ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಚಿನ್ನಾಭರಣಗಳನ್ನು ದೊಡ್ಡ ಟೇಬಲ್ ಮೇಲೆ ಇಟ್ಟಿರುವುದನ್ನು ಕಾಣಬಹುದು. ಚಿನ್ನವನ್ನು ಪ್ರದರ್ಶನಕ್ಕೆ ಇಟ್ಟಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಜೊತೆಗೆ ಪೊಲೀಸರು ಕೂಡ ಇಲ್ಲಿ ಇರುವುದನ್ನು ಗಮನಿಸಬಹುದು. ಕೆಲ ಬಳಕೆದಾರರು ಇದನ್ನು ಶೇರ್ ಮಾಡುತ್ತಿದ್ದು, ತಿರುಪತಿಯಲ್ಲಿರುವ ಅರ್ಚಕರ ಮನೆಯಲ್ಲಿ 128 ಕೆಜಿ ಚಿನ್ನ ಹಾಗೂ 150 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ಹೇಳುತ್ತಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ತಿರುಪತಿ ತಿಮ್ಮಪ್ಪನ ಸೇವೆ ಮಾಡುವ 16 ಪುರೋಹಿತರಲ್ಲಿ ಒಬ್ಬ ಪುರೋಹಿತರ ಮನೆಗೆ ಇನ್ಕಮ್ ಟ್ಯಾಕ್ಸ್ ವಿಭಾಗದ ಅಧಿಕಾರಿಗಳು ರೈಡ್ ಮಾಡಿದಾಗ ಸಿಕ್ಕಿರುವ ಹಣ, ಚಿನ್ನದ ಒಡವೆ ಹಾಗೂ ವಜ್ರ ಎಷ್ಟು ಗೊತ್ತಾ ???. 128 ಕೆಜಿ ಚಿನ್ನ, 150 ಕೋಟಿ ಕ್ಯಾಶ್, 70 ಕೋಟಿ ಬೆಲೆಯ ವಜ್ರ. ದಾನ ಮಾಡುವಾಗ ಈಗಲಾದರೂ ಸ್ವಲ್ಪ ಯೋಚಿಸಿ.. ಹಣ , ಚಿನ್ನ , ವಜ್ರ ದೇವರಿಗೆ ಬೇಕೇ?? ಒಬ್ಬರ ಹತ್ತಿರ ಇಷ್ಟು ಸಿಕ್ಕಿದೆ ಅಂದಮೇಲೆ, ಇನ್ನು ಉಳಿದ 15 ಪುರೋಹಿತರ ಮನೆಯಲ್ಲಿ ಎಷ್ಟು ಇರಬಹುದು??’’ ಎಂದು ಬರೆದುಕೊಂಡಿದ್ದಾರೆ.
ತಿರುಪತಿ ತಿಮ್ಮಪ್ಪನ ಸೇವೆ ಮಾಡುವ 16 ಪುರೋಹಿತರಲ್ಲಿ ಒಬ್ಬ ಪುರೋಹಿತರ ಮನೆಗೆ ಇನ್ಕಮ್ ಟ್ಯಾಕ್ಸ್ ವಿಭಾಗದ ಅಧಿಕಾರಿಗಳು ರೈಡ್ ಮಾಡಿದಾಗ ಸಿಕ್ಕಿರುವ ಹಣ, ಚಿನ್ನದ ಒಡವೆ , ಹಾಗೂ ವಜ್ರ ಎಷ್ಟು ಗೊತ್ತಾ ???😵💫😵💫
128 ಕೆಜಿ ಚಿನ್ನ , 150 ಕೋಟಿ ಕ್ಯಾಶ್ , 70 ಕೋಟಿ ಬೆಲೆಯ ವಜ್ರ ….🙆🏻♂️🙆🏻♂️🙆🏻♂️
ದಾನ ಮಾಡುವಾಗ ಈಗಲಾದರೂ ಸ್ವಲ್ಪ ಯೋಚಿಸಿ..🙄 pic.twitter.com/yzEHMRTqXY
— Sarita Shinde (@saritashinde24) December 28, 2024
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ತಮಿಳುನಾಡಿನ ವೆಲ್ಲೂರಿನಲ್ಲಿರುವ ಆಭರಣ ಶೋರೂಂನಲ್ಲಿ ಕಳ್ಳತನವಾದ ನಂತರ ವಶಪಡಿಸಿಕೊಂಡ ಆಭರಣಗಳ ವೈರಲ್ ವಿಡಿಯೋ ಇದಾಗಿದೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ತಿರುಪತಿಯ ಅರ್ಚಕರೊಬ್ಬರ ಮನೆಯಲ್ಲಿ 128 ಕೆಜಿ ಚಿನ್ನ ಮತ್ತು 150 ಕೋಟಿ ರೂಪಾಯಿ ನಗದು ಸಿಕ್ಕಿದೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಳೆಯ ಘಟನೆಯ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಇದಕ್ಕೂ ಮೊದಲು, ಈ ವಿಡಿಯೋ ಇದೇ ಹೇಳಿಕೆಯೊಂದಿಗೆ ವೈರಲ್ ಆಗಿತ್ತು.
