ಅಲಹಾಬಾದ್: ಕೇಂದ್ರದ ನೂತನ ಕೃಷಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತೀಯ ಕಿಸಾನ್ ಯೂನಿಯನ್ (BKU) ಮತ್ತು ಇತರ ರೈತ ಸಂಘಟನೆಗಳು ಡಿಸೆಂಬರ್ ಅಂತ್ಯದವರೆಗೆ ತಮ್ಮ ಹೋರಾಟ ಮುಂದುವರಿಸುವ ಸೂಚನೆ ಲಭ್ಯವಾಗಿದೆ. ಈ ಬಗ್ಗೆ ಬಿಕೆಯು ವಕ್ತಾರ, ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿಕೆ ನೀಡಿದ್ದಾರೆ.
ಶೀಘ್ರವೇ ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ರಾಕೇಶ್ ಟಿಕಾಯತ್, ಡಿಸೆಂಬರ್ವರೆಗೆ ರೈತ ಹೋರಾಟ ಮುಂದುವರಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್ತನಕವೂ ರೈತರ ಆಂದೋಲನ ಮುಂದುವರಿಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಧಾನ್ಯಗಳ ಖರೀದಿದಾರರು ಒಂದು ಕ್ವಿಂಟಾಲ್ ಭತ್ತಕ್ಕೆ 1,850 ರೂಪಾಯಿಗಳ ಕನಿಷ್ಠ ಬೆಂಬಲ ಬೆಲೆಯನ್ನು ನೀಡಬೇಕು ಎಂದು ಕೇಳಿ. ಅಲ್ಲಿಯವರೆಗೆ ಒಂದು ಭತ್ತವನ್ನೂ ನೀಡಬೇಡಿ ಎಂದು ಬಂಗಾಳದ ರೈತರಿಗೆ ರಾಕೇಶ್ ಟಿಕಾಯತ್ ಸಲಹೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈ ಕುರಿತು ಮಾತನಾಡಿದ ಟಿಕಾಯತ್, ಮುಂದೆ ದೇಶದ ಇತರ ಭಾಗಗಳಿಗೂ ತೆರಳಿ, ಕನಿಷ್ಠ ಬೆಂಬಲ ಬೆಲೆ ಕಾನೂನಿನ ಅಗತ್ಯಗಳನ್ನು ಮನವರಿಕೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಪ್ರಸ್ತುತ ಬಿಹಾರದಲ್ಲಿ ಭತ್ತವನ್ನು ಅತಿ ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತಿದ್ದಾರೆ. ಒಂದು ಕ್ವಿಂಟಾಲ್ಗೆ 750ರಿಂದ 800 ರೂಪಾಯಿಗೆ ಭತ್ತ ತೆಗೆದುಕೊಳ್ಳುತ್ತಿದ್ದಾರೆ. ರೈತರಿಗೆ ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಚಿತಪಡಿಸುವ ಸೂಕ್ತ ಕಾನೂನು ಬೇಕು ಎಂದು ಟಿಕಾಯತ್ ಆಗ್ರಹಿಸಿದ್ದಾರೆ.
ನಾನು ದೆಹಲಿಯಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಲು ಬಯಸಿಲ್ಲ. ಬದಲಾಗಿ ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಬೇಕು ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ. ಮಾರ್ಚ್ 14 ಮತ್ತು 15ರಂದು ಮಧ್ಯ ಪ್ರದೇಶ, ಮಾರ್ಚ್ 17ರಂದು ರಾಜಸ್ಥಾನದ ಗಂಗಾನಗರ, ಮಾರ್ಚ್ 18ರಂದು ದೆಹಲಿ, ಘಾಜಿಪುರ್ನ ಯುಪಿ ಗೇಟ್, ಮಾರ್ಚ್ 19ರಂದು ಒಡಿಸ್ಸಾ ಹಾಗೂ ಮಾರ್ಚ್ 21 ಮತ್ತು 22ರಂದು ಕರ್ನಾಟಕಕ್ಕೂ ಟಿಕಾಯತ್ ಭೇಟಿ ನೀಡಲಿದ್ದಾರೆ.
ಕೇಂದ್ರದ ನೂತನ ಕೃಷಿ ತಿದ್ದುಪಡಿ ಕಾಯ್ದೆಗಳಿಂದ ಸಣ್ಣ ಸಣ್ಣ ಅಂಗಡಿಗಳು ಮುಚ್ಚುವಂತಾಗಲಿದೆ. ಕೇವಲ ದೊಡ್ಡ ವ್ಯಾಪಾರಿ ಮಳಿಗೆಗಳು ಮಾತ್ರ ಉಳಿಯುತ್ತವೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ಈ ಕಾನೂನು ಸಹಾಯ ಮಾಡಲಿದೆ ಎಂಬುದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ವಾದವಾಗಿದೆ.
ಕೇಂದ್ರ ಸರ್ಕಾರದ ಚುಕ್ಕಾಣಿಯನ್ನು ಒಂದು ರಾಜಕೀಯ ಪಕ್ಷದ ಹಿಡಿತದಲ್ಲಿ ಇರುತ್ತಿದ್ದರೆ ಈಗಾಗಲೇ ರೈತರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತಿದ್ದರು. ಆದರೆ ಈ ಸರ್ಕಾರ ಉದ್ಯಮಿಗಳಿಂದ ನಡೆಯುತ್ತಿದೆ. ಹಾಗಾಗಿ ಇಡೀ ದೇಶವನ್ನು ಅವರು ಮಾರಲು ಹೊರಟಿದ್ದಾರೆ ಎಂದು ಟಿಕಾಯತ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
Published On - 11:13 pm, Sun, 14 March 21