ಕೊರೊನಾ ಲಸಿಕೆ ಖರೀದಿ ನೀತಿಯಲ್ಲಿ ಬದಲಾವಣೆ: ಸರ್ಕಾರಕ್ಕೆಷ್ಟು ವೆಚ್ಚ? ಕಂಪನಿಗಳ ಆದಾಯ ಎಷ್ಟು ಖೋತಾ? ಇಲ್ಲಿದೆ ಲೆಕ್ಕಾಚಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 08, 2021 | 4:36 PM

ಈಗ ಕೇಂದ್ರ ಸರ್ಕಾರ ಲಸಿಕೆ ಖರೀದಿಗೆ ಎಷ್ಟು ಹಣ ಖರ್ಚು ಮಾಡಬೇಕು? ಕೇಂದ್ರ ಸರ್ಕಾರಕ್ಕೆ ಕಡಿಮೆ ಬೆಲೆಯಲ್ಲಿ ಲಸಿಕೆ ಪೂರೈಸುವುದರಿಂದ ಲಸಿಕಾ ಕಂಪನಿಗಳಿಗೆ ಆಗುವ ನಷ್ಟ ಎಷ್ಟು? ಇದರ ಸಂಪೂರ್ಣ ವಿವರವನ್ನು ನಾವು ಈ ಬರಹದಲ್ಲಿ ನೀಡಿದ್ದೇವೆ.

ಕೊರೊನಾ ಲಸಿಕೆ ಖರೀದಿ ನೀತಿಯಲ್ಲಿ ಬದಲಾವಣೆ: ಸರ್ಕಾರಕ್ಕೆಷ್ಟು ವೆಚ್ಚ? ಕಂಪನಿಗಳ ಆದಾಯ ಎಷ್ಟು ಖೋತಾ? ಇಲ್ಲಿದೆ ಲೆಕ್ಕಾಚಾರ
ಪ್ರಾತಿನಿಧಿಕ ಚಿತ್ರ
Follow us on

ಭಾರತದ ಕೊರೊನಾ ಲಸಿಕಾ ನೀತಿಯಲ್ಲಿ ಬದಲಾವಣೆ ಆಗಿದೆ. ಜೂನ್ 21ರಿಂದ ಕೇಂದ್ರ ಸರ್ಕಾರವೇ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಖರೀದಿಸಿ ಪೂರೈಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಕೇಂದ್ರ ಸರ್ಕಾರವೇ ನೇರವಾಗಿ ಲಸಿಕಾ ಕಂಪನಿಗಳಿಂದ ಲಸಿಕೆ ಖರೀದಿಯಿಂದ ಲಸಿಕೆಯ ಮೇಲಿನ ಹಣದ ವೆಚ್ಚ ಕಡಿಮೆಯಾಗುತ್ತೆ. ಹಾಗಾದರೇ, ಈಗ ಕೇಂದ್ರ ಸರ್ಕಾರ ಲಸಿಕೆ ಖರೀದಿಗೆ ಎಷ್ಟು ಹಣ ಖರ್ಚು ಮಾಡಬೇಕು? ಕೇಂದ್ರ ಸರ್ಕಾರಕ್ಕೆ ಕಡಿಮೆ ಬೆಲೆಯಲ್ಲಿ ಲಸಿಕೆ ಪೂರೈಸುವುದರಿಂದ ಲಸಿಕಾ ಕಂಪನಿಗಳಿಗೆ ಆಗುವ ನಷ್ಟ ಎಷ್ಟು? ಇದರ ಸಂಪೂರ್ಣ ವಿವರವನ್ನು ನಾವು ಈ ಬರಹದಲ್ಲಿ ನೀಡಿದ್ದೇವೆ.

