ತೆಲುಗು ನಟ ಪವನ್ ಕಲ್ಯಾಣ್ ಕಾರ್ ಹಿಂಬಾಲಿಸಿದ ಅನುಮಾನಾಸ್ಪದ ವ್ಯಕ್ತಿಗಳು: ಸ್ಟಾರ್ ಮನೆ ಎದುರು ನಡುರಸ್ತೆಯಲ್ಲಿ ಮಧ್ಯರಾತ್ರಿ ಜಗಳ

ಹೀಗೆ ಪವನ್ ಕಲ್ಯಾಣ್​ರ ಕಾರು ಹಿಂಬಾಲಿಸುತ್ತಿದ್ದವರು ಅಭಿಮಾನಿಗಳು ಅಲ್ಲ ಎಂಬುದು ಅವರ ಗಮನಕ್ಕೆ ಬಂದಿತ್ತು.

ತೆಲುಗು ನಟ ಪವನ್ ಕಲ್ಯಾಣ್ ಕಾರ್ ಹಿಂಬಾಲಿಸಿದ ಅನುಮಾನಾಸ್ಪದ ವ್ಯಕ್ತಿಗಳು: ಸ್ಟಾರ್ ಮನೆ ಎದುರು ನಡುರಸ್ತೆಯಲ್ಲಿ ಮಧ್ಯರಾತ್ರಿ ಜಗಳ
ಪವನ್ ಕಲ್ಯಾಣ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 03, 2022 | 7:30 AM

ಹೈದರಾಬಾದ್: ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ‘ಪವರ್​ಸ್ಟಾರ್’ ಎಂದೇ ಖ್ಯಾತರಾಗಿರುವ ಪವನ್​ಕಲ್ಯಾಣ್ (Pavan Kalyan) ಹತ್ತಾರು ಹಿಟ್ ಸಿನಿಮಾ ಕೊಟ್ಟವರು. ಇತ್ತೀಚೆಗೆ ರಾಜಕೀಯದಲ್ಲಿ ಸಕ್ರಿಯವಾಗಿರುವ ಅವರು ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್ ನೇತೃತ್ವದ ಜಗನ್​ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ನಿಯಮಿತವಾಗಿ ಟೀಕೆ ಮಾಡುತ್ತಿದ್ದಾರೆ. ಆಂಧ್ರ ಸರ್ಕಾರವು ವಿಶಾಖಪಟ್ಟಣ ನಗರದಲ್ಲಿ ‘ವಿಶಾಖ ಗರ್ಜನ’ ಕಾರ್ಯಕ್ರಮ ಆಯೋಜಿಸಿರುವ ದಿನದಂದೇ ಪವನ್ ಕಲ್ಯಾಣ್ ‘ಜನವಾಣಿ’ ಸಮಾವೇಶ ನಡೆಸಲು ಮುಂದಾಗಿದ್ದರು. ಇದು ಗೊಂದಲಗಳಿಗೆ ಕಾರಣವಾಗಿ, ಸಚಿವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಹಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸುವಷ್ಟು ಪರಿಸ್ಥಿತಿ ವಿಷಮಿಸಿತ್ತು.

