ದೆಹಲಿ: ಏರ್ ಇಂಡಿಯಾದ ಎಲ್ಲ ಬಾಕಿಯನ್ನೂ ತಕ್ಷಣ ಚುಕ್ತ ಮಾಡಬೇಕು ಎಂದು ಕೇಂದ್ರ ಹಣಕಾಸು ಇಲಾಖೆಯು ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಬುಧವಾರ ಸೂಚಿಸಿದೆ. ಮುಂದಿನ ಆದೇಶದವರೆಗೆ ಕೇಂದ್ರ ಸರ್ಕಾರದ ಎಲ್ಲ ಅಧಿಕಾರಿಗಳೂ ಏರ್ ಇಂಡಿಯಾದ ಟಿಕೆಟ್ಗಳನ್ನು ಹಣ ತೆತ್ತು ಖರೀದಿಸಬೇಕು ಎಂದು ನಿರ್ದೇಶನ ನೀಡಿದೆ.
ಟಾಟಾ ಸನ್ಸ್ಗೆ ಮಾರಾಟವಾದ ನಂತರ ಕೇಂದ್ರ ಸರ್ಕಾರಕ್ಕೆ ಸಾಲದ ಮೇಲೆ ಸೇವೆ ಒದಿಸುವ ಪರಿಪಾಠವನ್ನು ಏರ್ ಇಂಡಿಯಾ ಕೈಬಿಟ್ಟಿತ್ತು. ಈ ಬೆಳವಣಿಗೆಯ ನಂತರ ಹಣಕಾಸು ಸಚಿವಾಲಯವು ಮೇಲಿನ ನಿರ್ದೇಶನವನ್ನು ನೀಡಿದೆ.
ಏರ್ ಇಂಡಿಯಾ ಖರೀದಿಗೆ ಟಾಟಾ ಸನ್ಸ್ ಗ್ರೂಪ್ ಸಲ್ಲಿಸಿದ್ದ ಬಿಡ್ ಅಂತಿಮಗೊಂಡ ನಂತರ ಟಿಕೆಟ್ ಖರೀದಿಗೆ ನೀಡುತ್ತಿದ್ದ ಸಾಲ ಸೌಲಭ್ಯವನ್ನು ಏರ್ ಇಂಡಿಯಾ ನಿಲ್ಲಿಸಿದೆ. ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಏರ್ ಇಂಡಿಯಾದ ಬಾಕಿ ಚುಕ್ತ ಮಾಡಬೇಕು ಎಂದು ಮೆಮೊ ಮೂಲಕ ಸೂಚಿಸಿದೆ. ತಮ್ಮ ಅಧೀನದಲ್ಲಿರುವ ವಿವಿಧ ನಿಗಮ ಮಂಡಳಿಗಳು ಹಾಗೂ ಕಚೇರಿಗಳಿಗೆ ಈ ಬೆಳವಣಿಗೆಯನ್ನು ಮನದಟ್ಟು ಮಾಡಿಕೊಡಬೇಕು ಎಂದು ಹಣಕಾಸು ಇಲಾಖೆ ಸೂಚಿಸಿದೆ.
ಷೇರು ಖರೀದಿ ಒಪ್ಪಂದಕ್ಕೆ ಸಹಿ
ಏರ್ ಇಂಡಿಯಾವನ್ನು 18,000 ಕೋಟಿ ರೂಪಾಯಿಗೆ ಮಾರಾಟ ಮಾಡಲು ಟಾಟಾ ಸನ್ಸ್‌ನೊಂದಿಗೆ ಷೇರು ಖರೀದಿ ಒಪ್ಪಂದಕ್ಕೆ ಸರ್ಕಾರ ಸೋಮವಾರ (ಅ.25) ಸಹಿ ಹಾಕಿದೆ.
ಏರ್ ಇಂಡಿಯಾದ ಹೂಡಿಕೆ ಹಿಂತೆಗೆತಕ್ಕಾಗಿ ಟಾಟಾ ಸನ್ಸ್‌ನೊಂದಿಗೆ ಸರ್ಕಾರವು ಷೇರು ಖರೀದಿ ಒಪ್ಪಂದಕ್ಕೆ ಸಹಿ ಮಾಡಿದೆ. ಈ ಒಪ್ಪಂದವು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಗ್ರೌಂಡ್ ಹ್ಯಾಂಡ್ಲಿಂಗ್ ಆರ್ಮ್ AISATS ಮಾರಾಟವನ್ನು ಒಳಗೊಂಡಿದೆ. ಸ್ಪೈಸ್‌ಜೆಟ್ ಪ್ರವರ್ತಕ ಅಜಯ್ ಸಿಂಗ್ ನೇತೃತ್ವದ ಒಕ್ಕೂಟ ರೂ. 15,100 ಕೋಟಿಗೆ ಮಾಡಿದ್ದ ಆಫರ್ ಅನ್ನು ಟಾಟಾ ಸೋಲಿಸಿತು. ಅಂದಹಾಗೆ ನಷ್ಟವನ್ನು ಉಂಟುಮಾಡುತ್ತಿದ್ದ ಏರ್ಇಂಡಿಯಾದಿಂದ ತನ್ನ ಶೇ 100ರಷ್ಟು ಪಾಲನ್ನು ಮಾರಾಟ ಮಾಡಲು ಸರ್ಕಾರವು ನಿಗದಿಪಡಿಸಿದ ಮೀಸಲು ಬೆಲೆ ರೂ. 12,906 ಕೋಟಿ ಆಗಿತ್ತು.
ಇದನ್ನೂ ಓದಿ: Air India ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ ಸನ್ಸ್: ಮಾಧ್ಯಮ ವರದಿ ತಪ್ಪು ಎಂದ ಸರ್ಕಾರ
ಇದನ್ನೂ ಓದಿ: Air India Deal: ಏರ್ಇಂಡಿಯಾ ಷೇರು ಖರೀದಿಯ 18 ಸಾವಿರ ಕೋಟಿ ರೂಪಾಯಿ ಒಪ್ಪಂದಕ್ಕೆ ಟಾಟಾ ಸನ್ಸ್- ಸರ್ಕಾರ ಸಹಿ