ಅಫ್ಘಾನಿಸ್ತಾನದ ಬಗ್ಗೆ ಪ್ರಾದೇಶಿಕ ಭದ್ರತಾ ಸಂವಾದ ಆಯೋಜಿಸಿರುವ ಭಾರತ; ಪಾಕ್ ತಿರಸ್ಕಾರಕ್ಕೆ ಕೇಂದ್ರ ಸರ್ಕಾರದ ಉತ್ತರವೇನು?
ಪಾಕಿಸ್ತಾನ ಆಮಂತ್ರಣ ತಿರಸ್ಕಾರ ಮಾಡಿದ ಬಗ್ಗೆ ಭಾರತ ಸ್ವಲ್ಪವೂ ತಲೆಕೆಡಿಸಿಕೊಂಡಿಲ್ಲ. ಇದು ನಿರೀಕ್ಷತವೇ ಆಗಿದೆ ಎಂದು ದೆಹಲಿ ಸರ್ಕಾರದ ಮೂಲಗಳು ತಿಳಿಸಿವೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾಗಿ ಮೂರು ತಿಂಗಳಾಗಿದೆ. ಇದೀಗ ಭಾರತ ಅಲ್ಲಿನ ಪರಿಸ್ಥಿತಿ, ಬೆಳವಣಿಗೆಗಳ ಬಗ್ಗೆ ಚರ್ಚಿಸುವ ಸಲುವಾಗಿ ದೆಹಲಿ ಪ್ರಾದೇಶಿಕ ಭದ್ರತಾ ಸಂವಾದ ನಡೆಸಲು ಮುಂದಾಗಿದ್ದು, ಈ ಸಂವಾದ ನವೆಂಬರ್ 10-11ರಂದು ದೆಹಲಿಯಲ್ಲಿ ನಡೆಯಲಿದೆ. ಅಂದಹಾಗೆ ದೆಹಲಿ ಪ್ರಾದೇಶಿಕ ಭದ್ರತಾ ಸಂವಾದ ಎಂಬುದು ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಯಾಗಿದ್ದು, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಭಾರತ ಈ ಸಂವಾದ ಆಯೋಜಿಸಲು ಕಾರಣವೇನು? ಅಫ್ಘಾನಿಸ್ತಾನ ಭಾರತದ ನೆರೆ ರಾಷ್ಟ್ರಗಳಲ್ಲಿ ಒಂದು. ಹಾಗೇ ಅಲ್ಲಿ ತಾಲಿಬಾನ್ ಆಡಳಿತಕ್ಕೆ ಬರುವುದಕ್ಕೂ ಮೊದಲು ಭಾರತ ಅಫ್ಘಾನಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಿತ್ತು. ಅಲ್ಲಿ ತಾಲಿಬಾನ್ ಸರ್ಕಾರ ಶುರುವಾದ ನಂತರ ಕೂಡ ಭಾರತ ಪದೇಪದೆ ಒಂದೇ ಆತಂಕ ವ್ಯಕ್ತಪಡಿಸುತ್ತಿದೆ. ಅದೆಂದರೆ ಅಫ್ಘಾನಿಸ್ತಾನದ ನೆಲ ಉಗ್ರ ಚಟುವಟಿಕೆಗಳಿಗೆ ಬಳಕೆ ಆಗದಿರಲಿ ಎಂದು ಈಗಾಗಲೇ ಕೆಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಆಶಯ ವ್ಯಕ್ತಪಡಿಸಿದೆ. ಅಫ್ಘಾನಿಸ್ತಾನದಲ್ಲಾದ ಬದಲಾವಣೆ ಭಾರತದ ಮೇಲೆಯೂ ಕೂಡ ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಈ ಪ್ರಾದೇಶಿಕ ಸಂವಾದ ನಡೆಸಲು ಭಾರತ ಮುಂದಾಗಿದೆ. ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ಅದರ ನೆರೆ ರಾಷ್ಟ್ರಗಳಾದ ಭಾರತ ಸೇರಿ ಇನ್ನುಳಿದ ದೇಶಗಳ ಮೇಲೆ ಯಾವೆಲ್ಲ ಪರಿಣಾಮ ಬೀರಬಹುದು ಎಂಬುದನ್ನು ಚರ್ಚಿಸಲು ಮತ್ತು ತಾಲಿಬಾನಿಗಳ ಆಡಳಿತವನ್ನು ಹೇಗೆ ಸ್ವೀಕರಿಸಬಹುದು ಎಂಬುದನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲು ಭಾರತ ಉನ್ನತ ಭದ್ರತಾ ಸಂಸ್ಥೆಯಾಗಿರುವ ರಾಷ್ಟ್ರೀಯ ಭದ್ರತಾ ಮಂಡಳಿ ಈ ವ್ಯಕ್ತಿಗತ ಸಭೆ (ಅಂದರೆ ಉಳಿದ ರಾಷ್ಟ್ರಗಳ ಎನ್ಎಸ್ಎಗಳು ಭೌತಿಕವಾಗಿಯೇ ಪಾಲ್ಗೊಳ್ಳುತ್ತಾರೆ) ನಡೆಸಲಿದ್ದು, ಅಫ್ಘಾನ್ನ ನೆರೆ ರಾಷ್ಟ್ರಗಳ ಸಾಲಿಗೆ ಸೇರುವ ಪಾಕಿಸ್ತಾನ, ಇರಾನ್, ತಜಕಿಸ್ತಾನ, ಉಜ್ಬೇಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಇತರ ಪ್ರಮುಖ ರಾಷ್ಟ್ರಗಳಾದ ಚೀನಾ, ರಷ್ಯಾದ ಎನ್ಎಸ್ಎಗಳಿಗೆ ಆಹ್ವಾನವನ್ನೂ ನೀಡಲಾಗಿದೆ.
ಭಾರತ ಕರೆದ ಸಭೆಯಲ್ಲಿ ಪಾಕಿಸ್ತಾನ ಭಾಗಿ? ದೆಹಲಿ ಪ್ರಾದೇಶಿಕ ಸಂವಾದ ಎಂಬ ಹೆಸರಿನಲ್ಲಿ ನಡೆಯಲಿರುವ ಈ ಸಭೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಆಹ್ವಾನ ನೀಡಿದ್ದೇನೋ ಸರಿ. ಆದರೆ ಪಾಕಿಸ್ತಾನ ಇದರಲ್ಲಿ ಭಾಗವಹಿಸುತ್ತಿಲ್ಲ. ಅಫ್ಘಾನಿಸ್ತಾನದ ವಿಷಯದಲ್ಲಿ ಭಾರತ ಋಣಾತ್ಮಕವಾಗಿ ವರ್ತಿಸುತ್ತಿದೆ. ಇದನ್ನು ನಾವು ವಿರೋಧಿಸುತ್ತೇವೆ. ಹಾಗಾಗಿ ಭಾರತ ಅಫ್ಘಾನಿಸ್ತಾದ ವಿಷಯ ಚರ್ಚಿಸಲು ಕರೆದ ಸಭೆಯಲ್ಲಿ ನಾವು ಪಾಲ್ಗೊಳ್ಳುತ್ತಿಲ್ಲ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯುಸುಫ್ ಕಳೆದವಾರವೇ ಸ್ಪಷ್ಟಪಡಿಸಿದ್ದಾರೆ.
