ಬಾಂಗ್ಲಾ ವಿಮೋಚನಾ ಯುದ್ಧವೆಂದೇ 1971ರ ಭಾರತ-ಪಾಕ್ ಸಂಘರ್ಷವು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಯುದ್ಧದ ಆರಂಭದ ದಿನಗಳು ನಿಮಗೆ ನೆನಪಿರಬಹುದು. ಡಿಸೆಂಬರ್ 3ರಂದು ಪಾಕಿಸ್ತಾನದ ಯುದ್ಧವಿಮಾನಗಳು ಭಾರತೀಯ ವಾಯುನೆಲೆಗಳ ಮೇಲೆ ಅಚಾನಕ್ ದಾಳಿ ನಡೆಸಿದ್ದವು. ಇದಕ್ಕೆ ಉತ್ತರ ನೀಡಲೆಂದು ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಪಡೆ ಡಿಸೆಂಬರ್ 4ರಂದು ದಾಳಿ ನಡೆಸಿತು.
ಕಮಾಂಡರ್ ಬಬ್ರು ಭಾನ್ ಯಾದವ್ ನೇತೃತ್ವದಲ್ಲಿ ಗುಜರಾತ್ನ ಓಖಾ ಬಂದರಿನಿಂದ ಹೊರಟ ಮೂರು ಯುದ್ಧನೌಕೆಗಳು ಕರಾಚಿ ಬಂದರಿನ ಮೇಲೆ ದಿಗ್ಬಂಧನ ಹೇರುವಲ್ಲಿ ಯಶಸ್ವಿಯಾದವು. ಮಾತ್ರವಲ್ಲ, ಪಾಕಿಸ್ತಾನದ ಹಡಗುಗಳನ್ನು ಮುಳುಗಿಸಿದವು. ಪಾಕಿಸ್ತಾನದ ಯುದ್ಧನೌಕೆಗಳಾದ ಖೈಬರ್, ಮುಹಫಿಜ್ ಮತ್ತು ಎಂವ ವೀನಸ್ ಚಾಲೆಂಜರ್ಗಳು ಸಮುದ್ರದ ತಳ ಸೇರಿದವು. ಬಂದರಿನಲ್ಲಿದ್ದ ತೈಲ ದಾಸ್ತಾನು ನಾಶಪಡಿಸಲಾಯಿತು. ಪಾಕ್ ನೌಕಾಪಡೆಯ ನೂರಾರು ಯೋಧರು ಹತರಾದರು.
‘ಆಪರೇಷನ್ ಟ್ರಿಡೆಂಟ್’ ಹೆಸರಿನ ಈ ಕಾರ್ಯಾಚರಣೆಯಲ್ಲಿ ಭಾರತದ ಪಾಳಯದಲ್ಲಿ ಯಾವುದೇ ಜೀವನಷ್ಟವಾಗಲಿಲ್ಲ. ಯುದ್ಧೋಪಕರಣಗಳಿಗೂ ಹಾನಿಯಾಗಲಿಲ್ಲ ಎನ್ನುವುದು ಉಲ್ಲೇಖನೀಯ ಅಂಶ.
ಭಾರತೀಯ ನೌಕಾಪಡೆ ನಡೆಸಿದ ಈ ಯಶಸ್ವಿ ದಾಳಿಯ ನೆನಪಿನಲ್ಲಿ ಪ್ರತಿವರ್ಷ ಡಿಸೆಂಬರ್ ತಿಂಗಳ ಮೊದಲ ಶುಕ್ರವಾರವನ್ನು ನೌಕಾಪಡೆ ದಿನವನ್ನಾಗಿ ಆಚರಿಸಲಾಗುತ್ತದೆ. ಮುಂಬೈನ ಗೇಟ್ವೇ ಆಫ್ ಇಂಡಿಯಾದಲ್ಲಿ ನೌಕಾಪಡೆಯು ಬೀಟಿಂಗ್ ರಿಟ್ರೀಟ್ ನೀಡುತ್ತದೆ. ದೇಶ ರಕ್ಷಣೆಗೆಗಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿರುವ ನೌಕಾಪಡೆಯ ಯೋಧರ ಸಮರ್ಪಣಾ ಮನೋಭಾವ, ತ್ಯಾಗ ಮತ್ತು ಬಲಿದಾನವನ್ನು ಈ ದಿನ ನೆನೆಯಲಾಗುತ್ತದೆ.
