ಜ. 26ರಂದು 4 ರೈತ ಮುಖಂಡರ ಹತ್ಯೆಗೆ ಸಂಚು.. ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಪ್ರತಿಭಟನಾ ರೈತರು
ನಮಗೆ ಈ ಕೆಲಸ ಮಾಡುವಂತೆ ಹೇಳಿದ್ದು ಓರ್ವ ಪೊಲೀಸ್, ಹಿಂಸಾಚಾರ ನಡೆಸಿದರೆ 10 ಮಂದಿಗೂ ತಲಾ 10,000 ರೂ. ಕೊಡುವುದಾಗಿ ಹೇಳಿದ್ದಾರೆ ಎಂದೂ ಈ ವ್ಯಕ್ತಿ ತಿಳಿಸಿದ್ದಾನೆ.
ನವದೆಹಲಿ: ಜನವರಿ 26ರಂದು ನಡೆಯಲಿರುವ ಟ್ರ್ಯಾಕ್ಟರ್ ಱಲಿ ವೇಳೆ ಅತಿದೊಡ್ಡ ಹಿಂಸಾಚಾರ ನಡೆಸಲು 10 ಜನರ ಗುಂಪೊಂದು ಯೋಜನೆ ರೂಪಿಸಿತ್ತು. ಅವರು ಅಂದು ಪೊಲೀಸರ ಸೋಗಿನಲ್ಲಿ ಬಂದು ಇಡೀ ಪ್ರತಿಭಟನೆಯ ಸ್ವರೂಪವನ್ನು ಬದಲಿಸುವುದಲ್ಲದೆ, ರೈತರೆಡೆಗೆ ಶೂಟ್ ಮಾಡಲು ಮತ್ತು ನಾಲ್ವರು ರೈತ ಸಂಘಟನೆಗಳ ಮುಖಂಡರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ದೆಹಲಿ-ಹರ್ಯಾಣದ ಸಿಂಘು ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತ ಮುಖಂಡರು ಆರೋಪಿಸಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ನಿನ್ನೆ ಕೇಂದ್ರ ಸರ್ಕಾರದೊಂದಿಗಿನ 11ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಅದರ ಬೆನ್ನಲ್ಲೇ ರಾತ್ರಿ ರೈತ ಮುಖಂಡರು ಸುದ್ದಿಗೋಷ್ಠಿಯನ್ನು ನಡೆಸಿದ್ದಲ್ಲದೆ, ಕಪ್ಪು ಬಣ್ಣದ ಬಟ್ಟೆ ಧರಿಸಿ, ಮುಖಮುಚ್ಚಿಕೊಂಡಿರುವ ವ್ಯಕ್ತಿಯೋರ್ವನನ್ನೂ ಸುದ್ದಿಗೋಷ್ಠಿಯಲ್ಲಿ ಪರಿಚಯಿಸಿದ್ದಾರೆ. ಜ. 26ರಂದು ಹಿಂಸಾಚಾರ ನಡೆಸಲು ಯೋಜನೆ ರೂಪಿಸಿದ ತಂಡದಲ್ಲಿ ಈತನೂ ಇದ್ದಾನೆ ಎಂದು ಹೇಳಿದ್ದಾರೆ.
