ಉತ್ತರ ಪ್ರದೇಶದಲ್ಲಿ (Uttar Pradesh) ತನ್ನ ವಿರುದ್ಧ ದಾಖಲಾಗಿರುವ ಆರು ಪ್ರಕರಣಗಳನ್ನು ರದ್ದು ಮಾಡಬೇಕು ಎಂದು ಫ್ಯಾಕ್ಟ್ ಚೆಕರ್ ಮೊಹಮ್ಮದ್ ಜುಬೇರ್ (Mohammed Zubair) ಸುಪ್ರೀಂಕೋರ್ಟ್ಗೆ (Supreme Court) ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರೂಪಿಸಿದ್ದು ಇದನ್ನೂ ರದ್ದು ಮಾಡಬೇಕು ಎಂದು ಜುಬೇರ್ ಹೇಳಿದ್ದಾರೆ. ಆರು ಪ್ರಕರಣಗಳ ಪೈಕಿ ಮೂರು ಪ್ರಕರಣಗಳು ಲಖೀಂಪುರ್ ಖೇರಿ, ಹಾಥರಸ್ ಮತ್ತು ಸೀತಾಪುರ್ನಲ್ಲಿ ದಾಖಲಾಗಿದೆ. ಕೆಲವು ಬಲಪಂಥೀಯ ನಾಯಕರು ದ್ವೇಷ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ ಆರೋಪದಲ್ಲಿ ಜುಬೇರ್ ವಿರುದ್ದ ಕೇಸ್ ದಾಖಲಾಗಿತ್ತು. ಜುಬೇರ್ ತಂಡ ಆದಷ್ಟು ಬೇಗ ವಿಚಾರಣೆ ನಡೆಸಲು ಹೇಳಿದೆ. ಮಂಗಳವಾರ ಜುಬೇರ್ ವಿರುದ್ದ ಸೀತಾಪುರದಲ್ಲಿ ದಾಖಲಾದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ವಿಸ್ತರಿಸಿತ್ತು. ತನಗೆ ಹತ್ಯಾ ಬೆದರಿಕೆ ಬರುತ್ತಿದೆ ಎಂದು ಆಲ್ಟ್ ನ್ಯೂಸ್ ಸಂಸ್ಥಾಪಕ ಜುಬೇರ್ ಸುಪ್ರೀಂಕೋರ್ಟ್ ಗೆ ಹೇಳಿದ್ದರು. ಆದಾಗ್ಯೂ ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ವಿಸ್ತರಣೆ ಆಗದೇ ಇರುವ ಕಾರಣ ಜುಬೇರ್ ಜೈಲಿನಲ್ಲೇ ಇದ್ದಾರೆ. ಅದೇ ದಿನ ಜುಬೇರ್ ವಿರುದ್ದ ದಾಖಲಾಗಿರುವ ಒಂದಕ್ಕಿಂತ ಹೆಚ್ಚು ಪ್ರಕರಣಗಳ ತನಿಖೆ ನಡೆಸಲು ಉತ್ತರ ಪ್ರದೇಶ ಪೊಲೀಸರು ವಿಶೇಷ ತನಿಖಾ ಸಂಸ್ಥೆಯನ್ನು ರಚಿಸಿದ್ದರು. ಪ್ರಕರಣಗಳ ಬಗ್ಗೆ ತ್ವರಿತ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸುವಂತೆ ಎಸ್ಐಟಿಗೆ ಹೇಳಲಾಗಿದೆ.
4 ವರ್ಷಗಳ ಹಿಂದೆ ಜುಬೇರ್ ಅವರು 1983ರಲ್ಲಿ ಬಿಡುಗಡೆಯಾದ ಖ್ಯಾತ ಸಿನಿಮಾವೊಂದರ ಸ್ಕ್ರೀನ್ ಶಾಟ್ ಟ್ವೀಟ್ ಮಾಡಿದ ವಿಚಾರದಲ್ಲಿ ಜುಬೇರ್ ಅವರನ್ನು ಜೂನ್ 27ರಂದು ದೆಹಲಿ ಪೊಲೀಸರು ಬಂಧಿಸಿದ್ದರು.