ಇದನ್ನೂ ಓದಿ: ನೌಕಾಪಡೆಯಲ್ಲಿ ನಾರಿ ಶಕ್ತಿಯ ಪತಾಕೆ: ಯುದ್ಧನೌಕೆಗಳಲ್ಲಿ ಮಹಿಳಾ ಸಿಬ್ಬಂದಿ ನಿಯೋಜನೆ
"On the occasion of #NavyDay2020 we reaffirm #IndianNavy's steadfast commitment to the service of the Nation and towards ensuring our Maritime Security & Territorial Integrity"
Admiral Karambir Singh, Chief of the Naval Staff & all personnel of Indian Navy pic.twitter.com/t6LWHUyvjm— SpokespersonNavy (@indiannavy) December 4, 2020
ನೌಕಾಪಡೆ ದಿನ 2020ರ ಘೋಷವಾಕ್ಯವೇನು?
‘ಯುದ್ಧ ಸನ್ನದ್ಧ, ವಿಶ್ವಾಸಾರ್ಹ ಮತ್ತು ಸಹಬಾಳ್ವೆ’ (Indian Navy Combat Ready, Credible and Cohesive) ಎನ್ನುವುದು ಈ ವರ್ಷದ ಘೋಷವಾಕ್ಯ. ನೌಕಾಪಡೆ ದಿನಾಚರಣೆ ಪ್ರಯುಕ್ತ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ಕರಮ್ಬೀರ್ ಸಿಂಗ್ ಭಾರತೀಯ ನೌಕಾಪಡೆಯು ಕೋವಿಡ್-19 ಸಂಕಷ್ಟ ಮತ್ತು ಚೀನಾದಿಂದ ಎದುರಾಗಿಸುವ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.
ನೌಕಾಪಡೆ ಸಿಬ್ಬಂದಿ, ನೌಕೆಗಳ ಸಂಖ್ಯೆಯೆಷ್ಟು?
ಜೂನ್ 2019ರ ಮಾಹಿತಿ ಪ್ರಕಾರ ಭಾರತೀಯ ನೌಕಾಪಡೆಯಲ್ಲಿ 67,252 ಸಕ್ರಿಯ ಮತ್ತು 55,000 ಮೀಸಲು ಸಿಬ್ಬಂದಿ ಇದ್ದಾರೆ. 150 ಹಡಗು-ಸಬ್ಮರೀನ್ಗಳು, 300 ವಿಮಾನಗಳಿವೆ.
ಇದನ್ನೂ ಓದಿ: ಗಲ್ವಾನ್ ಘರ್ಷಣೆ ಬಳಿಕ.. ಚೀನಾ ಬುಡಕ್ಕೆ ಬೆಂಕಿ ಇಡಲು ಮುಂದಾಗಿತ್ತು ಭಾರತೀಯ ನೌಕಾಪಡೆ
ಭಾರತಕ್ಕೆ ನೌಕಾಪಡೆಯ ಪ್ರಾಮುಖ್ಯತೆ
ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದಿಂದ ಸುತ್ತುವರಿದಿರುವ ಭಾರತ ಉಪಖಂಡದ ರಕ್ಷಣೆಯಲ್ಲಿ ನೌಕಾಪಡೆಯ ಪಾತ್ರ ಹಿರಿದು. ಗಾಲ್ವಾನ್ ಸಂಘರ್ಷದ ನಂತರ ಹಿಂದೂ ಮಹಾಸಾಗರದಲ್ಲಿ ಚೀನಾ ಚಟುವಟಿಕೆಗಳಿಗೆ ಕಡಿವಾಣ ಹಾಕುವತ್ತ ನೌಕಾಪಡೆ ಹೆಚ್ಚು ಗಮನ ಹರಿಸಿತು. ಚೀನಾ ಸರ್ಕಾರ ಸಂಧಾನದಲ್ಲಿ ಭಾರತದ ಷರತ್ತುಗಳನ್ನು ಪರಿಗಣಿಸುವಂತೆ ಮಾಡುವಲ್ಲಿ ಈ ತಂತ್ರದ ಫಲವೂ ಇದೆ. ಚೀನಾದ ತೈಲ ಸರಬರಾಜಿಗೆ ಅತಿಮುಖ್ಯ ಜಲಮಾರ್ಗವಾದ ಹಿಂದೂ ಮಹಾಸಾಗರ ಮತ್ತು ಮಲಕ್ಕಾ ಜಲಸಂಧಿಯಲ್ಲಿ ತನಗೆ ಪಾರಮ್ಯವಿದೆ ಎಂಬ ಸಂದೇಶವನ್ನು ಹಲವು ಬಾರಿ ಭಾರತೀಯ ನೌಕಾಪಡೆ ನೀಡಿತ್ತು.
