಮಾಡಿ” ಎಂಬ ಹೇಳಿಕೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಅನೇಕ ಎಫ್‌ಐಆರ್‌ಗಳನ್ನು ಸಂಯೋಜಿಸುವಂತೆ ಕೋರಿ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ಮುಂದೂಡಿದೆ.

ಇದನ್ನೂ ಓದಿ: ‘ಕಾದು ನೋಡೋಣ’: ‘ಸನಾತನ ಧರ್ಮ’ ಹೇಳಿಕೆ ಬಗ್ಗೆ ಪವನ್ ಕಲ್ಯಾಣ್ ಟೀಕೆಗೆ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯೆ

ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿರುದ್ಧವಾದುದು ಎಂದಿದ್ದ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು “ಕೊರೊನಾವೈರಸ್, ಮಲೇರಿಯಾ ಮತ್ತು ಡೆಂಗ್ಯೂ” ನಂತಹ ಕಾಯಿಲೆಗಳಿಗೆ ಹೋಲಿಸಿದ್ದರು. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಈ ಹೇಳಿಕೆಗೆ ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಾದ್ಯಂತ ಅನೇಕ ಎಫ್‌ಐಆರ್‌ಗಳು ದಾಖಲಿಸಲಾಗಿತ್ತು.

ವಿಚಾರಣಾ ನ್ಯಾಯಾಲಯಗಳ ಮುಂದೆ ದೈಹಿಕವಾಗಿ ಹಾಜರಾಗುವುದರಿಂದ ರಾಜಕಾರಣಿ ಉದಯನಿಧಿ ಸ್ಟಾಲಿನ್​ಗೆ ವಿನಾಯಿತಿ ನೀಡುವ ಮಧ್ಯಂತರ ಆದೇಶವು ಮುಂದಿನ ಆದೇಶದವರೆಗೆ ಮುಂದುವರಿಯುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನೂ ಓದಿ: 16 ಮಕ್ಕಳನ್ನು ಹೊಂದುವಂತೆ ಜನತೆಗೆ ಮನವಿ ಮಾಡಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್

ಏನಿದು ಘಟನೆ?:

2023ರ ಸೆಪ್ಟೆಂಬರ್​ 4ರಂದು ಚೆನ್ನೈನ ತೇನಂಪೇಟೆಯಲ್ಲಿ ನಡೆದಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಹಾಗೂ ಕೊರೋನಾ ಇದ್ದಂತೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿರುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದನ್ನು ಹಿಂದೂ ಸಂಘಟನೆಗಳು ಖಂಡಿಸಿದ್ದವು. ಈ ಕುರಿತು ಕೇಸ್ ದಾಖಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