
ಲಕ್ನೋ, ಜೂನ್ 22: ಉತ್ತರ ಪ್ರದೇಶದ ಲಕ್ನೋದ ಅಲಿಗಂಜ್ ಪ್ರದೇಶದಲ್ಲಿರುವ 3 ಅಂತಸ್ತಿನ ಕಮರ್ಷಿಯಲ್ ಕಾಂಪ್ಲೆಕ್ಸ್ನಲ್ಲಿ ಇಂದು ಮಧ್ಯಾಹ್ನ ಭೀಕರ ಬೆಂಕಿ ಅವಘಡ (Fire Accident) ಸಂಭವಿಸಿದೆ. ಈ ಕಟ್ಟಡದಲ್ಲಿ ಕೋಚಿಂಗ್ ಸೆಂಟರ್ ಮತ್ತು ಗೇಮಿಂಗ್ ಜೋನ್ ಇತ್ತು. ಬೆಂಕಿ ಮತ್ತು ದಟ್ಟ ಹೊಗೆಯಿಂದ ಪಾರಾಗಲು ವಿದ್ಯಾರ್ಥಿಗಳು ಕಟ್ಟಡದ ಕಿಟಕಿಗಳಿಂದ ಜಿಗಿದು ಪ್ರಾಣ ಉಳಿಸಿಕೊಂಡಿರುವ ದೃಶ್ಯಗಳು ಎದೆ ನಡುಗಿಸುವಂತಿವೆ. ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ಆರಿಸಲು ಪ್ರಯತ್ನಿಸುತ್ತಿವೆ. ಬೆಂಕಿ ಇಡೀ ಕಟ್ಟಡವನ್ನು ಆವರಿಸಿಕೊಂಡಿದೆ.
ಇಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಅಲಿಗಂಜ್‌ನ ಉಷಾ ಮೆಹ್ತಾ ಮಾರ್ಗದಲ್ಲಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ವೇಗವಾಗಿ ಹರಡಿದ ಪರಿಣಾಮವಾಗಿ ಕೋಚಿಂಗ್ ಸೆಂಟರ್‌ನಲ್ಲಿದ್ದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕಟ್ಟಡದ ಒಳಗೆ ಸಿಲುಕಿಕೊಂಡರು. ದಟ್ಟ ಹೊಗೆಯಿಂದ ಉಸಿರುಗಟ್ಟಿದ ವಿದ್ಯಾರ್ಥಿಗಳು ಪ್ರಾಣ ಭಯದಿಂದ ಮೊದಲ ಮಹಡಿಯ ಕಿಟಕಿಗಳಿಂದ ಜಿಗಿದಿದ್ದಾರೆ. ಈ ಸಂದರ್ಭದಲ್ಲಿ ಕೆಲವರಿಗೆ ಗಂಭೀರ ಗಾಯಗಳಾಗಿವೆ. ಈ ವೇಳೆ ಸುಮಾರು 14ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಮತ್ತು ಹೈಡ್ರಾಲಿಕ್ ಪ್ಲಾಟ್‌ಫಾರ್ಮ್ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿತು.
ಇದನ್ನೂ ಓದಿ: ಕೊಲ್ಕತ್ತಾದ ಸರ್ಕಾರಿ ಕಟ್ಟಡದಲ್ಲಿ ಅತಿದೊಡ್ಡ ಬೆಂಕಿ ಅವಘಡ; 4,000 ಇವಿಎಂಗಳು ಸುಟ್ಟು ಕರಕಲು
ಬೆಂಕಿ ಹೊತ್ತಿಕೊಂಡಿದ್ದಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕಟ್ಟಡದ ಸುರಕ್ಷತಾ ಕ್ರಮಗಳ ಲೋಪದ ಬಗ್ಗೆಯೂ ಇದೀಗ ತನಿಖೆಯಾಗಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
#WATCH | Uttar Pradesh Deputy CM Brajesh Pathak oversees the search and rescue operation at Lucknow coaching institute fire accident site pic.twitter.com/HMzxi6wXSN
— ANI (@ANI) June 22, 2026
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಅಗ್ನಿ ಅವಘಡದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ತಕ್ಷಣವೇ ಸ್ಥಳಕ್ಕೆ ತಲುಪುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಮತ್ತು ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಕ್ಷಣಾ ಪ್ರಯತ್ನಗಳ ಬಗ್ಗೆ ನಿರಂತರ ನಿಗಾ ವಹಿಸುವಂತೆ ಅವರು ಆಡಳಿತ ಮಂಡಳಿಗೆ ನಿರ್ದೇಶಿಸಿದ್ದಾರೆ. ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:09 pm, Mon, 22 June 26