ಮುಸ್ಲಿಂ ಹೆಣ್ಣುಮಕ್ಕಳು ಮೈನೆರೆದ ತಕ್ಷಣ ಮದುವೆಗೆ ಅರ್ಹರು: ಪಂಜಾಬ್-ಹರ್ಯಾಣ ಹೈಕೋರ್ಟ್ ತೀರ್ಪು
ಬಾಲ್ಯ ವಿವಾಹ ಕಾಯ್ದೆ (2006) ಪ್ರಕಾರ ಭಾರತದ ಯಾವುದೇ ವ್ಯಕ್ತಿ 18 ವರ್ಷ ತುಂಬುವುದರಳೊಗೆ ವಿವಾಹವಾದರೆ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ.
ನವದೆಹಲಿ: 18 ವರ್ಷ ತುಂಬದಿದ್ದರೂ ಮುಸ್ಲಿಂ ಹೆಣ್ಣುಮಕ್ಕಳು ಮೈನೆರೆದ ತಕ್ಷಣ ಮದುವೆ ಆಗಬಹುದು. ಇದಕ್ಕೆ ಮುಸ್ಲಿಂ ವೈಯಕ್ತಿಕ ಕಾನೂನು ಸಮ್ಮತಿಸುತ್ತದೆ ಎಂದು ಪಂಜಾಬ್-ಹರ್ಯಾಣ ಹೈಕೋರ್ಟ್ ತೀರ್ಪು ನೀಡಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ (2006) ಪ್ರಕಾರ ಭಾರತದಲ್ಲಿ 18 ವರ್ಷಕ್ಕಿಂತ ಕಡಿಮೆ ವಯೋಮಾನದ ಯುವತಿಯರು ಮದುವೆಯಾದರೆ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ಈ ಕಾನೂನಿನ ಹಿನ್ನೆಲೆಯಲ್ಲಿ ಪಂಜಾಬ್-ಹರ್ಯಾಣ ಹೈಕೋರ್ಟ್ ತೀರ್ಪನ್ನು ಹಲವರು ‘ವಿವಾದಾತ್ಮಕ’ ಎಂದು ವಿಶ್ಲೇಷಿಸುತ್ತಿದ್ದಾರೆ.
ಸರ್ ದಿನ್ಶಾ ಫರ್ದುಂಜಿ ಮುಲ್ಲಾ ಅವರು ಬರೆದಿರುವ ‘ಪ್ರಿನ್ಸಿಪಲ್ಸ್ ಆಫ ಮೊಹಮ್ಮದನ್ ಲಾ’ (ಮೊಹಮದ್ದೀಯರ ಕಾನೂನಿನ ತತ್ವಗಳು) ಪುಸ್ತಕದ 195ನೇ ವಿಧಿಯನ್ನು ಉಲ್ಲೇಖಿಸಿ ಹೈಕೋರ್ಟ್ ಈ ತೀರ್ಪು ನೀಡಿದೆ. ಪ್ರೌಢಾವಸ್ಥೆ ತಲುಪುವ ಮುಸ್ಲಿಂ ಹುಡುಗಿ ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹ ಆಗಬಹುದು ಎಂದು ಹೈಕೋರ್ಟ್ ಹೇಳಿದೆ.
ಮುಸ್ಲಿಂ ಕಾನೂನಿನ ಪ್ರಕಾರ ಪ್ರೌಢಾವಸ್ಥೆಗೆ ಬರುವುದು ಮತ್ತು ಮೆಜಾರಿಟಿ ಎರಡೂ ಒಂದೇ. ಹೀಗಾಗಿ ಮುಸ್ಲಿಂ ಸಮುದಾಯದವರು 15ನೇ ವರ್ಷಕ್ಕೆ ಮೆಜಾರಿಟಿ ಪಡೆದುಕೊಂಡಿರುತ್ತಾರೆ. ಪ್ರೌಢಾವಸ್ಥೆಗೆ ಬಂದ ನಂತರ ಅವರು ಬೇಕಾದವರನ್ನು ಮದುವೆ ಆಗಬಹುದು. ಪಾಲಕರಿಗೆ ಇದರಲ್ಲಿ ಮಧ್ಯ ಪ್ರವೇಶಿಸುವ ಹಕ್ಕಿಲ್ಲ. ಆದರೆ, ಕೆಲ ಸಂಬಂಧಿಕರಿಂದ ಈ ಹಕ್ಕು ತೊಂದರೆಗೀಡಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಈ ವಾದ ಆಲಿಸಿದ ನಂತರ ಮುಸ್ಲಿಂ ಹುಡುಗಿ ಮುಸ್ಲಿಂ ವೈಯಕ್ತಿಕ ಕಾನೂನಿಗೆ ಒಳಪಟ್ಟಿರುತ್ತಾಳೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಎರಡನೇ ಅರ್ಜಿದಾರರ (ಹುಡುಗಿ) ವಯಸ್ಸು 17 ವರ್ಷ. ಆಕೆ ತನ್ನಿಷ್ಟದ ಹುಡುಗುನನ್ನು ಮದುವೆ ಆಗಿದ್ದಾಳೆ. ಮೊದಲನೇ ಅರ್ಜಿದಾರನ (ಪುರುಷ) ವಯಸ್ಸು 36 ಎಂದು ಹೇಳಲಾಗಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಇಬ್ಬರದ್ದೂ ಮದುವೆ ಆಗುವ ವಯಸ್ಸು. ಹುಡುಗ-ಹುಡುಗಿ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆ ಆಗಿದ್ದಾರೆ ಎನ್ನುವ ಕಾರಣಕ್ಕೆ ನಾವು ಅವರ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಮೊಹಾಲಿ ಪೊಲೀಸರು ಇವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಇದನ್ನೂ ಓದಿ: Ghulam Nabi Azad: ಹಿಂದೂಸ್ತಾನಿ ಮುಸ್ಲಿಂ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ; ಗುಲಾಂ ನಬಿ ಆಜಾದ್