ನಮ್ಮ ಭಾರತದಲ್ಲಿ ಮೇ 1ರಿಂದ ಜಾರಿಯಲ್ಲಿದ್ದ ಉದಾರೀಕರಣದ ಕೊರೊನಾ ಲಸಿಕಾ ಖರೀದಿ ನೀತಿಯು ಈಗ ಒಂದೇ ತಿಂಗಳಿಗೆ ಬದಲಾಗಿದೆ. ಈಗ ಮತ್ತೆ ಹಳೆ ವ್ಯವಸ್ಥೆಯೇ ಪುನಃ ಜಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಜೂನ್ 7) ಘೋಷಿಸಿದ್ದಾರೆ. ದೇಶದಲ್ಲಿ ಲಸಿಕಾ ಕಂಪನಿಗಳಿಂದ ಉತ್ಪಾದನೆಯಾಗುವ ಲಸಿಕೆಗಳ ಪೈಕಿ ಮುಕ್ಕಾಲು ಪಾಲು (ಶೇ 75) ಕೇಂದ್ರ ಸರ್ಕಾರವೇ ಖರೀದಿಸಿ ರಾಜ್ಯ ಸರ್ಕಾರಗಳಿಗೆ ಪೂರೈಸಲಿದೆ. ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ಸಿಗಲಿದೆ. ದೇಶದಲ್ಲಿ ಲಸಿಕಾ ಕಂಪನಿಗಳಿಂದ ಕೊರೊನಾ ಲಸಿಕೆಯ ಖರೀದಿಯ ಸಂಪೂರ್ಣ ಹೊಣೆಯನ್ನು ತಾನೇ ಹೊತ್ತುಕೊಳ್ಳುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಸುಮಾರು ಹತ್ತು ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರವೇ ಕೊರೊನಾ ಲಸಿಕೆಯನ್ನು ಖರೀದಿಸಿ, ರಾಜ್ಯಗಳಿಗೆ ಪೂರೈಕೆ ಮಾಡಲಿ ಎಂದು ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದಿದ್ದರು.

ಸುಪ್ರೀಂಕೋರ್ಟ್ ಕೂಡ 18 ವರ್ಷ ಮೇಲ್ಪಟ್ಟವರಿಗೆ ರಾಜ್ಯ ಸರ್ಕಾರಗಳು ತಮ್ಮ ಬೊಕ್ಕಸದಿಂದ ಹಣ ನೀಡಿ ಲಸಿಕೆ ಖರೀದಿಸಿ ನೀಡುವ ನೀತಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಜೊತೆಗೆ ಲಸಿಕೆಯ ಬೆಲೆಯ ವಿಷಯದಲ್ಲಿ ಕೇಂದ್ರಕ್ಕೊಂದು ಬೆಲೆ, ರಾಜ್ಯ ಸರ್ಕಾರಗಳಿಗೆ ದುಬಾರಿ ಬೆಲೆ ವಿಧಿಸುತ್ತಿರುವುದನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿತ್ತು. ಎಲ್ಲ ರಾಜ್ಯಗಳಿಗೂ ಕೇಂದ್ರ ಸರ್ಕಾರವೇ ಏಕೆ ಲಸಿಕೆ ಖರೀದಿಸಿ ಪೂರೈಸಬಾರದು? ರಾಜ್ಯ, ಕೇಂದ್ರ ಸರ್ಕಾರಕ್ಕೆ ಪ್ರತೇಕ ಲಸಿಕಾ ಬೆಲೆ ನೀತಿ ಹಾಗೂ ಖರೀದಿಯು ತಾರತಮ್ಯದಿಂದ ಕೂಡಿದೆ. ಬಜೆಟ್​ನಲ್ಲಿ ಲಸಿಕೆ ಖರೀದಿಗೆ ಹಂಚಿಕೆ ಮಾಡಿರುವ 35 ಸಾವಿರ ಕೋಟಿ ರೂಪಾಯಿ ಹಣವನ್ನು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಖರೀದಿಸಲು ಏಕೆ ನೀಡಬಾರದು? 18 ವರ್ಷ ಮೇಲ್ಪಟ್ಟವರು ಸೇರಿದಂತೆ ಎಲ್ಲರಿಗೂ ಲಸಿಕೆ ನೀಡಿಕೆಯು ಕೇಂದ್ರ ಸರ್ಕಾರದ ಪ್ರಾಥಮಿಕ ಜವಾಬ್ದಾರಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಜೂನ್ 2 ರಂದು ತರಾಟೆಗೆ ತೆಗೆದುಕೊಂಡಿತ್ತು.

