ಫೆಂಗಲ್ ಚಂಡಮಾರುತವು ಉತ್ತರ ತಮಿಳುನಾಡು ಮತ್ತು ಪುದುಚೇರಿಯಲ್ಲಿ ತೀವ್ರ ಹಾನಿಯನ್ನುಂಟುಮಾಡಿದೆ. ಚಂಡಮಾರುತದಿಂದಾಗಿ ಚೆನ್ನೈನಲ್ಲಿ ವಿಮಾನ ಮತ್ತು ರೈಲು ಸೇವೆಗಳು ಸ್ಥಗಿತಗೊಂಡಿವೆ. ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಲವು ರಾಷ್ಟ್ರೀಯ ಹೆದ್ದಾರಿಗಳು ನೀರಿನಲ್ಲಿ ಮುಳುಗಿದ್ದು, ತಮಿಳುನಾಡಿನ ದಕ್ಷಿಣ ಭಾಗಗಳಿಂದ ಚೆನ್ನೈಗೆ ಸಂಪರ್ಕ ಕಡಿತಗೊಂಡಿದೆ.
ಏತನ್ಮಧ್ಯೆ, ಜಲಾವೃತಗೊಂಡ ಬೀದಿಗಳನ್ನು ತೋರಿಸುವ ವಿಡಿಯೋ ಒಂದು ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ. ಇದು ಮರೀನಾ ಬೀಚ್, ಚೆನ್ನೈ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿದೆ. ರಸ್ತೆಗಳಲ್ಲಿ ಭಾರೀ ನೀರು ನಿಂತಿರುವುದನ್ನು ಈ ವಿಡಿಯೋ ತೋರಿಸುತ್ತದೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋ ಭಾರತದ್ದೇ ಅಲ್ಲ. ಇದು ಸೌದಿ ಅರೇಬಿಯಾದ ಜೆಡ್ಡಾದ ವಿಡಿಯೋ ಆಗಿದೆ.
ನಿಜಾಂಶ ತಿಳಿಯಲು ನಾವು ವೈರಲ್ ವಿಡಿಯೋದಿಂದ ತೆಗೆದ ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಇದೇ ವಿಡಿಯೋ ಸೆಪ್ಟೆಂಬರ್ 2024 ರಿಂದ ಆನ್‌ಲೈನ್‌ನಲ್ಲಿದೆ ಎಂದು ಕಂಡುಕೊಂಡಿದ್ದೇವೆ. ಸೆಪ್ಟೆಂಬರ್ 3, 2024 ರಂದು ‘ಭಾರೀ ಮಳೆಯ ನಂತರ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಪ್ರವಾಹಗಳು’ ಎಂಬ ಶೀರ್ಷಿಕೆಯೊಂದಿಗೆ ಎಕ್ಸ್ ಬಳಕೆದಾರರೊಬ್ಬರಿ ಹಂಚಿಕೊಂಡ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ.
Flash floods in jeddah, Saudi Arabia after heavy rains. pic.twitter.com/B1xa0Y3QcO
— Current Report (@Currentreport1) September 3, 2024
ಈ ಮಾಹಿತಿಯ ಆಧಾರದ ಮೇಲೆ ನಾವು ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ತನಿಖೆ ನಡೆಸಿದಾಗ ಜೆಡ್ಡಾದಲ್ಲಿನ ಪ್ರವಾಹವನ್ನು ವಿವರಿಸುವ ಹಲವಾರು ವರದಿಗಳು ನಮಗೆ ಸಿಕ್ಕಿವೆ. 2 ಸೆಪ್ಟೆಂಬರ್ 2024 ರಂದು, ಜೆಡ್ಡಾದಲ್ಲಿ ಭಾರೀ ಮಳೆ ಸುರಿದಿದೆ. ಇದು ಹಠಾತ್ ಪ್ರವಾಹಕ್ಕೆ ಕಾರಣವಾಯಿತು. ಜನಜೀವನ ಅಸ್ತವ್ಯಸ್ತಗೊಂಡಿತು. ರಸ್ತೆಗಳು ಮುಳುಗಿದವು, ಶಾಲೆಗಳನ್ನು ಮುಚ್ಚಲಾಯಿತು. ಸುರಕ್ಷಿತವಾಗಿರಲು ಎಲ್ಲ ನಿವಾಸಿಗಳಿಗೆ ಎಚ್ಚರಿಕೆಗಳನ್ನು ನೀಡಲಾಗಿದೆ. ಈ ಪ್ರವಾಹದಲ್ಲಿ ಕನಿಷ್ಠ 5 ಜನರು ಪ್ರಾಣ ಕಳೆದುಕೊಂಡಿರುವುದು ಪರಿಸ್ಥಿತಿಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ ಎಂದು ವರದಿಯಲ್ಲಿದೆ. ಈ ಕುರಿತ ಸುದ್ದಿಯನ್ನು ಇಲ್ಲಿ ಓದಬಹುದು.
