ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ರಸ್ತೆಯಲ್ಲಿ ರಣಹದ್ದುಗಳ ಗುಂಪಾಗಿರುವುದನ್ನು ಕಾಣಬಹುದು. ಕೆಲವು ಬಳಕೆದಾರರು ಈ ವಿಡಿಯೋವನ್ನು ಇತ್ತೀಚಿನದು ಎಂದು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ಇದು ಅಯೋಧ್ಯೆಗೆ ಆಗಮಿಸುತ್ತಿರುವ ಜಟಾಯು ರಣಹದ್ದುವಿನ ವಿಡಿಯೋ ಎಂದು ಬರೆದುಕೊಂಡು ಪೋಸ್ಟ್ ಮಾಡುತ್ತಿದ್ದಾರೆ. ಹಾಗಾದರೆ ಅಯೋಧ್ಯೆಯನ್ನು ನಿಜಕ್ಕೂ ಜಟಾಯು ರಣಹದ್ದು ಕಾಣಿಸಿಕೊಂಡಿದೆಯೇ?.
ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಡಿಸೆಂಬರ್ 1, 2024 ರಂದು ಈ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮತ್ತು ‘‘100 ವರ್ಷಗಳ ಹಿಂದೆ ಅಳಿದುಳಿದಿದ್ದ ಜಟಾಯು ರಣಹದ್ದು ಇಂದು ಅಯೋಧ್ಯೆ ಜನ್ಮಸ್ಥಳಕ್ಕೆ ಮರಳಿದೆ, ಹೃದಯದಿಂದ ಜೈ ಶ್ರೀರಾಮ್ ಎಂದು ಹೇಳಿ’’ ಎಂದು ವಿಡಿಯೋದ ಮೇಲೆ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಹಕ್ಕು ತಪ್ಪುದಾರಿಗೆಳೆಯುವಂತಿದೆ ಎಂದು ಕಂಡುಬಂದಿದೆ. ವಾಸ್ತವವಾಗಿ ವೈರಲ್ ವಿಡಿಯೋ 2021 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಾಗಿದೆ. ಆದರೆ, ಕೆಲ ಬಳಕೆದಾರರಿ ಇದನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋಗೂ ಅಯೋಧ್ಯೆಗೂ ಯಾವುದೇ ಸಂಬಂಧವಿಲ್ಲ.
ವೈರಲ್ ವಿಡಿಯೋದ ನಿಜಾಂಶ ತಿಳಿಯಲು ನಾವು ವಿಡಿಯೋದ ಹಲವಾರು ಕೀಫ್ರೇಮ್‌ಗಳನ್ನು ಹೊರತೆಗೆದಿದ್ದೇವೆ ಮತ್ತು ಅವುಗಳನ್ನು ಗೂಗಲ್ ರಿವರ್ಸ್ ಇಮೇಜ್ ಸಹಾಯದಿಂದ ಹುಡುಕಿದೆವು. ಆಗ @Putrieffendi ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಎರಡು ವರ್ಷಗಳ ಹಿಂದೆಯೇ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇದರಿಂದ ಈ ವಿಡಿಯೋಗೂ ಸದ್ಯದ ಪರಿಸ್ಥಿತಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
ಈ ಕುರಿತು ಇನ್ನಷ್ಟು ಹುಡುಕಾಟ ನಡೆಸಿ ನಾವು ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ಗೂಗಲ್ನಲ್ಲಿ ಸರ್ಚ್ ಮಾಡಲು ಪ್ರಯತ್ನಿಸಿದ್ದೇವೆ. ಆದರೆ ಈ ವಿಡಿಯೋಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ನಮಗೆ ಸಿಕ್ಕಿಲ್ಲ. ಈ ಹಿಂದೆಯೂ ಇದೇ ಹೇಳಿಕೆಯೊಂದಿಗೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಎಂಬುದಷ್ಟೆ ತಿಳಿದುಬಂತು.
ಹುಡುಕಾಟದ ಸಮಯದಲ್ಲಿ ಖಾಸಗಿ ವಾಹಿನಿಯ ಪತ್ರಕರ್ತರೊಬ್ಬರು ಈ ವಿಡಿಯೋಗೆ ಸಂಬಂಧಿಸಿದಂತೆ ಮಾತನಾಡಿರುವುದು ನಮಗೆ ಸಿಕ್ಕಿತು. ವೈರಲ್ ಆಗಿರುವ ವಿಡಿಯೋ ಅಯೋಧ್ಯೆಯದ್ದಲ್ಲ ಎಂದು ಅವರು ಹೇಳಿದ್ದಾರೆ. ರಾಮ ಮಂದಿರದ ಬಳಿ ಅಂತಹ ಪಕ್ಷಿ ಕಾಣಿಸಲಿಲ್ಲ ಎಂದಿದ್ದಾರೆ.
ವಿಡಿಯೋಗೆ ಸಂಬಂಧಿಸಿದಂತೆ, ಈ ವಿಡಿಯೋ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದನ್ನು ಟಿವಿ9 ಕನ್ನಡ ಸ್ವತಂತ್ರವಾಗಿ ಖಚಿತಪಡಿಸಲು ಸಾಧ್ಯವಾಗಲಿಲ್ಲ. ಆದರೆ ಈ ವಿಡಿಯೋಗೂ ಅಯೋಧ್ಯೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಮೂಲಕ ಅಯೋಧ್ಯೆಗೆ ಜಟಾಯು ಆಗಮನ ಎಂದು ಹೇಳುವ ವೈರಲ್ ವಿಡಿಯೋವು 2021 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಾಗಿದೆ ಎಂದು ಟಿವಿ9 ಕನ್ನಡ ತನ್ನ ತನಿಖೆಯಿಂದ ಕಂಡುಹಿಡಿದಿದೆ. ಸದ್ಯದ ಪರಿಸ್ಥಿತಿಗೂ ಈ ವಿಡಿಯೋಗೂ ಯಾವುದೇ ಸಂಬಂಧವಿಲ್ಲ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Tue, 3 December 24