ಅಂದಾಜು GDP ಮೈನಸ್ ಶೇಕಡಾ 7.5ಕ್ಕೆ ಏರಿಕೆ ಮಾಡಿದ ಆರ್ಬಿಐ
ಈ ಬಗ್ಗೆ ಇಂದು ಮಾತನಾಡಿರುವ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್, 2020 ನಮಗೆ ಒಂದು ಸವಾಲಿನ ವರ್ಷವಾಗಿತ್ತು. ಆದರೆ, ಭಾರತದ ಆರ್ಥಿಕ ಚಟುವಟಿಕೆ ನಾವು ಅಂದುಕೊಂಡಿದ್ದಕ್ಕಿಂತಲೂ ಉತ್ತಮವಾಗಿ ಚೇತರಿಕೆ ಕಾಣುತ್ತಿದೆ ಎಂದರು.
ಮುಂಬೈ: 2020-21ನೇ ಹಣಕಾಸು ವರ್ಷದ ಒಟ್ಟು ದೇಶಿಯ ಉತ್ಪಾದನೆ (ಜಿಡಿಪಿ) ಅಂದಾಜನ್ನು ಕೇಂದ್ರ ಹಣಕಾಸು ಸಂಸ್ಥೆ (ಆರ್ಬಿಐ) ಶೇ. ಮೈನಸ್ 9.5 ಇಂದ ಶೇ. 7.5ಕ್ಕೆ ಏರಿಕೆ ಮಾಡಿದೆ. ಆರ್ಥಿಕ ಚಟುವಟಿಕೆಯಲ್ಲಿ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಬೆಳವಣಿಗೆ ಕಾಣುತ್ತಿರುವುದರಿಂದ ಆರ್ಬಿಐ ಈ ಘೋಷಣೆ ಮಾಡಿದೆ.
ಈ ಬಗ್ಗೆ ಇಂದು ಮಾತನಾಡಿರುವ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್, “2020 ನಮಗೆ ಒಂದು ಸವಾಲಿನ ವರ್ಷವಾಗಿತ್ತು. ಇದರಿಂದ ಹೊರಬರುವುದು ನಮ್ಮ ಮುಂದಿರುವ ದೊಡ್ಡ ಚಾಲೆಂಜ್. ಆದರೆ, ಭಾರತದ ಆರ್ಥಿಕ ಚಟುವಟಿಕೆ ನಾವು ಅಂದುಕೊಂಡಿದ್ದಕ್ಕಿಂತಲೂ ಉತ್ತಮವಾಗಿ ಚೇತರಿಕೆ ಕಾಣುತ್ತಿದೆ. ಹೀಗಾಗಿ ಈ ಮೊದಲು ನಿಗದಿ ಮಾಡಿದ್ದ ಜಿಡಿಪಿ ಅಂದಾಜನ್ನು ಶೇ -9.5 ಇಂದ -7.5ಕ್ಕೆ ಏರಿಕೆ ಮಾಡುತ್ತಿದ್ದೇವೆ,” ಎಂದು ಅವರು ತಿಳಿಸಿದರು. ಅಕ್ಟೋಬರ್ ತಿಂಗಳಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಆರ್ಬಿಐ, 2020-21ರ ಅಂದಾಜು ಜಿಡಿಪಿಯನ್ನು -9.5 ಎಂದು ನಿಗದಿ ಮಾಡಿತ್ತು.
ರೆಪೊ ದರದಲ್ಲಿ ಇಲ್ಲ ಬದಲಾವಣೆ:
ನಾಲ್ಕನೇ ತ್ರೈಮಾಸಿಕದ ಆರಂಭದಲ್ಲಿ ಆರ್ಬಿಐ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದೆ. ಹೀಗಾಗಿ ರೆಪೊ ದರ ಯಾವುದೇ ಬದಲಾವಣೆ ಕಾಣದೆ ಶೇ.4 ಇದೆ. ಇನ್ನು ಹಿಮ್ಮುಖ ರೆಪೊ ದರ ಕೂಡ ಯಾವುದೆ ಬದಲಾವಣೆ ಕಾಣದೆ ಶೇ. 3.35ರಲ್ಲೇ ಉಳಿದುಕೊಂಡಿದೆ.
ಪಾತಾಳಕ್ಕೆ ಕುಸಿದಿರುವ ಜಿಡಿಪಿ:
ಕೊರೋನಾ ವೈರಸ್ ಕಾಣಿಸಿಕೊಂಡ ನಂತರ ಕೇಂದ್ರ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿತ್ತು. ಇದರಿಂದ ಎಲ್ಲಾ ಆರ್ಥಿಕ ಚಟುವಟಿಕೆಗಳು ನಿಂತಿದ್ದವು. ಇದು ಆರ್ಥಿಕತೆಗೆ ಭಾರೀ ಹೊಡೆತ ನೀಡಿತ್ತು. ಪರಿಣಾಮ 2019-20ರ ಜಿಡಿಪಿ ದರ ಪಾತಾಳಕ್ಕೆ ಕುಸಿದಿದೆ. ಭಾರತದ ಜಿಡಿಪಿ ದರ ಕಳೆದ ಆರ್ಥಿಕ ವರ್ಷದಲ್ಲಿ ಶೇ. -23.ಕ್ಕೆ ಆಗಿತ್ತು.
ಏರಿಕೆ ಕಂಡ ಸೆನ್ಸೆಕ್ಸ್:
ಆರ್ಬಿಐ ಮಹತ್ವದ ಘೋಷಣೆ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡಿದೆ. ಬೆಳಗ್ಗೆ 11 ಗಂಟೆಗೆ ಸೆನ್ಸೆಕ್ಸ್ 300ಕ್ಕೂ ಅಂಕ ಏರಿಕೆ ಕಾಣುವ ಮೂಲಕ ಇದೇ ಮೊದಲ ಬಾರಿಗೆ 45 ಸಾವಿರದ ಅಂಕ ದಾಟಿತ್ತು. ಇನ್ನು ನಿಫ್ಟಿ 73 ಅಂಕ ಏರಿಕೆ ಕಂಡು 13,207 ಗಡಿ ತಲುಪಿದೆ.