Fact Check: ಋತುಚಕ್ರದ ಸಮಯದಲ್ಲಿ ಮಹಿಳೆಯರು ಕೊವಿಡ್ ಲಸಿಕೆ ಪಡೆಯಬಾರದು ಎಂಬುದು ವದಂತಿ, ನಂಬಬೇಡಿ

|

Updated on: Apr 26, 2021 | 7:08 PM

COVID Vaccine During Periods: ಕೊವಿಡ್ ಲಸಿಕೆ ಮಹಿಳೆ/ ಪುರುಷರಲ್ಲಿ ಬಂಜೆತನವನ್ನುಂಟು ಮಾಡುತ್ತದೆ ಅಥವಾ ಪೀರಿಯಡ್ಸ್ ಸಮಯದಲ್ಲಿ ಸ್ವೀಕರಿಸಬೇಡಿ ಎಂಬುದು ಇದು ಮೂರ್ಖತನ, ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ವೈರಸ್ ಹೊರತುಪಡಿಸಿ ಯಾರೊಬ್ಬರೂ ಲಸಿಕೆಗೆ ಹೆದರುವ ಅಗತ್ಯವಿಲ್ಲ ಎಂದು ಡಾ.ಯೂನಸ್ ಟ್ವೀಟ್ ಮಾಡಿದ್ದಾರೆ.

Fact Check: ಋತುಚಕ್ರದ ಸಮಯದಲ್ಲಿ ಮಹಿಳೆಯರು ಕೊವಿಡ್ ಲಸಿಕೆ ಪಡೆಯಬಾರದು ಎಂಬುದು ವದಂತಿ, ನಂಬಬೇಡಿ
ವಾಟ್ಸಾಪ್​ನಲ್ಲಿ ಹರಿದಾಡಿದ ಪೋಸ್ಟ್
Follow us on

ದೇಶದಲ್ಲಿ ಕೊರೊನಾವೈರಸ್ ಹರಡುವಷ್ಟೇ ವೇಗದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು,ವದಂತಿಗಳು ಹರಡುತ್ತವೆ.ಕೊವಿಡ್ ರೋಗಗಳ ಬಗ್ಗೆ ಸತ್ಯಕ್ಕೆ ದೂರವಾದ ಹಲವಾರು ಸಂದೇಶಗಳು ಪ್ರತಿದಿನ ವಾಟ್ಸಾಪ್​ನಲ್ಲಿ ಫಾರ್ವರ್ಡ್ ಆಗುತ್ತಲೇ ಇರುತ್ತದೆ. ದೇಶದಲ್ಲಿ ಮೇ 1ರಿಂದ 18 ವರ್ಷಕ್ಕೆ ಮೇಲ್ಪಟ್ಟ ಎಲ್ಲರಿಗೂ ಕೊವಿಡ್ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದರ ಬೆನ್ನಲ್ಲೇ ಮಹಿಳೆಯರು ಋತುಚಕ್ರದ ಸಮಯದಲ್ಲಿ ಲಸಿಕೆ ಸ್ವೀಕರಿಸುವಂತಿಲ್ಲ ಎಂಬ ಸಂದೇಶವೊಂದು ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.

ಫಾರ್ವರ್ಡ್ ಸಂದೇಶದಲ್ಲೇನಿದೆ?
18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೇ 1ರಿಂದ ಕೊವಿಡ್ ಲಸಿಕೆ ವಿತರಣೆ ಆರಂಭವಾಗಲಿದೆ.  ಮಹಿಳೆಯರು ಪೀರಿಯಡ್ಸ್ (ಋತುಚಕ್ರ) ದಿನಾಂಕಗಳನ್ನು ನೋಡಿಕೊಂಡು ಲಸಿಕೆ ಪಡೆಯುವುದು ತುಂಬಾ ಮುಖ್ಯ. ನಿಮ್ಮ ಪೀರಿಯಡ್ಸ್​ನ 5 ದಿನ ಮುಂಚೆ ಅಥವಾ ನಂತರ ಕೊವಿಡ್ ಲಸಿಕೆ ಸ್ವೀಕರಿಸಬೇಡಿ. ಯಾಕೆಂದರೆ ಆ ಹೊತ್ತಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗಿರುತ್ತದೆ. ಲಸಿಕೆಯ ಮೊದಲ ಡೋಸ್ ರೋಗ ನಿರೋಧಕ ಶಕ್ತಿಯನ್ನು ಮೊದಲು ಕಡಿಮೆ ಮಾಡಿ ಆಮೇಲೆ ಹೆಚ್ಚು ಮಾಡುತ್ತದೆ. ಹಾಗಾಗಿ ಪೀರಿಯಡ್ಸ್ ಸಮಯದಲ್ಲಿ ಲಸಿಕೆ ತೆಗೆದುಕೊಳ್ಳುವುದು ಅಪಾಯ.  ಇದನ್ನು ನಿಮ್ಮ ಸಹೋದರಿ, ಸ್ನೇಹಿತೆ ,ಕುಟುಂಬ ,ಗರ್ಲ್ ಫ್ರೆಂಡ್ ಜತೆ ಶೇರ್ ಮಾಡಿ. ಶೇರ್ ಮಾಡಲು ನಾಚಿಕೆ ಪಡಬೇಡಿ ಎಂದಿದೆ.