18 ವರ್ಷ ಮೇಲ್ಟಟ್ಟವರಿಗೆ ಲಸಿಕೆಯನ್ನು ಶೀಘ್ರಗತಿಯಲ್ಲಿ ಭಾರತ್ ಬಯೋಟೆಕ್, ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಪೂರೈಸಲು ಸಾಧ್ಯವಿಲ್ಲ ಎಂದು ಗೊತ್ತಾದ ಮೇಲೆ ರಾಜ್ಯ ಸರ್ಕಾರಗಳು ಲಸಿಕೆ ಪೂರೈಕೆಗೆ ಜಾಗತಿಕ ಟೆಂಡರ್ ಕರೆದಿದ್ದವು. ಆದರೆ, ಜಾಗತಿಕ ಟೆಂಡರ್​ಗೆ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರವೇ ಮೊದಲಿನಂತೆ ಲಸಿಕೆಯನ್ನು ಖರೀದಿಸಿ ಪೂರೈಸಲಿ ಎಂದು ಪಟ್ಟು ಹಿಡಿದಿದ್ದವು. ಹೀಗಾಗಿ ಜೂನ್ 21ರಿಂದ ಕೇಂದ್ರ ಸರ್ಕಾರವೇ ಉತ್ಪಾದನೆಯಾದ ಲಸಿಕೆಯ ಪೈಕಿ ಶೇ 75 ರಷ್ಟು ಲಸಿಕೆಯನ್ನು ಖರೀದಿಸಿ ರಾಜ್ಯ ಸರ್ಕಾರಗಳಿಗೆ ಪೂರೈಸಲಿದೆ.

ಆದರೇ, ಈಗ ಕೇಂದ್ರ ಸರ್ಕಾರವೇ ಲಸಿಕೆಯನ್ನು ಖರೀದಿಸಿ ರಾಜ್ಯಗಳಿಗೆ ಪೂರೈಸುವುದರಿಂದ ಕೇಂದ್ರ ಸರ್ಕಾರಕ್ಕೆ ಲಸಿಕೆ ಖರೀದಿಗೆ ಎಷ್ಟು ವೆಚ್ಚ ಮಾಡಬೇಕಾಗುತ್ತೆ? ಕೇಂದ್ರ ಸರ್ಕಾರವು ಯಾವ ದರದಲ್ಲಿ ಲಸಿಕೆ ಖರೀದಿ ಮಾಡುತ್ತೆ ಎನ್ನುವ ವಿವರವನ್ನು ನಾವು ಈಗ ನೀಡುತ್ತೇವೆ.

