ದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಫೆ.18ರಂದು ದೇಶಾದ್ಯಂತ ರೈಲು ತಡೆ ಚಳವಳಿ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಫೆ.18ರಂದು ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ರೈಲು ತಡೆ ನಡೆಸಲು ಮೋರ್ಚಾದ ವಕ್ತಾರ ದರ್ಶನ್ ಪಾಲ್ ಕರೆ ನೀಡಿದ್ದಾರೆ.
ಮೂರು ನೂತನ ಕೃಷಿ ವಿಧೇಯಕಗಳ ವಿರುದ್ಧ ತಮ್ಮ ಮುಷ್ಕರವನ್ನು ತೀವ್ರಗೊಳಿಸಲು ನಿರ್ಧರಿಸಿರುವ ರೈತ ಸಂಘಟನೆಗಳು ಫೆಬ್ರುವರಿ 18ರಂದು ದೇಶದಾದ್ಯಂತ 4-ಗಂಟೆಗಳ ಅವಧಿಗೆ ‘ರೇಲ್ ರೋಕೊ’ ಚಳವಳಿ ಮಾಡುವುದಾಗಿ ಬುಧವಾರದಂದು ಘೋಷಿಸಿದ್ದಾರೆ.
ಮುಷ್ಕರದ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಬಿಡುಗಡೆ ಮಾಡಿರುವ ಪ್ರಕಟಣೆಯೊಂದರಲ್ಲಿ ಫೆಬ್ರುವರಿ 12 ರಿಂದ ರಾಜಸ್ತಾನದಲ್ಲಿ ಟೋಲ್ ಸಂಗ್ರಹಿಸುವುದಕ್ಕೆ ಅವಕಾಶ ನೀಡುವುದಿಲ್ಲವೆಂದು ಹೇಳಿದೆ.
ಏತನ್ಮಧ್ಯೆ, ಬುಧವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹೊಸ ಕೃಷಿ ಕಾಯ್ದೆಗಳು ಐಚ್ಛಿಕವಾಗಿವೆಯೇ ಹೊರತು ಕಡ್ಡಾಯವಲ್ಲ ಎಂದಿದ್ದಾರೆ. ಸರ್ಕಾರವು ರೈತರ ಬಗ್ಗೆ ಅಪಾರ ಗೌರವವನ್ನಿಟ್ಟುಕೊಂಡಿದೆ. ವಿವಾದಾತ್ಮಕ ಕಾಯ್ದೆಗಳಿಗೆ ಸಂಬಂಧಿಸಿದಂತೆ ಅವರ ತಾರ್ಕಿಕ ಸಲಹೆಗಳನ್ನು ಅಂಗೀಕರಿಸಲು ಸರ್ಕಾರ ಸಿದ್ಧವಿದೆ ಎಂದರು.
ಇಂದು ಮಾಧ್ಯಮದವರೊಂದಿಗೆ ಮಾತಾಡಿದ ಭಾರತ್ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್, ಕೇಂದ್ರದಲ್ಲಿ ಸರ್ಕಾರ ಬದಲಾಗುವಂತೆ ಮಾಡುವ ಯಾವುದೇ ಉದ್ದೇಶ ರೈತರಿಗಿಲ್ಲ, ಆದರೆ ಸರ್ಕಾರ ತಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಹೇಳಿದರು. ತಮ್ಮ ಒಕ್ಕೂಟದ ನಾಯಕರು ದೇಶದ ಬೇರೆಬೇರೆ ಭಾಗಗಳಿಗೆ ತೆರಳಿ ಚಳುವಳಿಯನ್ನು ಹಬ್ಬಿಸಲಿದ್ದಾರೆ ಅಂತಲೂ ಟಿಕಾಯತ್ ಹೇಳಿದರು.
ಮಂಗಳವಾರದಂದು ನಡೆದ ಬೆಳವಣಿಗೆಯೊಂದರಲ್ಲಿ ದೆಹಲಿ ಪೊಲೀಸ್ ಗಣರಜ್ಯೋತ್ಸವ ದಿನದಂದು ಕೆಂಪುಕೋಟೆಯ ಬಳಿ ನಡೆದ ಗಲಭೆಗೆ ಕಾರಣನಾಗಿದ್ದ ಪಂಜಾಬಿ ನಟ ದೀಪ್ ಸಿಧುವನ್ನು ಬಂಧಿಸಿದ್ದ್ದಾರೆ.
ಹೊಸ ಕೃಷಿ ಕಾಯಿದೆಗಳು ಕನಿಷ್ಠ ಬೆಂಬಲ ಬೆಲೆ ಪದ್ಧತಿಯನ್ನು ತೊಡೆದು ಹಾಕಿ ತಮ್ಮನ್ನು ಉದ್ದಿಮೆಗಳ ಶೋಷಣೆಗೆ ಗುರಿಮಾಡಲಿವೆ ಎಂಬ ಆತಂಕವನ್ನು ರೈತ ಸಂಘಟನೆಗಳು ವ್ಯಕ್ತಪಡಿಸುತ್ತಿವೆ. ಅದರೆ ಅವರ ಆತಂಕವನ್ನು ನಿರಾಧಾರ ಎಂದು ಹೇಳುತ್ತಿರುವ ಕೇಂದ್ರವು ಹೊಸ ಕಾಯಿದೆಗಳು ರೈತರಿಗೆ ಉತ್ತಮ ಅವಕಾಶಗಳನ್ನು ಹೊತ್ತು ತರಲಿವೆ ಮತ್ತು ಕೃಷಿ ಪದ್ಧತಿಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ನೆರವಾಗಲಿವೆ ಎಂದು ಹೇಳಿದೆ.
From February 12, all road toll plazas in Rajasthan will be made toll free. On February 14, candle march, 'mashaal juloos' & other programs will be organized across country remembering sacrifice of martyred soldiers in the Pulwama attack: Dr Darshan Pal, Samyukta Kisan Morcha
— ANI (@ANI) February 10, 2021
Published On - 9:13 pm, Wed, 10 February 21