ಇನ್ನು ಈ ವಿಡಿಯೋಗೂ ಚೆನ್ನೈಗೆ ಯಾವುದೇ ಸಂಬಂಧಿಸಿಲ್ಲ, ಇದು ಸೌದಿ ಅರೇಬಿಯಾಕ್ಕೆ ಸೇರಿದೆ ವಿಡಿಯೋ ಎಂದು ತಮಿಳುನಾಡು ಸರ್ಕಾರದ ಫ್ಯಾಕ್ಟ್ ಚೆಕ್ ಘಟಕವು ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ ಈ ವಿಡಿಯೋವನ್ನು ತೆಗೆಯಲಾಗಿದ್ದು, ಚೆನ್ನೈನ ಮರೀನಾ ಬೀಚ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬರೆಯಲಾಗಿದೆ.
மெரினா சாலையில் வெள்ளம் என்று பரவும் சவூதி அரேபியா காணொளி!@CMOTamilnadu @TNDIPRNEWS (1/2) https://t.co/qxZ9OtwdWL pic.twitter.com/0GIfVZvRWO
— TN Fact Check (@tn_factcheck) November 30, 2024
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗಿರುವ ವಿಡಿಯೋ ಭಾರತದ ಚೆನ್ನೈನದ್ದಲ್ಲ. ಇದು ಸೌದಿ ಅರೇಬಿಯಾದ ಜೆಡ್ಡಾಗೆ ಸಂಬಂಧಿಸಿದ್ದಾಗಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಪ್ರವಾಹಕ್ಕೆ ಒಳಗಾದ ರಸ್ತೆಗಳ ದೃಶ್ಯಗಳನ್ನು ತಮಿಳುನಾಡಿನ ಚೆನ್ನೈನ ಮರೀನಾ ಬೀಚ್ ಬಳಿ ಎಂದು ಹಂಚಿಕೊಳ್ಳಲಾಗಿದೆ.
ಇನ್ನು ಫೆಂಗಲ್ ಚಂಡಮಾರುತವು ತಮಿಳುನಾಡಿನಲ್ಲಿ ಭಾರೀ ಮಳೆಯನ್ನು ಉಂಟುಮಾಡಿದೆ. ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕರೆ ನಡೆಸಿದ್ದು, ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ. ಫೆಂಗಲ್ ಚಂಡಮಾರುತವು ಕೇವಲ ತಮಿಳುನಾಡಷ್ಟೇ ಅಲ್ಲ ಕರ್ನಾಟಕ, ಆಂಧ್ರಪ್ರದೇಶದ ಜನರಲ್ಲೂ ಆತಂಕ ಸೃಷ್ಟಿಸಿದೆ. ಮೊದಲು ಚಂಡಮಾರುತವು ಪುದುಚೇರಿ ಕರಾವಳಿಗೆ ಅಪ್ಪಳಿಸಿದೆ. ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶ, ಕೇರಳ ಮತ್ತು ಕರ್ನಾಟಕದ ಒಳನಾಡಿನ ಹಲವಾರು ಭಾಗಗಳಲ್ಲಿ ಭಾರೀ ಮತ್ತು ಅತಿ ಹೆಚ್ಚು ಮಳೆಯಾಗುತ್ತಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಪುದುಚೇರಿಯು ಕಳೆದ 30 ವರ್ಷಗಳಲ್ಲಿ ಕಾಣದ ದಾಖಲೆಯ ಮಳೆಯನ್ನು ಕಾಣುವುದಷ್ಟೇ ಅಲ್ಲದೆ ಪ್ರವಾಹದಂಥಾ ಸ್ಥಿತಿ ನಿರ್ಮಾಣವಾಗಿದೆ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