ಉಜ್ಬೆಕಿಸ್ತಾನದ ಎನ್ಎಸ್ಎ (ರಾಷ್ಟ್ರೀಯ ಭದ್ರತಾ ಸಲಹೆಗಾರ)ಯನ್ನು ಭೇಟಿಯಾದ ನಂತರ ಮೊಯಿದ್ ಯೂಸುಫ್ ಸುದ್ದಿಗೋಷ್ಠಿ ನಡೆಸಿದ್ದರು. ಅದರಲ್ಲಿ ಮಾತನಾಡಿದ ಅವರು, ನಾನು ಯಾವ ಕಾರಣಕ್ಕೂ ಭಾರತ ಕರೆದ ಸಂವಾದಕ್ಕೆ ಹೋಗುವುದಿಲ್ಲ. ವಿನಾಶವನ್ನೇ ಮಾಡಲು ಹೊರಟವರು ಎಂದಿಗೂ ಶಾಂತಿ ಸ್ಥಾಪಕರು ಆಗುವುದಿಲ್ಲ ಎಂದು ಭಾರತದ ವಿರುದ್ಧವಾಗಿ ಮಾತನಾಡಿದ್ದರು. ಭಾರತದಲ್ಲಿಯೇ ಪ್ರಾದೇಶಿಕ ತೊಂದರೆಗಳು ಇರುವುದು ಕಾಣುತ್ತಿದೆ. ಅದರ ಬಗ್ಗೆಯೇ ಚರ್ಚೆಗಳು ನಡೆಯುತ್ತಿಲ್ಲ. ಅದಕ್ಕೆಲ್ಲ ಕಾರಣ ಅಲ್ಲಿನ ಸರ್ಕಾರವೇ ಆಗಿದೆ. ಅಂದ ಮೇಲೆ ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಪ್ರಕ್ರಿಯೆಗೆ ಭಾರತ ಹೇಗೆ ನಾಂದಿ ಹಾಡಬಲ್ಲದು? ಇನ್ನು ಜಗತ್ತಿನ ಹಲವು ದೇಶಗಳು ಭಾರತದ ವಿಚಾರದಲ್ಲಿ ಕಣ್ಮುಚ್ಚಿ ಕುಳಿತಿವೆ. ಅದರೊಂದಿಗೆ ಯಾವ ದಾಟಿಯಲ್ಲಿ ಮಾತನಾಡಬೇಕೋ..ಹಾಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದರು.
ಆಮಂತ್ರಣ ತಿರಸ್ಕರಿಸಿದ ಪಾಕ್ಗೆ ಭಾರತದ ಉತ್ತರವೇನು? ಪಾಕಿಸ್ತಾನ ಆಮಂತ್ರಣ ತಿರಸ್ಕಾರ ಮಾಡಿದ ಬಗ್ಗೆ ಭಾರತ ಸ್ವಲ್ಪವೂ ತಲೆಕೆಡಿಸಿಕೊಂಡಿಲ್ಲ. ಇದು ನಿರೀಕ್ಷತವೇ ಆಗಿದೆ ಮತ್ತು ಪಾಕ್ನ ತಿರಸ್ಕಾರ ಅದಕ್ಕೆ ಅಫ್ಘಾನಿಸ್ತಾನದ ಬಗ್ಗೆ ಇರುವ ಮನಸ್ಥಿತಿಯ ಪ್ರತಿಬಿಂಬಕವಾಗಿದೆ ಎಂದು ಭಾರತ ಸರ್ಕಾರದ ಮೂಲಗಳು ಹೇಳಿದ್ದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹಾಗೇ, ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿಯನ್ನು ವಿನಾಶಕಾರಿಯಾಗಿ ಬಳಸಿಕೊಳ್ಳಲು ಪಾಕ್ ಮುಂದಾಗಿದೆ ಎಂದೂ ಭಾರತ ಪ್ರತ್ಯುತ್ತರ ನೀಡಿದೆ. ಇನ್ನು ಇಂಥ ಸಭೆಗಳಲ್ಲಿ ಪಾಕಿಸ್ತಾನ ಹಿಂದೆಯೂ ಕೂಡ ಪಾಲ್ಗೊಂಡಿಲ್ಲ ಎಂದೂ ಹೇಳಿದೆ.