ರಕ್ಷಣಾ ಕಾರ್ಯಾಚರಣೆಯಲ್ಲಿಯೂ ಭಾರತೀಯ ನೌಕಾಪಡೆ ಸಕ್ರಿಯಪಾತ್ರ ನಿರ್ವಹಿಸುತ್ತಿದೆ. ಕೋವಿಡ್-19 ಬಿಗಡಾಯಿಸಿದ ಸಂದರ್ಭದಲ್ಲಿ ಹಲವು ದೇಶಗಳಿಂದ ಭಾರತೀಯರನ್ನು ಕರೆತರಲು ಆಪರೇಷನ್ ಸಮುದ್ರ ಸೇತು ಕಾರ್ಯಾಚರಣೆ ನಡೆಸಿತ್ತು. ಚಂಡಮಾರುತ ಸೇರಿದಂತೆ ನೈಸರ್ಗಿಕ ವಿಕೋಪಗಳಲ್ಲಿಯೂ ನೌಕಾಪಡೆ ಜನರ ರಕ್ಷಣೆಗೆ ಧಾವಿಸುತ್ತಿದೆ.
ಇದನ್ನೂ ಓದಿ: ಜಲಮಾರ್ಗದಿಂದ ನುಸುಳಲು ಪಾಕ್ ಯತ್ನ; ನೌಕಾಪಡೆ ಹೈಅಲರ್ಟ್
Navy Day greetings to all our valorous navy personnel and their families. The Indian navy fearlessly protects our coasts and also renders humanitarian assistance in times of need. We also remember India’s rich maritime tradition over centuries. pic.twitter.com/k2PMgvc0F3
— Narendra Modi (@narendramodi) December 4, 2020
ನೌಕಾಪಡೆ ಸಿಬ್ಬಂದಿಗೆ ಶುಭ ಕೋರಿದ ಮೋದಿ
ನೌಕಾಪಡೆ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೌಕಾಪಡೆ ಸಿಬ್ಬಂದಿಗೆ ಶುಭ ಕೋರಿ ಟ್ವೀಟ್ ಮಾಡಿದ್ದಾರೆ.
‘ನೌಕಾಪಡೆಯ ಎಲ್ಲ ಸಿಬ್ಬಂದಿ, ಅವರ ಕುಟುಂಬಗಳಿಗೆ ಈ ದಿನದಂದು ಶುಭ ಕೋರುತ್ತೇನೆ. ದೇಶದ ಸಾಗರ ಗಡಿಗಳನ್ನು ನೌಕಾಪಡೆ ನಿರ್ಭಯವಾಗಿ ರಕ್ಷಿಸುತ್ತಿದೆ. ಅಗತ್ಯಬಿದ್ದಾಗ ಮಾನವೀಯ ನೆಲೆಗಟ್ಟಿನಲ್ಲಿ ನೆರವಾಗುತ್ತಿದೆ. ಶತಮಾನಗಳಿಂದಲೂ ಚಾಲ್ತಿಯಲ್ಲಿರುವ ನೌಕಾಪಡೆಯ ಶ್ರೀಮಂತ ಪರಂಪರೆಯನ್ನು ನಾವು ಸ್ಮರಿಸುತ್ತೇವೆ’ ಎಂದು ಮೋದಿ ಹೇಳಿದ್ದಾರೆ.