Priyanka Gandhi: ಕಾಂಗ್ರೆಸ್ಗೆ ಅಧಿಕಾರ ಕೊಡಿ, ಕೃಷಿ ಕಾಯ್ದೆ ರದ್ದು ಮಾಡುತ್ತೇವೆ- ಪ್ರಿಯಾಂಕಾ ಗಾಂಧಿ
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲು ಇನ್ನೂ ಒಂದು ವರ್ಷ ಬಾಕಿ ಇದೆ. ಹೀಗಿರುವಾಗಲೇ, ರಾಜ್ಯದಲ್ಲಿ ರೈತರ ಜತೆ ಕಾಂಗ್ರೆಸ್ ಸಭೆಗಳನ್ನು ನಡೆಸುತ್ತಿದೆ.
ನವದೆಹಲಿ: ಕಾಂಗ್ರೆಸ್ಗೆ ಅಧಿಕಾರ ಕೊಡಿ, ನಾವು ಕೃಷಿ ಕಾಯ್ದೆಯನ್ನು ರದ್ದು ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಗುಡುಗಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಇದೇ ವಿಚಾರವನ್ನು ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುವ ಸೂಚನೆ ನೀಡಿದ್ದಾರೆ.
ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಕಿಸಾನ್ ಪಂಚಾಯತ್ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ಬಿಜೆಪಿ ವಿರುದ್ಧ ಹರಿಹಾಯ್ದರು. ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮೂರು ಕೃಷಿ ಕಾಯ್ದೆಗಳು ಅಪಾಯ ತಂದೊಡ್ಡುವಂತಹದು. ನಮಗೆ ಅಧಿಕಾರ ನೀಡಿದರೆ, ಈ ಮೂರು ಕಾಯ್ದೆಗಳನ್ನು ರದ್ದು ಮಾಡುತ್ತೇವೆ. ಈ ಕಾಯ್ದೆ ರದ್ದಾಗುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕಾನೂನಿನಿಂದ ಕನಿಷ್ಠ ಬೆಂಬಲ ಬೆಲೆ ಎನ್ನುವ ಆಯ್ಕೆ ರೈತರಿಂದ ಕೈತಪ್ಪಲಿದೆ. ಇದರಿಂದ ರೈತರ ಧ್ವನಿ ಕುಗ್ಗಿ ಹೋಗಿ, ಕೋಟ್ಯಾಧಿಪತಿಗಳ ಧ್ವನಿ ಏರಲಿದೆ ಎಂದು ಅವರು ಆರೋಪಿಸಿದರು.
ಸಹರಾನ್ಪುರದಲ್ಲಿ ಪ್ರಿಯಾಂಕಾ ಬರುವುದಕ್ಕೂ ಮೊದಲೇ ಕೊರೊನಾ ಕಾರಣ ನೀಡಿ ಹೆಚ್ಚು ಜನ ಸೇರುವುದರ ಮೇಲೆ ನಿಷೇಧ ಹೇರಲಾಗಿತ್ತು. ಇದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ವಿರುದ್ಧ ಬಿಜೆಪಿ ಹೀನಾಯ ತಂತ್ರಗಳನ್ನು ಉಪಯೋಗಿಸುತ್ತಿದೆ ಎಂದು ಆರೋಪಿಸಿದರು.
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲು ಇನ್ನೂ ಒಂದು ವರ್ಷ ಬಾಕಿ ಇದೆ. ಹೀಗಿರುವಾಗಲೇ, ರಾಜ್ಯದಲ್ಲಿ ರೈತರ ಜತೆ ಕಾಂಗ್ರೆಸ್ ಸಭೆಗಳನ್ನು ನಡೆಸುತ್ತಿದೆ. ಈ ಮೂಲಕ ಬಿಜೆಪಿಯನ್ನು ಸೋಲಿಸಲು ಈಗಿನಿಂದಲೇ ತಂತ್ರ ರೂಪಿಸುತ್ತಿದೆ.
ಇದನ್ನೂ ಓದಿ: ಬೆಂಬಲಿಸಿ ರಾಷ್ಟ್ರಪತಿ ಭೇಟಿಗೆ ತೆರಳಿದ ನಿಯೋಗ; ಪ್ರಿಯಾಂಕಾ ಗಾಂಧಿ ವಶಕ್ಕೆ ಪಡೆದು, ಬಿಡುಗಡೆ