ಪೀರಿಯಡ್ಸ್ ಹೊತ್ತಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ , ಹಾಗಾಗಿ ಲಸಿಕೆ ಸ್ವೀಕರಿಸಬಾರದು ಎಂಬ ವೈರಲ್ ಸಂದೇಶ ಸುಳ್ಳು ಎಂದು PIB fact check ಟ್ವಿಟರ್ ಹ್ಯಾಂಡಲ್ ಟ್ವೀಟ್ ಮಾಡಿದೆ. ಋತುಚಕ್ರಕ್ಕಿಂತ 5 ದಿನ ಮುಂಚಿತವಾಗಿ ಮತ್ತು ಋತುಚಕ್ರದ ನಂತದ 5 ದಿನಗಳಲ್ಲಿ ಲಸಿಕೆ ಸ್ವೀಕರಿಸಬಾರದು ಎಂಬುದು ವದಂತಿ,ಅದನ್ನು ನಂಬಬೇಡಿ ಎಂದು ಪಿಐಬಿ ಟ್ವೀಟ್ ಮಾಡಿದೆ.


ಈ ವದಂತಿ ಬಗ್ಗೆ ಹಲವಾರು ವೈದ್ಯರು, ತಜ್ಞರು ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿದ್ದು, ಋತುಚಕ್ರದ ವೇಳೆ ಲಸಿಕೆ ಸ್ವೀಕರಿಸುವುದರಿಂದ ಯಾವುದೇ ಅಪಾಯ ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.

ಕೆಲವು ವಾಟ್ಸಾಪ್ ಸಂದೇಶಗಳು ಜನರನ್ನು ಮೋಸ ಮಾಡುತ್ತವೆ. ಲಸಿಕೆಯ ಕಾರ್ಯಕ್ಷಮತೆ ಮೇಲೆ ನಿಮ್ಮ ಪೀರಿಯಡ್ಸ್ ಯಾವುದೇ ಪ್ರಭಾವ ಬೀರುವುದಿಲ್ಲ. ಆದಷ್ಟು ಬೇಗನೆ ಲಸಿಕೆ ಪಡೆಯಿರಿ. ದಯವಿಟ್ಟು ಜಗತ್ತಿಗೆ ತಿಳಿಸಿ ಎಂದು ಗೈನಕಾಲಜಿಸ್ಟ್ ಡಾ. ಮುಂಜಾಲ್. ವಿ .ಕಪಾಡಿಯಾ ಟ್ವೀಟ್ ಮಾಡಿದ್ದಾರೆ.


ಯನಿವರ್ಸಿಟಿ ಆಫ್ ಮೇರಿಲ್ಯಾಂಡ್ ಅಪ್ಪರ್ ಚೆಸಾಪೇಕ್ ಹೆಲ್ತ್ (UM UCH), ಮೇರಿಲ್ಯಾಂಡ್ ,ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಡಾ ಫಹೀಂ ಯೂನಸ್ ಅವರು ಕೂಡಾ ವೈರಲ್ ಪೋಸ್ಟ್ ಫೇಕ್ ಎಂದಿದ್ದಾರೆ.


ಸುಳ್ಳು: ಕೊವಿಡ್ ಲಸಿಕೆ ಮಹಿಳೆ/ ಪುರುಷರಲ್ಲಿ ಬಂಜೆತನವನ್ನುಂಟು ಮಾಡುತ್ತದೆ ಅಥವಾ ಪೀರಿಯಡ್ಸ್ ಸಮಯದಲ್ಲಿ ಸ್ವೀಕರಿಸಬೇಡಿ ಅಥವಾ ಇತರ ಗರ್ಭಧಾರಣೆ ಸಂಬಂಧಿ ಭಯವಿರುವಾಗ ಸ್ವೀಕರಿಸಬೇಡಿ
ಸತ್ಯ: ಇದು ಮೂರ್ಖತನ, ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ವೈರಸ್ ಹೊರತುಪಡಿಸಿ ಯಾರೊಬ್ಬರೂ ಲಸಿಕೆಗೆ ಹೆದರುವ ಅಗತ್ಯವಿಲ್ಲ ಎಂದು ಡಾ.ಯೂನಸ್ ಟ್ವೀಟ್ ಮಾಡಿದ್ದಾರೆ.

18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರು ಲಸಿಕೆ ಪಡೆಯಲು ಏಪ್ರಿಲ್ 28ರಿಂದ ಕೊವಿನ್ ಪೋರ್ಟಲ್ ಅಥವಾ ಆರೋಗ್ಯ ಸೇತು app ಮೂಲಕ ನೋಂದಣಿ ಮಾಡಬಹುದು.

ಇದನ್ನೂ ಓದಿ: Coronavirus Fact Check: ಹಸಿ ಈರುಳ್ಳಿಗೆ ಉಪ್ಪು ಸೇರಿಸಿ ತಿಂದರೆ ಕೊರೊನಾ ವೈರಾಣು ಹೊಡೆದೋಡಿಸಬಹುದೇ? ಇಲ್ಲಿದೆ ಸತ್ಯಾಂಶ

Explainer: 18ರಿಂದ 45 ವಯೋಮಾನದವರಿಗೆ ಕೋವಿಡ್ ಲಸಿಕೆ; ನೋಂದಣಿ ಹೇಗೆ? ಪಡೆದುಕೊಳ್ಳುವುದು ಎಲ್ಲಿ? ಡೇಟ್ ಮಿಸ್ ಆದ್ರೆ ಏನು ಮಾಡಬೇಕು?