ಸಮಾವೇಶ ಆಯೋಜಿಸುವ ಸಂಬಂಧ ಪವನ್ ಕಲ್ಯಾಣ್ ವಿಶಾಖಪಟ್ಟಣಕ್ಕೆ ಹೋಗಿದ್ದರು. ಸಮಾವೇಶ ಸ್ಥಳಕ್ಕೆ ತೆರಳುವ ಮೊದಲೇ ಅವರು ಹಿಂದಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ನಿರ್ದಿಷ್ಟವಾಗಿ ಇಂಥದ್ದೇ ಕಾರಣ ಎಂಬ ಬಗ್ಗೆ ಪವನ್ ಕಲ್ಯಾಣ್ ಈವರೆಗೆ ಸ್ಪಷ್ಟಪಡಿಸಿಲ್ಲ. ನಂತರದ ದಿನಗಳಲ್ಲಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ರಾಜಕೀಯ ಕಾರ್ಯಪಡೆಯ ಅಧ್ಯಕ್ಷ ನಂದೆರ್ಲಾ ಮನೋಹರ್, ‘ಕೆಲ ಅನುಮಾನಾಸ್ಪದ ವ್ಯಕ್ತಿಗಳು ಪವನ್ ಕಲ್ಯಾಣ್ ಕಾರು ಹಿಂಬಾಲಿಸುತ್ತಿದ್ದರು. ಪವನ್ ಕಲ್ಯಾಣ್ ಮನೆ ಹಾಗೂ ಪಕ್ಷದ ಕಚೇರಿ ಸುತ್ತಮುತ್ತಲೂ ಹಲವು ಅಪರಿಚಿತರು ಆಗಾಗ ಕಾಣಿಸಿಕೊಳ್ಳುತ್ತಿದ್ದರು’ ಎಂದು ಹೇಳಿದ್ದರು.

ಪವನ್ ಕಲ್ಯಾಣ್​ರ ಕಚೇರಿ ಸಿಬ್ಬಂದಿ ಈ ವಿದ್ಯಮಾನ ಗಮನಿಸಿದ್ದರು. ಹೀಗೆ ಪವನ್ ಕಲ್ಯಾಣ್​ರ ಕಾರು ಹಿಂಬಾಲಿಸುತ್ತಿದ್ದವರು ಅಭಿಮಾನಿಗಳು ಅಲ್ಲ ಎಂಬುದು ಅವರ ಗಮನಕ್ಕೆ ಬಂದಿತ್ತು. ಬುಧವಾರ ರಾತ್ರಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಬೈಕ್​ಗಳಲ್ಲಿ ಪವನ್ ಕಲ್ಯಾಣ್ ಮನೆಗೆ ಬಂದ ಅನುಮಾನಾಸ್ಪದ ವ್ಯಕ್ತಿಗಳು ಮನೆಯ ಗೇಟ್ ಎದುರು ವಾಹನಗಳನ್ನು ನಿಲ್ಲಿಸಿ, ಭದ್ರತಾ ಸಿಬ್ಬಂದಿಯೊಂದಿಗೆ ಜಗಳ ತೆಗೆದರು.

ಜಗಳದ ವಿಡಿಯೊ ಮಾಡಿಕೊಂಡಿದ್ದ ಭದ್ರತಾ ಸಿಬ್ಬಂದಿ ನಂತರ ಅದನ್ನು ಪಕ್ಷದ ತೆಲಂಗಾಣ ಉಸ್ತುವಾಗಿ ಶಂಕರ್ ಗೌಡ್ ಅವರಿಗೆ ಒದಗಿಸಿದರು. ಘಟನೆ ಕುರಿತು ಶಂಕರ್ ಗೌಡ್ ಇದೀಗ ಹೈದರಾಬಾದ್​ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪವನ್ ಕಲ್ಯಾಣ್ ಮನೆ ಎದುರು ನಡೆದ ಗಲಾಟೆಯ ಬಗ್ಗೆ ತೆಲುಗು ಭಾಷಿಕ ಎರಡೂ ರಾಜ್ಯಗಳಲ್ಲಿ ಇದೀಗ ಕಾವೇರಿದ ಚರ್ಚೆ ನಡೆಯುತ್ತಿದೆ. ಪವನ್ ಕಲ್ಯಾಣ್ ಮನೆ ಎದುರು ವಾಮಾಚಾರಕ್ಕೂ ಪ್ರಯತ್ನಿಸಲಾಗಿತ್ತು ಎಂದು ಕೆಲ ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಟ ಪವನ್ ಕಲ್ಯಾಣ್​ ಭೇಟಿ; ಇಲ್ಲಿದೆ ವಿಡಿಯೋ

Published On - 7:28 am, Thu, 3 November 22