ದೆಹಲಿ: ಹಿಂಸಾಚಾರದ ಹೆಸರಿನಲ್ಲಿ ರೈತ ಪ್ರತಿಭಟನೆಯನ್ನು ಹತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದೆ. ಕೇಂದ್ರ ಸರ್ಕಾರ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಮೋದಿ ಸರ್ಕಾರ ದೇಶದ ರೈತರ ಜೀವನ ನಾಶಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು.
ಪ್ರತಿಭಟನಾಕಾರರು ಕೆಂಪುಕೋಟೆ ಬಳಿಗೆ ಹೋಗಿದ್ದು ಹೇಗೆ, ಪ್ರತಿಭಟನಾಕಾರರನ್ನು ಕೆಂಪುಕೋಟೆ ಒಳಗೆ ಬಿಟ್ಟವರು ಯಾರು ಎಂದು ಕೈ ನಾಯಕ ಸರ್ಕಾರವನ್ನು ಪ್ರಶ್ನಿಸಿದರು. ಎಲ್ಲದಕ್ಕೂ ಕೇಂದ್ರ ಗೃಹ ಸಚಿವಾಲಯ ಉತ್ತರಿಸಬೇಕಾಗಿದೆ ಎಂದೂ ರಾಹುಲ್ ಗಾಂಧಿ ಹೇಳಿದರು. ಮೋದಿ ಸರ್ಕಾರ ರೈತರಿಂದ ಎಲ್ಲವನ್ನೂ ಕಸಿದುಕೊಳ್ಳುತ್ತಿದೆ ಎಂದು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆರೋಪ ಮಾಡಿದರು.
ರೈತರೇ ಹೋರಾಟ ಮುಂದುವರಿಸಿ, ನಿಮ್ಮ ಜತೆ ನಾವಿದ್ದೇವೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಬೇಡಿ ಎಂದು ಪ್ರತಿಭಟನಾ ನಿರತರಿಗೆ ರಾಹುಲ್ ಕರೆ ನೀಡಿದರು. ಕೇಂದ್ರ ಸರ್ಕಾರ ರೈತರಿಗೆ ನಿರಂತರವಾಗಿ ಅವಮಾನ ಮಾಡುತ್ತಿದೆ. ಕೃಷಿ ತಿದ್ದುಪಡಿ ಕಾಯ್ದೆಯಿಂದ ಬಂಡವಾಳಶಾಹಿಗಳಿಗೆ ಲಾಭವಿದೆ. ಅವುಗಳಿಂದ ರೈತರಿಗೆ ಲಾಭವಿಲ್ಲ ಎಂದು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಹರಿಹಾಯ್ದರು.
ಧರಣಿ ನಿರತ ರೈತರ ಜೊತೆ ಚರ್ಚೆ ನಡೆಸಿ ಸಮಸ್ಯೆ ಪರಹರಿಸಿ. ಈ ಸಮಸ್ಯೆಗೆ ಇರುವ ಪರಿಹಾರವೆಂದರೆ ನೂತನ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರುವುದು. ಕೇಂದ್ರ ಈ ಬಗ್ಗೆ ಯೋಚಿಸಬೇಕು. ರೈತರು ಮನೆಗೆ ಮರಳುತ್ತಾರೆ ಎಂದು ತಿಳಿಯುವುದು ಬೇಡ ಎಂದು ರಾಹುಲ್ ಗಾಂಧಿ ಮಾತನಾಡಿದರು.
Budget 2021 | ರೈತರ ಖಾತೆಗೆ ಹೆಚ್ಚು ಹಣ, ಕಿಸಾನ್ ಸಮ್ಮಾನ್ ಮೊತ್ತ ₹10,000ಕ್ಕೆ ಏರುವ ನಿರೀಕ್ಷೆ
Published On - 5:56 pm, Fri, 29 January 21