ಛತ್ತೀಸ್‌ಗಢದಲ್ಲಿ ಮರಳು ಮಾಫಿಯಾ ಅಟ್ಟಹಾಸ: ಬಿಜೆಪಿ ನಾಯಕನ ಕಾರಿಗೆ ಬೆಂಕಿ ಹಚ್ಚಿ ಕೊಲೆ
ಛತ್ತೀಸ್‌ಗಢದ ಕೋರಿಯಾ ಜಿಲ್ಲೆಯಲ್ಲಿ ಮರಳು ಮಾಫಿಯಾದ ಕ್ರೌರ್ಯ ಮಿತಿಮೀರಿದೆ. ಬಿಜೆಪಿ ನಾಯಕ ಭರತ್ ಸಿಂಗ್ ಅವರನ್ನು ಟ್ರಕ್‌ಗಳ ಮಧ್ಯೆ ಸಿಲುಕಿಸಿ, ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತ ದಹನ ಮಾಡಲಾಗಿದೆ. ಈ ಭೀಕರ ಘಟನೆಯಲ್ಲಿ ಭರತ್ ಸಿಂಗ್ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಮರಳು ಗಣಿಗಾರಿಕೆ ನಿಯಂತ್ರಣಕ್ಕಾಗಿ ನಡೆಯುತ್ತಿದ್ದ ವಿವಾದವೇ ಈ ಕೊಲೆಗೆ ಕಾರಣ. ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ಕುಟುಂಬ ಸಿಬಿಐ ತನಿಖೆಗೆ ಒತ್ತಾಯಿಸಿದೆ.

ಛತ್ತೀಸ್ಗಢ, ಜೂನ್ 18: ಛತ್ತೀಸ್‌ಗಢದಲ್ಲಿ ಮರಳು ಮಾಫಿಯಾ ಅಟ್ಟಹಾಸ ತಾರಕಕ್ಕೇರಿದ್ದು, ಬಿಜೆಪಿ(BJP) ನಾಯಕನ ಕಾರನ್ನು ಎರಡು ಟ್ರಕ್‌ಗಳ ನಡುವೆ ಸಿಲುಕಿಸಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಬಿಜೆಪಿ ನಾಯಕ ಭರತ್ ಸಿಂಗ್ (ಲಲ್ಲಾ ಸಿಂಗ್) ಅವರ ಫಾರ್ಚೂನರ್ ಕಾರನ್ನು ಟ್ರಕ್‌ಗಳ ಮಧ್ಯೆ ಸಿಲುಕಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಈ ಭೀಕರ ದುರಂತದಲ್ಲಿ ಭರತ್ ಸಿಂಗ್ ಸೇರಿದಂತೆ ಒಟ್ಟು ಮೂವರು ಸಜೀವ ದಹನವಾಗಿದ್ದಾರೆ.
ಸೋನ್ಹತ್ ಪೊಲೀಸ್ ಠಾಣೆ ವ್ಯಾಪ್ತಿಯ ನೌಗೈನ್ ಗ್ರಾಮದಲ್ಲಿ ಮರಳು ಗಣಿಗಾರಿಕೆ ವಿವಾದ ಇತ್ಯರ್ಥಪಡಿಸಲು ಭರತ್ ಸಿಂಗ್ ತೆರಳಿದ್ದರು. ಈ ವೇಳೆ ಹೊಂಚು ಹಾಕಿದ್ದ ಎದುರಾಳಿ ಬಣ, ಅವರ ಫಾರ್ಚೂನರ್ ಕಾರಿನ ಮುಂದೆ ಮತ್ತು ಹಿಂದೆ ಟ್ರಕ್‌ಗಳನ್ನು ಅಡ್ಡಲಾಗಿ ನಿಲ್ಲಿಸಿ ತಪ್ಪಿಸಿಕೊಳ್ಳದಂತೆ ಲಾಕ್ ಮಾಡಿದೆ.
