ಪಂಜಾಬ್ನ ನವಾನ್ ಶಹರ್ನ ಪೊಲೀಸ್ ಕ್ಯಾಂಪಸ್ನಲ್ಲಿ ನಿಗೂಢ ಸ್ಫೋಟ; ಉಗ್ರರ ಕೈವಾಡದ ಶಂಕೆ
ಪಂಜಾಬ್ ರಾಜ್ಯಾದ್ಯಂತ ಕಳೆದ ಕೆಲ ವರ್ಷಗಳಿಂದ ಉಗ್ರರ ಹಾವಳಿ ಗಣನೀಯವಾಗಿ ಹೆಚ್ಚಾಗಿದೆ. ಇದೇ ವರ್ಷ ಆಗಸ್ಟ್ 8ರಂದು ಅಮೃತ್ಸರ್ನ ಒಂದು ಹಳ್ಳಿಯಲ್ಲಿ 5 ಹ್ಯಾಂಡ್ ಗ್ರೆನೇಡ್ ಮತ್ತು ಒಂದು ಟಿಫಿನ್ ಬಾಕ್ಸ್ ಬಾಂಬ್ನ್ನುಅಲ್ಲಿನ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದರು.
ಪಂಜಾಬ್ನ ನವಾನ್ ಶಹರ್ನ ಪೊಲೀಸ್ ಅಪರಾಧ ತನಿಖಾ ವಿಭಾಗ (CIA)ದ ಠಾಣೆಯ ಕ್ಯಾಂಪಸ್ನಲ್ಲಿ ರವಿವಾರ ಸಂಜೆಯ ವೇಳೆ ನಿಗೂಢವಾಗಿ ಸ್ಫೋಟ ಸಂಭವಿಸಿದ್ದಾಗಿ ಪಂಜಾಬ್ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪೊಲೀಸ್ ಆಫೀಸ್ನ ಒಳಗೆ ಸ್ಫೋಟಕವನ್ನು ಎಸೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಫೋಟದ ಪರಿಣಾಮ ಅತ್ಯಂತ ದೊಡ್ಡದಾಗಿ ಶಬ್ದವಾಗಿದೆ. ಅದೃಷ್ಟವಶಾತ್ ಯಾವುದೇ ಹೆಚ್ಚಿನ ಮಟ್ಟದ ಹಾನಿಯಾಗಿಲ್ಲ. ಯಾರ ಜೀವಕ್ಕೂ ಅಪಾಯವಾಗಿಲ್ಲ ಎಂದು ಹೇಳಲಾಗಿದೆ.
ಸ್ಫೋಟಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸರು ತನಿಖೆಯನ್ನು ಶುರು ಮಾಡಿದ್ದಾರೆ. ವಿಧಿವಿಜ್ಞಾನ ತಂಡದ ಸಹಾಯವನ್ನೂ ತೆಗೆದುಕೊಂಡಿದ್ದಾರೆ. ಆದರೆ ಈ ಹೊತ್ತಿನವರೆಗೆ ಸ್ಫೋಟದ ಹಿಂದಿನ ಕಾರಣ, ಸ್ಫೋಟಕವನ್ನು ಪೊಲೀಸ್ ಕ್ಯಾಂಪಸ್ನ ಒಳಗೆ ಎಸೆದವರು ಯಾರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೂಡ ಪೊಲೀಸರು ನೀಡಿಲ್ಲ.
ಉಗ್ರರ ಉಪಟಳದಲ್ಲಿ ಹೆಚ್ಚಳ ಪಂಜಾಬ್ ರಾಜ್ಯಾದ್ಯಂತ ಕಳೆದ ಕೆಲ ವರ್ಷಗಳಿಂದ ಉಗ್ರರ ಹಾವಳಿ ಗಣನೀಯವಾಗಿ ಹೆಚ್ಚಾಗಿದೆ. ಇದೇ ವರ್ಷ ಆಗಸ್ಟ್ 8ರಂದು ಅಮೃತ್ಸರ್ನ ಒಂದು ಹಳ್ಳಿಯಲ್ಲಿ 5 ಹ್ಯಾಂಡ್ ಗ್ರೆನೇಡ್ ಮತ್ತು ಒಂದು ಟಿಫಿನ್ ಬಾಕ್ಸ್ ಬಾಂಬ್ನ್ನುಅಲ್ಲಿನ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದರು. ಅದಾದ ಕೆಲವೇ ದಿನಗಳ ಬಳಿಕ ಅಂದರೆ ಅಗಸ್ಟ್ 20ರಂದು ಪಾಗ್ವಾರದಲ್ಲಿ ಒಂದು ಟಿಫಿನ್ ಬಾಕ್ಸ್ ಬಾಂಬ್, ಎರಡು ಗ್ರನೇಡ್ಗಳು ಮತ್ತು ಇತರ ಕೆಲವು ಮಾದರಿಯ ಸ್ಫೋಟಕಗಳು ಪತ್ತೆಯಾಗಿತ್ತು. ಅಜ್ನಾಲಾದಿಂದಲೂ ಒಂದು ಟಿಫಿನ್ ಬಾಕ್ಸ್ ಬಾಂಬ್ನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಈಗ ನಡೆದ ಸ್ಫೋಟದ ಹಿಂದೆ ಉಗ್ರರ ಕೈವಾಡ ಇದೆಯಾ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಇದು ಭಯೋತ್ಪಾದಕ ಚಟುವಟಿಕೆಯೇ ಆಗಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದ ಬಗ್ಗೆ ಪ್ರಾದೇಶಿಕ ಭದ್ರತಾ ಸಂವಾದ ಆಯೋಜಿಸಿರುವ ಭಾರತ; ಪಾಕ್ ತಿರಸ್ಕಾರಕ್ಕೆ ಕೇಂದ್ರ ಸರ್ಕಾರದ ಉತ್ತರವೇನು?