ಕೊವಿಶೀಲ್ಡ್​ ಮತ್ತು ಕೊವ್ಯಾಕ್ಸಿನ್​ ಲಸಿಕೆ

ಕೇಂದ್ರ ಸರ್ಕಾರದಿಂದ ಪ್ರತಿ ಡೋಸ್​ಗೆ ₹150 ದರದಲ್ಲಿ ಖರೀದಿ
ಇದುವರೆಗೂ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಹಾಗೂ ಭಾರತ್ ಬಯೋಟೆಕ್ ಕಂಪನಿಗಳೆರಡೂ ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್​ಗೆ ₹ 150 ದರದಲ್ಲಿ ಲಸಿಕೆ ಪೂರೈಸುತ್ತಿವೆ. ಇದೇ ದರವನ್ನು ಇನ್ನು ಮುಂದೆಯೂ ಮುಂದುವರಿಸಬಹುದು. ಕೇಂದ್ರ ಸರ್ಕಾರ ಹೆಚ್ಚಿನ ಪ್ರಮಾಣದ ಲಸಿಕೆ ಖರೀದಿಸುವುದರಿಂದ ಹಳೆಯ, ಕಡಿಮೆ ಬೆಲೆಗೆ ಲಸಿಕೆ ಪೂರೈಸಿ ಎಂದು ಎರಡು ಕಂಪನಿಗಳ ಜೊತೆಗೆ ಚೌಕಾಸಿ ಮಾಡಲು ಕೇಂದ್ರ ಸರ್ಕಾರಕ್ಕೆ ಅವಕಾಶ ಇದೆ. ಜೊತೆಗೆ ಹೈದರಾಬಾದ್ ಬಯೋಜಿಕಲ್ ಇ ಕಂಪನಿಯು ಕೂಡ ತನ್ನ ಪ್ರತಿ ಡೋಸ್ ಲಸಿಕೆಯನ್ನು 200 ರೂಪಾಯಿಗೆ ಮಾರುವುದಾಗಿ ಹೇಳಿದೆ. ಮುಂದಿನ ದಿನಗಳಲ್ಲಿ ಈ ಕಂಪನಿಯೂ ಲಸಿಕೆಯ ದರವನ್ನು ಪ್ರತಿ ಡೋಸ್​ಗೆ ₹ 150ಕ್ಕೆ ಇಳಿಸಬಹುದು. ಆದರೇ, ಕಳೆದ ಮೇ ತಿಂಗಳಿನಲ್ಲಿ ರಾಜ್ಯ ಸರ್ಕಾರಗಳಿಗೆ ಎಸ್‌ಐಐ ಪ್ರತಿ ಡೋಸ್​ಗೆ ₹ 300 ಹಾಗೂ ಭಾರತ್ ಬಯೋಟೆಕ್ ₹ 400 ದರದಲ್ಲಿ ಲಸಿಕೆ ಪೂರೈಸುತ್ತಿದ್ದವು.

ಕೇಂದ್ರಕ್ಕಾಗುವ ವೆಚ್ಚ ಎಷ್ಟು?
ದೇಶದಲ್ಲಿ 18 ವರ್ಷ ಮೇಲ್ಪಟ್ಟ ₹ 94 ಕೋಟಿ ಜನರಿದ್ದಾರೆ. 94 ಕೋಟಿ ಜನರಿಗೆ 2 ಡೋಸ್​ನಂತೆ ಲಸಿಕೆ ನೀಡಲು 188 ಕೋಟಿ ಡೋಸ್ ಲಸಿಕೆ ಬೇಕು. ಇದುವರೆಗೂ ದೇಶದಲ್ಲಿ 23.3 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ನಮ್ಮ ದೇಶದಲ್ಲಿ ಇನ್ನೂ 164.7 ಕೋಟಿ ಡೋಸ್ ಲಸಿಕೆ ನೀಡುವುದು ಬಾಕಿ ಇದೆ. ಪ್ರತಿ ಡೋಸ್​ಗೆ ₹ 150ರಂತೆ 164 ಕೋಟಿ ಡೋಸ್​ ನೀಡಲು ₹ 24,705 ಕೋಟಿ ವೆಚ್ಚವಾಗುತ್ತದೆ. ಶೇ 75 ರಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರವೇ ಖರೀದಿಸಿದರೇ ಇದಕ್ಕೆ ₹ 18,528 ಕೋಟಿ ಬೇಕು.

