Fact Check: ಪತಂಜಲಿ ಕೊರೊನಿಲ್​ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಸಿಕ್ಕಿದೆ ಎಂಬುದು ಸುಳ್ಳು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 21, 2021 | 4:17 PM

Patanjali Coronil: ಪತಂಜಲಿ ಸಂಸ್ಥೆ ಕೊರೊನಿಲ್​ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು ಇದು ಸತ್ಯಕ್ಕೆ ದೂರವಾಗಿದೆ.

Fact Check: ಪತಂಜಲಿ ಕೊರೊನಿಲ್​ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಸಿಕ್ಕಿದೆ ಎಂಬುದು ಸುಳ್ಳು
ಕೊರೊನಿಲ್
Follow us on

ಪತಂಜಲಿ ಸಂಸ್ಥೆಯು ಕೊರೊನಾ ವೈರಸ್​ ಸೋಂಕು ನಿಗ್ರಹಕ್ಕೆಂದು ಹೊರತಂದಿರುವ ಕೊರೊನಿಲ್​ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದೆ ಎಂಬ ಪೋಸ್ಟ್​ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆಯುರ್ವೇದ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ವಿಶ್ವ ಆರೋಗ್ಯ ಸಂಸ್ಥೆ ಕೊರೊನಿಲ್​ಗೆ ಮಾನ್ಯತೆ ನೀಡಿದೆ ಎಂದು ವೈರಲ್ ಪೋಸ್ಟ್ ನಲ್ಲಿ ಹೇಳಲಾಗಿದೆ.

ಕೋವಿಡ್-19 ತಡೆಯಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೊರೊನಿಲ್ ಸಹಕಾರಿ ಎಂದು ಪತಂಜಲಿ ಸಂಸ್ಥೆ ಹೇಳಿತ್ತು. ಇದಕ್ಕೆ ಆಯುಷ್ ಸಚಿವಾಲಯದಿಂದ ಮಾನ್ಯತೆ (Certificate of Pharmaceutical Product ) ಸಿಕ್ಕಿದೆ. ಫೆಬ್ರವರಿ 19ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಹರ್ಷವರ್ಧನ್ ಅವರ ಉಪಸ್ಥಿತಿಯಲ್ಲಿ ಸರ್ಕಾರ ಈ ಅಂಗೀಕಾರ ನೀಡಿತ್ತು. ಈ ಅಂಗೀಕಾರ ಲಭಿಸಿರುವುದರಿಂದ ಕೊರೊನಿಲ್​ನ್ನು 158 ರಾಷ್ಟ್ರಗಳಿಗೆ ರಫ್ತು ಮಾಡಬಹುದು ಎಂದು ವರದಿಗಳು ಉಲ್ಲೇಖಿಸಿವೆ. ಆದಾಗ್ಯೂ ವಿಶ್ವ ಆರೋಗ್ಯ ಸಂಸ್ಧೆಯು ಈ ರೀತಿಯ ಪ್ರಮಾಣೀಕರಣಕ್ಕೆ ಮಾನದಂಡಗಳನ್ನು ಪ್ರಕಟಿಸಿದ್ದು, ಕೊರೊನಿಲ್​ಗೆ ಇಂಥ ಯಾವುದೇ ರೀತಿಯ ಪ್ರಮಾಣೀಕರಣ ಅಥವಾ ಅನುಮೋದನೆ ನೀಡಿಲ್ಲ.

ವೈರಲ್ ಪೋಸ್ಟ್
ಕೊರೊನಿಲ್ ಅನ್ನು ಕೊರೋನಾಗೆ ಪ್ರಥಮ ಸಾಕ್ಷ್ಯಾಧಾರ ಆಧಾರಿತ ಔಷಧಿ ಎಂದು ವಿಶ್ವ ಆರೋಗ್ಯಸಂಸ್ಥೆ ಮಾನ್ಯತೆ ನೀಡಿರುವುದರಿಂದ ಪತಂಜಲಿ ಆಯುರ್ವೇದ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದೆ ಎಂಬ ಪೋಸ್ಟ್ ಟ್ವಿಟರ್​ನಲ್ಲಿ ಹರಿದಾಡಿದೆ.

ಫ್ಯಾಕ್ಟ್ ಚೆಕ್
ವಿಶ್ವಸಂಸ್ಥೆಯ ಜಿಎಂಪಿ ಗುಣಮಟ್ಟದ ಅನುಮೋದನೆಗಳಿಗೆ ಅನುಗುಣವಾಗಿ ಕೊರೊನಿಲ್‌ಗೆ ಡಿಸಿಜಿಐನಿಂದ CoPP ಪರವಾನಗಿ ನೀಡಲಾಗಿದೆ ಎಂದು ಹೇಳಲು ನಾವು ಸಂತೋಷಪಡುತ್ತೇವೆ ಮತ್ತು ಹೆಮ್ಮೆಪಡುತ್ತೇವೆ  ಎಂದು  ಪತಂಜಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ  ಆಚಾರ್ಯ ಬಾಲಕೃಷ್ಣ ಟ್ವೀಟ್ ಮಾಡಿದ್ದರು.

