ಎಮ್ಮೆ ಹಾಲು ಕರೆಯಲು ಬಿಡುತ್ತಿಲ್ಲ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ರೈತ!

| Updated By: ganapathi bhat

Updated on: Nov 14, 2021 | 10:24 PM

ನಾಯಗಾಂವ್ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಎಮ್ಮೆ ಹಾಲು ಕರೆಯಲು ಅನುವು ಮಾಡಿಕೊಡುತ್ತಿಲ್ಲ ಎಂದು ಅವರು ದೂರು ನೀಡಿರುವ ಬಗ್ಗೆ ಪೊಲೀಸ್ ಅಧಿಕಾರಿ ಅರವಿಂದ್ ಶಾ ಪಿಟಿಐಗೆ ಹೇಳಿಕೆ ನೀಡಿದ್ದಾರೆ.

ಎಮ್ಮೆ ಹಾಲು ಕರೆಯಲು ಬಿಡುತ್ತಿಲ್ಲ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ರೈತ!
ಎಮ್ಮೆ (ಪ್ರಾತಿನಿಧಿಕ ಚಿತ್ರ)
Follow us on

ಭೋಪಾಲ್: ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯ ರೈತರು ಪೊಲೀಸ್ ಠಾಣೆಗೆ ತೆರಳಿ ನೀಡಿದ ದೂರೊಂದು ಬಹಳ ಸದ್ದು ಮಾಡಿದೆ. ಜನರ ಕುತೂಹಲ ಕೆರಳಿಸಿದೆ. ಇಲ್ಲಿನ ರೈತರು ಅಂಥದ್ದೇನು ಮಾಡಿದರು ಅಂತೀರಾ? ರೈತ ಒಬ್ಬರು ತಮ್ಮ ಎಮ್ಮೆಯನ್ನೂ ಕೂಡಿಕೊಂಡು ಪೊಲೀಸ್ ಠಾಣೆಗೆ ತೆರಳಿ ಆ ಎಮ್ಮೆಯ ವಿರುದ್ಧವೇ ದೂರು ಕೊಟ್ಟಿದ್ದಾರೆ. ಆ ಎಮ್ಮೆ ಹಾಲು ಕರೆಯಲು ಅವಕಾಶ ಮಾಡಿಕೊಟ್ಟಿಲ್ಲ ಎಂಬ ಕಾರಣ ಹೇಳಿ ಎಮ್ಮೆ ವಿರುದ್ಧ ದೂರು ನೀಡಿದ್ದಾರೆ. ಎಮ್ಮೆಯ ಮೇಲೆ ಮಾಟ ಮಂತ್ರ ಪ್ರಯೋಗಿಸಲಾಗಿದೆ ಎಂಬ ಬಗ್ಗೆಯೂ ಅವರು ದೂರು ಕೊಟ್ಟಿದ್ದಾರೆ.

ಇಲ್ಲಿನ ನಾಯಗಾಂವ್ ಎಂಬ ಹಳ್ಳಿಯ ಪೊಲೀಸರ ಬಳಿ ಆತ ರೈತ ಎಮ್ಮೆಯ ಜೊತೆಗೆ ದೂರು ನೀಡುತ್ತಿರುವುದು ಹಾಗೂ ಪೊಲೀಸರ ಸಹಾಯ ಕೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈತರನ್ನು ಬಾಬುಲಾಲ್ ಜಾತವ್ (45) ಎಂದು ಗುರುತಿಸಲಾಗಿದೆ. ಅವರು ನಾಯಗಾಂವ್ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಎಮ್ಮೆ ಹಾಲು ಕರೆಯಲು ಅನುವು ಮಾಡಿಕೊಡುತ್ತಿಲ್ಲ ಎಂದು ಅವರು ದೂರು ನೀಡಿರುವ ಬಗ್ಗೆ ಪೊಲೀಸ್ ಅಧಿಕಾರಿ ಅರವಿಂದ್ ಶಾ ಪಿಟಿಐಗೆ ಹೇಳಿಕೆ ನೀಡಿದ್ದಾರೆ.

ದೂರಿನಲ್ಲಿ ಆ ಎಮ್ಮೆಯ ಮೇಲೆ ಮಾಟ ಮಂತ್ರ ಪ್ರಯೋಗಿಸಲಾಗಿದೆ ಎಂದು ಹೇಳಿರುವ ಬಗ್ಗೆ ಕೂಡ ಉಲ್ಲೇಖಿಸಲಾಗಿದೆ. ಕೆಲವು ಗ್ರಾಮಸ್ಥರ ಹೇಳಿಕೆಯಂತೆ ಎಮ್ಮೆಯ ಮೇಲೆ ವಶೀಕರಣ ಮಂತ್ರ ಪ್ರಯೋಗ ಮಾಡಲಾಗಿದೆ. ಹೀಗೆ ದೂರು ನೀಡಿ ನಾಲ್ಕು ಗಂಟೆ ಬಳಿಕ ಆ ರೈತ ಮತ್ತೆ ಪೊಲೀಸ್ ಠಾಣೆಯ ಮುಂದೆ ಹಾಜರಾಗಿದ್ದಾರೆ. ಆಗಲೂ ಎಮ್ಮೆಯನ್ನು ಕೂಡಿಕೊಂಡು ಅವರು ಠಾಣೆಗೆ ಬಂದಿದ್ದಾರೆ. ಈ ಬಗ್ಗೆಯೂ ಪೊಲೀಸರು ಹೇಳಿಕೆ ಕೊಟ್ಟಿದ್ದಾರೆ.

ಸಹಾಯ ಕೇಳಿ, ದೂರು ನೀಡಲು ಬಂದಿದ್ದ ರೈತರಿಗೆ ಹಳ್ಳಿಯ ಪಶು ವೈದ್ಯರ ಬಳಿ ತೆರಳಲು ಹೇಳಿದ್ದೆವು ಎಂದು ಪೊಲೀಸರು ತಿಳಿಸಿದ್ದಾರೆ. ಆ ಬಳಿಕ, ರೈತ ತನ್ನ ಎಮ್ಮೆಯ ಜೊತೆಗೆ ಮತ್ತೆ ಠಾಣೆಗೆ ಬಂದಿದ್ದಾರೆ. ಎಮ್ಮೆಯು ಹಾಲು ಕೊಡಲು ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿ ಅವರು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಹೀಗೆ ಪ್ರಕರಣ ಸುಖಾಂತ್ಯ ಕಂಡಿದೆ.

ಇದನ್ನೂ ಓದಿ: ನಮ್ಮ ಎಮ್ಮೆ-ನಮ್ಮ ಹೆಮ್ಮೆ! ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ, ಧಾರವಾಡಿ ಎಮ್ಮೆಗೆ ಕಡೆಗೂ ಸಿಕ್ಕಿತು ರಾಷ್ಟ್ರೀಯ ಮಾನ್ಯತೆ

ಇದನ್ನೂ ಓದಿ: ಕಲಬುರಗಿ: ದನದ ಚರ್ಮ ಸಾಗಾಟ ಮಾಡುತ್ತಿದ್ದ ಲಾರಿ ಜಪ್ತಿ; 9 ಟನ್ ಗೋವು, ಎಮ್ಮೆ, ಕುರಿಗಳ ಚರ್ಮ ವಶ