ಈ ಲೆಕ್ಕಾಚಾರದ ಪ್ರಕಾರ, ಕೇಂದ್ರ ಸರ್ಕಾರವೇ ಶೇ 75 ರಷ್ಟು ಕೊರೊನಾ ಲಸಿಕೆ ಖರೀದಿಸಿ ರಾಜ್ಯಗಳಿಗೆ ಪೂರೈಸಿದರೆ, ಕೇಂದ್ರ ಸರ್ಕಾರ ₹18,528 ಕೋಟಿ ಖರ್ಚು ಮಾಡಬೇಕಾಗುತ್ತೆ. ಇದರಲ್ಲಿ ಈಗಾಗಲೇ ಪೂರೈಸಿರುವ ಲಸಿಕೆಗೆ ನೀಡಿರುವ ಹಣ ಸೇರಿಲ್ಲ್ಲ. ಕಳೆದ ಫೆಬ್ರುವರಿ 1ರಂದು ಮಂಡಿಸಿದ ಬಜೆಟ್​ನಲ್ಲಿ ಕೇಂದ್ರ ಸರ್ಕಾರವು ಲಸಿಕೆ ಖರೀದಿಗೆ ₹ 35 ಸಾವಿರ ಕೋಟಿ ಹಣ ಮೀಸಲಿಟ್ಟಿದೆ. ಈ ಹಣದಿಂದಲೇ ಮುಂದಿನ ದಿನಗಳಲ್ಲಿಯೂ ಲಸಿಕೆ ಖರೀದಿಸಲಾಗುವುದು. ₹ 35 ಸಾವಿರ ಕೋಟಿ ರೂಪಾಯಿ ಹಣದಲ್ಲೇ ದೇಶದ ಎಲ್ಲರಿಗೂ ಲಸಿಕೆ ಖರೀದಿಸಿ ನೀಡಬಹುದು ಎಂದು ಆರ್ಥಿಕ ತಜ್ಞರು ಕೂಡ ಹೇಳುತ್ತಿದ್ದಾರೆ. ಇದುವರೆಗೂ ಕೇಂದ್ರ ಸರ್ಕಾರವು ಲಸಿಕಾ ಕಂಪನಿಗಳಿಗೆ ನೀಡಿರುವ ಮುಂಗಡ ಹಣ ಸೇರಿದಂತೆ ಲಸಿಕೆ ಖರೀದಿಗೆ ₹ 5 ಸಾವಿರ ಕೋಟಿ ಮಾತ್ರ ಖರ್ಚು ಮಾಡಿದೆ. ಕೇಂದ್ರದ ಬಳಿ ಲಸಿಕೆ ಖರೀದಿಗಾಗಿ ಮೀಸಲಿಟ್ಟಿರುವ ₹ 30 ಸಾವಿರ ಕೋಟಿ ರೂಪಾಯಿ ಹಣ ಇದೆ. ಲಸಿಕೆ ಖರೀದಿಗೆ ಹೆಚ್ಚಿನ ಹಣದ ಅಗತ್ಯವಿದ್ದರೇ, ನೀಡಲು ಸಿದ್ಧ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮುಂದಿನ ತಿಂಗಳುಗಳಲ್ಲಿ 2-18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಸಂದರ್ಭ ಬರಬಹುದು. ಆಗ ಬಾಕಿ ಉಳಿಯುವ ಹಣವನ್ನು ಮಕ್ಕಳ ಲಸಿಕೆ ನೀಡಿಕೆಗೆ ಬಳಸಿಕೊಳ್ಳಬಹುದು.