ವೈರಲ್ ಪೋಸ್ಟ್ ಅನ್ನು ಪರಿಶೀಲಿಸಲು, ನಾವು ಮೊದಲು ವಿಡಿಯೋದ ಕೀಫ್ರೇಮ್ ಅನ್ನು ಹೊರತೆಗೆದಿದ್ದೇವೆ ಮತ್ತು ಅದನ್ನು ಗೂಗಲ್ ಲೆನ್ಸ್‌ನೊಂದಿಗೆ ಹುಡುಕಿದ್ದೇವೆ. ಆಗ 22 ಡಿಸೆಂಬರ್ 2021 ರಂದು ಇಂಡಿಯನ್ ಎಕ್ಸ್‌ಪ್ರೆಸ್ ವೈರಲ್ ವಿಡಿಯೋದಲ್ಲಿನ ಫೋಟೋದೊಂದಿಗೆ ಪ್ರಕಟಿಸಿದ ವರದಿ ಕಂಡುಬಂದಿದೆ. ವರದಿಯ ಪ್ರಕಾರ, ಡಿ. 15 ರಂದು ವೆಲ್ಲೂರಿನ ಜೋಸ್ ಅಲುಕಾಲ್ ಜ್ಯುವೆಲ್ಲರಿ ಶೋರೂಮ್‌ನಲ್ಲಿ ನಡೆದ ಕಳ್ಳತನವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. 8 ಕೋಟಿ ಮೌಲ್ಯದ 15.9 ಕೆಜಿ ಚಿನ್ನ ಮತ್ತು ವಜ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ತಮ್ಮ ತನಿಖೆಯಲ್ಲಿ ಜೋಸ್ ಅಲುಕ್ಕಾಸ್ ಶೋರೂಮ್ ಸುತ್ತಮುತ್ತಲಿನ ಸುಮಾರು 200 ಸಿಸಿಟಿವಿ ದೃಶ್ಯಗಳನ್ನು ವಿಶ್ಲೇಷಿಸಿದ್ದಾರೆ ಮತ್ತು ಆರೋಪಿಯು ಹಲವಾರು ಸಂದರ್ಭಗಳಲ್ಲಿ ಆ ಪ್ರದೇಶದಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಈ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ನೀಡಲಾಗಿದೆ ಎಂದು ಬರೆಯಲಾಗಿದೆ.
ಅಲ್ಲದೆ ಡಿಸೆಂಬರ್ 20, 2021 ರಂದು, ಎಕ್ಸ್ ಬಳಕೆದಾರ ಮಹಾಲಿಂಗಂ ಪೊನ್ನುಸಾಮಿ, ಈ ಪ್ರಕರಣದ ವಿಡಿಯೋವನ್ನು ಪೋಸ್ಟ್ ಮಾಡುವಾಗ, ವೆಲ್ಲೂರು ಪೊಲೀಸರು ಆಭರಣ ಶೋರೂಂನಿಂದ ಸುಮಾರು 15 ಕೆಜಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕದ್ದ ಕಳ್ಳನನ್ನು ಬಂಧಿಸಿದ್ದಾರೆ ಎಂದು ಹೇಳಿದ್ದರು.
@VellorePolice has arrested a burglar, who drill hole into Vellore #Josalukkas jewellery store wall, decamp with 15kg gold and diamond jewels 🌟💐 pic.twitter.com/yzfZSvp6bY
— Mahalingam Ponnusamy (@mahajournalist) December 20, 2021
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ತಿರುಪತಿಯಲ್ಲಿರುವ ಅರ್ಚಕರ ಮನೆಯಲ್ಲಿ 128 ಕೆಜಿ ಚಿನ್ನ ಮತ್ತು 150 ಕೋಟಿ ರೂಪಾಯಿ ನಗದು ಸಿಕ್ಕಿದೆ ಎಂದು ಹೇಳುವ ವೈರಲ್ ವಿಡಿಯೀ ಆಭರಣ ಶೋ ರೂಂನಲ್ಲಿ ಕಳ್ಳತನಕ್ಕೆ ಸಂಬಂಧ ಪಟ್ಟಿದ್ದು ಎಂದು ನಾವು ಖಚಿತವಾಗಿ ಹೇಳುತ್ತೇವೆ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