ಈ  ಟ್ವೀಟ್ ಬೆನ್ನಲ್ಲೇ  ಕೊರೊನಿಲ್ ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದೆ ಎಂಬ ಪೋಸ್ಟ್  ವೈರಲ್  ಆಗಿದೆ.  ಈ ಬಗ್ಗೆ ಸ್ಪಷ್ಟನೆ ನೀಡಿದ ಬಾಲಕೃಷ್ಣ ಅವರು ಕೊರೊನಿಲ್​ಗೆ ವಿಶ್ವ ಆರೋಗ್ಯ ಸಂಸ್ಥೆ ಜಿಎಂಪಿಯ ಸಿಒಪಿಪಿ ಪ್ರಮಾಣಪತ್ರವನ್ನು ಭಾರತ ಸರ್ಕಾರದ ಡಿಸಿಜಿಐ ನೀಡಿದೆ ಎಂಬ ಗೊಂದಲದ ಬಗ್ಗೆ ನಾವು ಸ್ಪಷ್ಟೀಕರಣ ನೀಡಲು ಬಯಸುತ್ತೇವೆ. ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಔಷಧಿಗಳನ್ನು ಅನುಮೋದಿಸುವುದಿಲ್ಲ ಅಥವಾ ನಿರಾಕರಿಸುವುದಿಲ್ಲ. ಪ್ರಪಂಚದಾದ್ಯಂತದ ಜನರಿಗೆ ಉತ್ತಮ, ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಲು ವಿಶ್ವ ಆರೋಗ್ಯ ಸಂಸ್ಥೆ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.

ಅದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆಯ ಯಾವುದೇ ಸಾಂಪ್ರದಾಯಿಕ ಔಷಧಿಗಳಿಗೆ ಪ್ರಮಾಣ ಪತ್ರ ನೀಡಿಲ್ಲ ಎಂದಿದೆ.

ಏನಿದು ವಿಶ್ವಸಂಸ್ಥೆಯ GMP?
ವಿಶ್ವಸಂಸ್ಥೆಯ ಉತ್ತಮ ಉತ್ಪಾದನಾ ಅಭ್ಯಾಸ (GMP) ಗುಣಮಟ್ಟದ ನಿಯಂತ್ರಣ ಮಾನದಂಡಗಳನ್ನು ಒದಗಿಸುತ್ತದೆ, ಇದು ಔಷಧಗಳ ಪರಿಶೀಲನೆ, ಪರೀಕ್ಷೆ, ದೃಢೀಕರಣ, ಅವಲೋಕನ ಮತ್ತು ದಾಖಲಾತಿಗಳ ಪ್ರಕ್ರಿಯೆಗಳನ್ನು ವಿವರಿಸುತ್ತಿದ್ದು, ಔಷಧಿ ಬಳಸಲು ಸೂಕ್ತವೆಂದು ಖಚಿತಪಡಿಸುತ್ತದೆ. ಇಲ್ಲಿರುವ ಕಾನೂನು ಘಟಕಗಳು ವಿತರಣೆ, ಉತ್ಪಾದನೆ ಮತ್ತು ಪರೀಕ್ಷೆ, ಉತ್ಪನ್ನದ ದೋಷಗಳು ಮತ್ತು ದೂರುಗಳಿಗೆ ಉತ್ತರಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಈ ಮಾನದಂಡಗಳನ್ನು 100 ಕ್ಕೂ ಹೆಚ್ಚು ದೇಶಗಳಲ್ಲಿ ವೈದ್ಯಕೀಯ ಕಾನೂನುಗಳಲ್ಲಿ ಸೇರಿಸಿಕೊಳ್ಳಲಾಗಿದೆ ಮತ್ತು ದೇಶಗಳು ತಮ್ಮದೇ ಆದ ಜಿಎಂಪಿ ಮಾನದಂಡಗಳನ್ನು ನಿರ್ಧರಿಸಲು ಈ ಮಾನದಂಡಗಳನ್ನು ಸಹ ಬಳಸಲಾಗಿದೆ. ಭಾರತದಲ್ಲಿ ಉತ್ತಮ ಉತ್ಪಾದನಾ ಅಭ್ಯಾಸಕ್ಕೆ ಇನ್​ಸ್ಟಿಟ್ಯೂಟ್ ಅಫ್ ಗುಡ್ ಮ್ಯಾನ್ಯುಫ್ಯಾಕ್ಚರಿಂಗ್ ಪ್ರಾಕ್ಟೀಸಸ್ ನೇತೃತ್ವ ವಹಿಸುತ್ತದೆ.

 ಇದನ್ನೂ ಓದಿ: Fact Check: India Is Doing It ವಿಡಿಯೊ ಲಿಂಕ್ ತೆರೆದರೆ ನಿಮ್ಮ ಫೋನ್ ಹ್ಯಾಕ್; ವಾಟ್ಸ್​ಆ್ಯಪ್​ನಲ್ಲಿ ಹರಿದಾಡಿದ್ದು ಸುಳ್ಳು ಸಂದೇಶ