ಕೊವಿಡ್ ಲಸಿಕೆ

ಕೇಂದ್ರ ಕೇಳಿದ ಬೆಲೆಗೆ ಲಸಿಕೆ ನೀಡಿದರೆ ಕಂಪನಿಗಳಿಗೆ ನಷ್ಟವೇ?
ಕೇಂದ್ರ ಸರ್ಕಾರದ ಹೊಸ ಕೊರೊನಾ ಲಸಿಕೆ ಖರೀದಿ ನೀತಿಯಿಂದ ಲಸಿಕಾ ಉತ್ಪಾದಕ ಕಂಪನಿಗಳಿಗೆ ನಷ್ಟವಾಗಬಹುದು ಎನ್ನಲಾಗುತ್ತಿದೆ. ಏಕೆಂದರೆ ಲಸಿಕಾ ಕಂಪನಿಗಳು ಮೇ ತಿಂಗಳಿನಲ್ಲಿ ಕೇಂದ್ರಕ್ಕೆ ವಿಧಿಸುತ್ತಿದ್ದ ಲಸಿಕಾ ದರದ ಎರಡು ಪಟ್ಟು, ಮೂರು ಪಟ್ಟು ದರವನ್ನು ರಾಜ್ಯ ಸರ್ಕಾರಗಳಿಗೆ ವಿಧಿಸುತ್ತಿದ್ದವು. ಪುಣೆಯ ಸೆರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಪ್ರತಿ ಡೋಸ್​ಗೆ ₹ 300 ರೂಪಾಯಿ ದರದಲ್ಲಿ ಲಸಿಕೆಯನ್ನ ರಾಜ್ಯ ಸರ್ಕಾರಗಳಿಗೆ ಪೂರೈಸುತ್ತಿತ್ತು. ಅಂದರೆ, ಕೇಂದ್ರಕ್ಕೆ ಪೂರೈಸುತ್ತಿದ್ದ ಲಸಿಕೆ ದರದ ಎರಡು ಪಟ್ಟು ಹೆಚ್ಚಿನ ಬೆಲೆಗೆ ಲಸಿಕೆ ಪೂರೈಸುತ್ತಿತ್ತು. ಇನ್ನೂ ಭಾರತ್ ಬಯೋಟೆಕ್ ಕಂಪನಿಯು ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್​ಗೆ ₹ 400ರ ದರದಲ್ಲಿ ಲಸಿಕೆ ಪೂರೈಸುತ್ತಿತ್ತು. ಆದರೆ, ಈಗ ಈ ಎರಡು ಕಂಪನಿಗಳಿಗೂ ಪ್ರತಿ ಡೋಸ್ ಗೆ 150 ರೂಪಾಯಿ ದರದಲ್ಲೇ ಲಸಿಕೆಯನ್ನು ಕೇಂದ್ರ ಸರ್ಕಾರಕ್ಕೆ ಪೂರೈಸಬೇಕಾಗಿದೆ.

ಇನ್ನೂ ಸೆರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್​ಐಐ) ಕಂಪನಿಯು ತನ್ನ ಕೊವಿಶೀಲ್ಡ್ ಲಸಿಕೆಯನ್ನು ಪ್ರತಿ ಡೋಸ್​ಗೆ ₹ 150ರ ದರದಲ್ಲಿ ಕೇಂದ್ರಕ್ಕೆ ಪೂರೈಸುವುದರಿಂದ ತಿಂಗಳಿಗೆ ₹ 26.25 ಕೋಟಿ ರೂಪಾಯಿ ಆದಾಯ ನಷ್ಟ ಅನುಭವಿಸಲಿದೆ. ಎಸ್ಐಐ ಪ್ರತಿ ತಿಂಗಳು ಈಗ 7 ಕೋಟಿ ಡೋಸ್ ಲಸಿಕೆ ಉತ್ಪಾದಿಸುತ್ತಿದೆ. ಇದರಲ್ಲಿ ಶೇ 25ರಷ್ಟನ್ನು ರಾಜ್ಯಗಳಿಗೆ ಪೂರೈಸಲು ಕೇಂದ್ರ ಸರ್ಕಾರದ ಲಸಿಕಾ ಉದಾರೀಕರಣ ಖರೀದಿ ನೀತಿಯಡಿ ಅವಕಾಶ ನೀಡಿತ್ತು. ಪ್ರಸ್ತುತ ಎಸ್‌ಐಐ ತಿಂಗಳಿಗೆ ಉತ್ಪಾದಿತ್ತಿರುವ 7 ಕೋಟಿ ಡೋಸ್ ಪೈಕಿ ಶೇ 25 ರಷ್ಟು ಲಸಿಕೆ ಅಂದರೇ, 1.75 ಕೋಟಿ ಡೋಸ್ ಆಗುತ್ತೆ. 1.75 ಕೋಟಿ ಡೋಸ್ ಲಸಿಕೆಯನ್ನು ಪ್ರತಿ ಡೋಸ್​ಗೆ ₹ 300ರ ಬದಲು, ₹ 150ರ ದರದಲ್ಲೇ ಕೇಂದ್ರ ಸರ್ಕಾರಕ್ಕೆ ಮಾರುವುದರಿಂದ ಸೆರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾಗೆ ತಿಂಗಳಿಗೆ ₹ 26.25 ಕೋಟಿ ರೂಪಾಯಿ ಆದಾಯದ ನಷ್ಟವಾಗುತ್ತದೆ.