ನಮ್ಮ ಹೋರಾಟವನ್ನು ದುರ್ಬಳಕೆ ಮಾಡಿಕೊಳ್ಳುವುದರ ಬಗ್ಗೆ ನಮಗೆ ಮಾಹಿತಿಯಿತ್ತು. ಹಾಗಾಗಿ ನಾವೂ ಕೂಡ ಗಮನಹರಿಸಿದ್ದೆವು. ಮಾಸ್ಕ್ ಹಾಕಿಕೊಂಡಿದ್ದ ಈ ವ್ಯಕ್ತಿ ಪ್ರತಿಭಟನಾ ಸ್ಥಳದಲ್ಲಿ ಬಂದು ಇಲ್ಲಸಲ್ಲದ ವದಂತಿ ಹಬ್ಬಿಸುತ್ತಿದ್ದ. ರೈತರ ತಲೆಗೆ ಏನೇನೋ ತುಂಬುತ್ತಿದ್ದ. ಅದನ್ನು ಗಮನಿಸಿದ ನಾವು, ಹಿಡಿದು ವಿಚಾರಣೆ ಮಾಡಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಏನಿತ್ತು ಯೋಜನೆ? ನಮ್ಮ ತಂಡದಲ್ಲಿ ಇಬ್ಬರು ಮಹಿಳೆಯರು ಸೇರಿ, 10 ಮಂದಿ ಇದ್ದೇವೆ. ಜನವರಿ 26ರಂದು ಟ್ರ್ಯಾಕ್ಟರ್ ಱಲಿಯಲ್ಲಿ ಪಾಲ್ಗೊಳ್ಳಲು ತೆರಳುವ ರೈತರನ್ನು ತಡೆಯಲು ಪೊಲೀಸರ ಸೋಗಿನಲ್ಲಿ ಬರುವ ಯೋಜನೆ ರೂಪಿಸಿದ್ದೆವು. ಅಷ್ಟೇ ಅಲ್ಲ, ರೈತರು ಟ್ರ್ಯಾಕ್ಟರ್ ಱಲಿ ನಿಲ್ಲಿಸದೇ ಇದ್ದರೆ ನಾವು ಅವರೆಡೆಗೆ ಶೂಟ್ ಮಾಡುವ ಪ್ಲ್ಯಾನ್ ಕೂಡ ಇತ್ತು. ಅದರಲ್ಲಿ ನಾವು ಹತ್ಯೆ ಮಾಡಬೇಕಾದ ನಾಲ್ವರ ಫೊಟೋ ಕೂಡ ನಮ್ಮಲ್ಲಿತ್ತು ಎಂದು ಮಾಸ್ಕ್ ಧರಿಸಿದ ವ್ಯಕ್ತಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾಗಿ ಎಎನ್ಐ ಸುದ್ದಿ ಸಂಸ್ಥೆ ತಿಳಿಸಿದೆ.
ಸಂಚಿನ ಹಿಂದೆ ಪೊಲೀಸ್ ನಮಗೆ ಈ ಕೆಲಸ ಮಾಡುವಂತೆ ಹೇಳಿದ್ದು ಓರ್ವ ಪೊಲೀಸ್. ಹಿಂಸಾಚಾರ ನಡೆಸಿದರೆ 10 ಮಂದಿಗೂ ತಲಾ 10,000 ರೂ. ಕೊಡುವುದಾಗಿ ಹೇಳಿದ್ದಾರೆ ಎಂದೂ ಈ ವ್ಯಕ್ತಿ ತಿಳಿಸಿದ್ದಾನೆ. ಈತನ ತಂಡದಲ್ಲಿ ಇರುವ ಇನ್ಯಾರ ಪತ್ತೆಯೂ ಆಗಿಲ್ಲ. ಒಟ್ಟಿನಲ್ಲಿ ಪ್ರತಿಭಟನೆ ದಿನ ಥೇಟ್ ಪೊಲೀಸರಂತೆ ಸಿದ್ಧರಾಗಿ ಬಂದು ರೈತರ ಮೇಲೆ ಲಾಠಿಚಾರ್ಜ್ ಮಾಡುವುದು, ಈ ಗಲಾಟೆಯಲ್ಲಿ ನಾಲ್ವರು ರೈತ ಮುಖಂಡರನ್ನು ಹತ್ಯೆ ಮಾಡುವುದೇ ಉದ್ದೇಶವಾಗಿತ್ತು ಎಂದು ಹೇಳಿಕೊಂಡಿದ್ದಾನೆ. ಸದ್ಯ ಈ ವ್ಯಕ್ತಿಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.
Published On - 12:13 pm, Sat, 23 January 21