ಕದ್ದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಲ್ಲಿ 5 ಲಕ್ಷ ರೂ. ಮಾಲು ವಾಪಸ್ ಮಾಲೀಕರಿಗೆ ಕೊರಿಯರ್ ಮಾಡಿದ ಕಳ್ಳರು!
ಕದ್ದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಲ್ಲಿ ಕಳ್ಳರು 5 ಲಕ್ಷ ರೂ. ಮಾಲು ಮಾಲೀಕರಿಗೆ ವಾಪಸ್ ಕೊರಿಯರ್ ಮಾಡಿರುವ ವಿಚಿತ್ರ ಘಟನೆ ವರದಿಯಾಗಿದೆ.
ಗಾಜಿಯಾಬಾದ್: ಕೆಲ ಕಳ್ಳರು ಹೇಗಿರ್ತಾರೆ? ಅವರು ಯಾಕೆ ಕಳ್ಳತನ ಮಾಡುತ್ತಾರೆ ಎನ್ನುವುದು ಊಹಿಸಲು ಅಸಾಧ್ಯ. ಯಾಕಂದ್ರೆ ಬೆಂಗಳೂರಿನಲ್ಲೊಬ್ಬ ಉಳ್ಳವರ ಮನೆಗೆ ಕನ್ನ ಹಾಕಿ ದಾನ ಧರ್ಮ ಮಾಡುತ್ತಿದ್ದ. ಇನ್ನು ಇಲ್ಲೊಬ್ಬ ಕಳ್ಳ ಕಳ್ಳತನ ಮಾಡಿದ ವಸ್ತುಗಳನ್ನು ವಾರಸುದಾರರಿಗೆ ಕೋರಿಯರ್ ಮೂಲಕ ವಾಪಸ್ ಕಳುಹಿಸಿದ್ದಾರೆ. ಆದ್ರೆ, ಕದ್ದಿರುವ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣದಲ್ಲಿ ಕೇವಲ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಾಪಸ್ ಕಳುಹಿಸಿದ್ದಾರೆ.
ಹೌದು… ಅಚ್ಚರಿ ಅನ್ನಿಸಿದರೂ ಸತ್ಯ. ಕಳ್ಳತನ ಮಾಡಿದ ವಸ್ತುಗಳನ್ನು ಕಳ್ಳರು ಕೊರಿಯರ್ ಮೂಲಕ ವಾಪಾಸ್ ಕಳುಹಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶದ ಗಾಜಿಯಾಬಾದ್ನ ರಾಜ್‍ನಗರದ ಫಾರ್ಚೂನ್ ಅಪಾರ್ಟ್‍ಮೆಂಟ್‍ನಲ್ಲಿ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಕಳ್ಳರು ವಾಪಾಸ್ ಕಳುಹಿಸಿದ್ದು ಕೇವಲ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು.
ಬೆಂಗಳೂರಿನಲ್ಲೊಬ್ಬ ರಾಬಿನ್ ಹುಡ್: ಉಳ್ಳವರ ಮನೆಗೆ ಕನ್ನ ಹಾಕಿ ದಾನ ಧರ್ಮ ಮಾಡುತ್ತಿದ್ದ ಕಳ್ಳನ ಬಂಧನ
ಅ.23ರಂದು ದೀಪಾವಳಿ ಹಿನ್ನೆಲೆಯಲ್ಲಿ ಮನೆ ಲಾಕ್ ಮಾಡಿಕೊಂಡು ಕುಟುಂಬದವರು ಹುಟ್ಟೂರಿಗೆ ತೆರಳಿದ್ದರು. ಅ.27ರಂದು ಸಂಜೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಆ ಬಳಿಕ ಮನೆ ಮಾಲೀಕರಾದ ಪ್ರೀತಿ ಸಿರೋಹಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ನಂದಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಪ್ರಕಟವಾದ ಬಳಿಕ ಅ. 31ರಂದು ಸಂತ್ರಸ್ತರಿಗೆ ಕೊರಿಯರ್ ಬಂದಿದೆ. ಕೋರಿಯರ್ನಲ್ಲಿ ಮನೆಯಲ್ಲಿ ಕಳ್ಳತನವಾದ ಚಿನ್ನಾಭರಣಗಳು ಇದ್ದವು. ಕಳುಹಿಸಿದವರ ವಿಳಾಸ ನೋಡಿದಾಗ ರಾಜದೀಪ್ ಜ್ಯುವೆಲ್ಲರ್ಸ್, ಸರಾಫ್ ಬಝಾರ್, ಹಾಪುರ ಎಂಬ ವಿಳಾಸ ಇತ್ತು. ಇದನ್ನು ತೆರೆದು ನೋಡಿದಾಗ ನಮ್ಮದೇ ಪೆಟ್ಟಿಗೆಯಲ್ಲಿದ್ದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಇದ್ದವು. ಉಳಿದ ಆಭರಣ ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದು ಪ್ರೀತಿ ಸಿರೋಹಿ ಅವರ ಮಗ ಹರ್ಷ ಹೇಳಿದ್ದಾರೆ. ಘಟನೆ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.