ಭಾರತ್ ಬಯೋಟೆಕ್ ಕಂಪನಿಯು ಪ್ರತಿ ತಿಂಗಳು ಎಷ್ಟು ಡೋಸ್ ಲಸಿಕೆ ಉತ್ಪಾದಿಸುತ್ತೆ ಎಂಬ ಬಗ್ಗೆ ನಿಖರವಾದ ಮಾಹಿತಿಯನ್ನ ನೀಡಿಲ್ಲ. ಒಮ್ಮೆ ಈಗ ತಿಂಗಳಿಗೆ 90 ಲಕ್ಷ ಡೋಸ್ ಉತ್ಪಾದಿಸುತ್ತಿರುವುದಾಗಿ ಹೇಳಿದದೆ ಮತ್ತೊಮ್ಮೆ ಜೂನ್ ತಿಂಗಳಲ್ಲಿ 4 ಕೋಟಿ ಡೋಸ್ ಲಸಿಕೆಯನ್ನು ಪೂರೈಸುವುದಾಗಿ ಹೇಳಿದೆ. ಭಾರತ್ ಬಯೋಟೆಕ್ ಕಂಪನಿಯು ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್​ಗೆ ₹ 400ರ ದರದಲ್ಲಿ ಲಸಿಕೆ ಪೂರೈಸುತ್ತಿತ್ತು. ಈಗ ಕೇಂದ್ರ ಸರ್ಕಾರಕ್ಕೆ 150 ರೂಪಾಯಿ ದರದಲ್ಲಿ ಪೂರೈಸುವುದರಿಂದ ಒಂದು ಡೋಸ್ ಲಸಿಕೆಗೆ ₹ 250 ನಷ್ಟವಾಗುತ್ತೆ. ಭಾರತ್ ಬಯೋಟೆಕ್ ಜೂನ್ ತಿಂಗಳಲ್ಲಿ ಉತ್ಪಾದಿಸುವ 4 ಕೋಟಿ ಡೋಸ್ ಪೈಕಿ, ಶೇ 25ರಷ್ಟು ಅಂದರೆ, 1 ಕೋಟಿ ಡೋಸ್ ಲಸಿಕೆಯನ್ನು ರಾಜ್ಯಗಳಿಗೆ ಪೂರೈಸಿದೆ. ಹೀಗಾಗಿ ಭಾರತ್ ಬಯೋಟೆಕ್ ಕಂಪನಿಗೆ ತಿಂಗಳಿಗೆ ₹ 35 ಕೋಟಿ ರೂಪಾಯಿಗೂ ಹೆಚ್ಚು ಆದಾಯ ನಷ್ಟ ಸಂಭವಿಸಲಿದೆ.

ಲಸಿಕಾ ಕಂಪನಿಗಳಿಗೆ ಪ್ರತಿ ಡೋಸ್ ಲಸಿಕೆಯನ್ನ ಉತ್ಪಾದಿಸಲು ₹ 150 ರೂಪಾಯಿಗಿಂತ ಕಡಿಮೆ ವೆಚ್ಚವಾಗುತ್ತದೆ ಎಂಬ ವಿಶ್ಲೇಷಣೆಗಳು ಚಾಲ್ತಿಗೆ ಬಂದಿವೆ. ಕೊರೊನಾ ಲಸಿಕೆ ಉತ್ಪಾದಿಸುವ ಕಂಪನಿಗಳು ಸಾಂಕ್ರಾಮಿಕದ ವೇಳೆಯಲ್ಲೂ ಭಾರಿ ಆದಾಯ ಗಳಿಸುತ್ತಿವೆ ಎಂಬ ಟೀಕೆಯೂ ಇದೆ. ಆದರೆ, ಲಸಿಕೆಯ ಬೆಲೆ ಏರಿಕೆಯನ್ನು ಈ ಹಿಂದೆ ಭಾರತ್ ಬಯೋಟೆಕ್ ಸಮರ್ಥಿಸಿಕೊಂಡಿತ್ತು.

(Explainer in Kannada on Coronavirus Vaccination in India How Much Govt Spends Loss or Profit for Covid Vaccine Companies)