ಇನ್ನು ಪಾಕಿಸ್ತಾನದ ಹೊರತಾಗಿ ಮಧ್ಯ ಏಷ್ಯಾದ ದೇಶಗಳು ಸೇರಿ ಆಮಂತ್ರಣ ಸ್ವೀಕರಿಸಿದ ದೇಶಗಳೆಲ್ಲ ಭಾಗವಹಿಸಲು ಮುಂದಾಗಿವೆ. ರಷ್ಯಾ ಮತ್ತು ಇರಾನ್ ದೇಶಗಳಂತೂ ತಾವೂ ಈ ಸಭೆಯಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿರುವುದಾಗಿ ಹೇಳಿಕೊಂಡಿವೆ. ಇದು ಸ್ವಾಗತಾರ್ಹ ಎಂದು ಭಾರತ ಕೂಡ ಹೇಳಿಕೆ ನೀಡಿದೆ. ಅಂದಹಾಗೆ ಈ ಸ್ವರೂಪದ ಸಂವಾದದಲ್ಲಿ ಅಫ್ಘಾನಿಸ್ತಾನದ ನೆರೆರಾಷ್ಟ್ರಗಳ ಜತೆಗೆ ಮಧ್ಯ ಏಷ್ಯಾದ ದೇಶಗಳೂ ಕೂಡ ಭಾಗವಹಿಸುತ್ತಿರುವುದು ಇದೇ ಮೊದಲ ಬಾರಿಗೆ ಆಗಿದೆ.
ಈ ಹಿಂದಿನ ಸಭೆಗಳಲ್ಲಿ ಆಗಿದ್ದೇನು? ಪ್ರಾದೇಶಿಕ ಭದ್ರತೆಗೆ ಸಂಬಂಧಪಟ್ಟಂತೆ ಈ ಹಿಂದೆ ಎರಡು ಸಭೆಗಳು ನಡೆದಿವೆ. 2018ರ ಸೆಪ್ಟೆಂಬರ್ನಲ್ಲಿ ಮತ್ತು 2019ರ ಡಿಸೆಂಬರ್ನಲ್ಲಿ ಇರಾನ್ನಲ್ಲಿ ಸಭೆ ನಡೆದಿತ್ತು. ಆದರೆ 2020ರಲ್ಲಿ ಮೂರನೇ ಸಭೆ ಭಾರತದಲ್ಲಿ ನಡೆಯಬೇಕಿತ್ತು. ಆದರೆ ಕೊವಿಡ್ 19 ಸಾಂಕ್ರಾಮಿಕದ ಕಾರಣದಿಂದ ಈ ಸಭೆ ನಡೆದಿರಲಿಲ್ಲ. ಇದೀಗ ದೆಹಲಿಯಲ್ಲಿ ನವೆಂಬರ್ 10-11ರಂದು ನಡೆಯಲಿದ್ದು, ಅಫ್ಘಾನಿಸ್ತಾನದ ಬೆಳವಣಿಗೆಯ ಬಗೆಗಿನ ಚರ್ಚೆಗೆ ಆದ್ಯತೆ ನೀಡಲಾಗಿದೆ. ಅದರ ಹೊರತಾಗಿ ಕೂಡ ಇನ್ನಿತರ ಭದ್ರತೆ ವಿಚಾರಗಳಿಗೆ ಸಂಬಂಧಪಟ್ಟಂತೆ ವ್ಯಾಪಕ ಚರ್ಚೆ ನಡೆಯಲಿದೆ.
ಇದನ್ನೂ ಓದಿ: ರಫೇಲ್ ಒಪ್ಪಂದ: ಕಿಕ್‌ಬ್ಯಾಕ್‌ಗಳನ್ನು ಸಿಬಿಐ ತನಿಖೆ ಮಾಡದಿರಲು ನಿರ್ಧರಿಸಿದೆ ಎಂದ ಫ್ರೆಂಚ್ ಮಾಧ್ಯಮ ವರದಿ
Published On - 7:32 pm, Mon, 8 November 21