ಕಾರನ್ನು ಸುತ್ತುವರಿದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ, ಭರತ್ ಸಿಂಗ್ ಸ್ಥಳದಲ್ಲೇ ಕಾರಿನೊಳಗೆ ಸಾವನ್ನಪ್ಪಿದ್ದಾರೆ. ಅವರೊಂದಿಗೆ ಇದ್ದ ಸೋದರಸಂಬಂಧಿ ನಾಗೇಂದ್ರ ಸಿಂಗ್ ಹಾಗೂ ಚಿಕಿತ್ಸೆ ವೇಳೆ ವೀರೇಂದ್ರ ಸಿಂಗ್ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ಮಯಾಂಕ್ ಸಿಂಗ್ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿವಾದಕ್ಕೆ ಅಸಲಿ ಕಾರಣವೇನು? ಭರತ್ ಸಿಂಗ್ (ಠಾಕೂರ್) ಬಣ ಮತ್ತು ಮತ್ತೊಬ್ಬ ಬಿಜೆಪಿ ನಾಯಕ ಮನೋಜ್ ತ್ರಿಪಾಠಿ ಕುಟುಂಬದ ನಡುವೆ ಈ ಭಾಗದ ಮರಳು ಗಣಿಗಾರಿಕೆ ಮತ್ತು ಸಾಗಣೆಯ ನಿಯಂತ್ರಣಕ್ಕಾಗಿ ತಿಂಗಳುಗಳಿಂದ ಜಗಳ ನಡೆಯುತ್ತಿತ್ತು. ಮೊದಲು ಕೇವಲ ವ್ಯಾಪಾರದ ವಿವಾದವಾಗಿದ್ದ ಇದು, ನಂತರ ಸ್ಥಳೀಯ ಪ್ರಾಬಲ್ಯದ ರಕ್ತಸಿಕ್ತ ಯುದ್ಧವಾಗಿ ಮಾರ್ಪಟ್ಟಿದೆ.
ಮತ್ತಷ್ಟು ಓದಿ: ಗಂಗಾವತಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ: ಆರು ಜನ ಹಂತಕರಿಗೆ ಗಲ್ಲು ಶಿಕ್ಷೆ
ಪೊಲೀಸರು ಇದುವರೆಗೆ ಅಕ್ಷತ್ ತ್ರಿಪಾಠಿ, ವಿಶಾಲ್ ತ್ರಿಪಾಠಿ, ಸತ್ಯಪ್ರಕಾಶ್ ತ್ರಿಪಾಠಿ ಮತ್ತು ಮನ್ನು ತ್ರಿಪಾಠಿ ಎಂಬ ನಾಲ್ಕು ಮುಖ್ಯ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದ 5 ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದು ಆಕಸ್ಮಿಕ ಘಟನೆಯಲ್ಲ, ಪಕ್ಕಾ ಪ್ಲಾನ್ ಮಾಡಿ ನಡೆಸಿರುವ ಕೊಲೆ ಎಂದು ಆರೋಪಿಸಿರುವ ಮೃತರ ಕುಟುಂಬಸ್ಥರು, ಪ್ರಕರಣದ ತನಿಖೆಯನ್ನು ಸಿಬಿಐಗೆ (CBI) ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಿಯಾ ಜಿಲ್ಲೆಯ ಘಟನೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ತೀವ್ರವಾಗಿ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಿಎಂ ವಿಷ್ಣು ಕಠಿಣ ಕಾನೂನು ಕ್ರಮದ ಭರವಸೆ ನೀಡಿದ್ದಾರೆ.
ಕೊರಿಯಾ ಜಿಲ್ಲೆಯ ಇತಿಹಾಸದಲ್ಲೇ ಇಂತಹ ಕ್ರೂರ ಘಟನೆ ಎಂದೂ ನಡೆದಿರಲಿಲ್ಲ ಎಂದು ಸ್ಥಳೀಯ ಶಾಸಕ ಭಯ್ಯಾಲಾಲ್ ರಾಜ್‌ವಾಡೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸದ್ಯ ಇಡೀ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣವಿದ್ದು, ಭಾರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




