ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಓರ್ವ ಬಂಧನ
ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ರಜಪೂತ ನಾಯಕ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆಯು ರಾಜಸ್ಥಾನದಲ್ಲಿ ಭಾರಿ ಪ್ರತಿಭಟನೆಗಳನ್ನು ಹುಟ್ಟುಹಾಕಿತು. ಗೊಗಮೆಡಿ ಅವರ ಮನೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ, ಮೂವರು ಶೂಟರ್‌ಗಳಲ್ಲಿ ಒಬ್ಬನನ್ನು ನವೀನ್ ಸಿಂಗ್ ಶೇಖಾವತ್ ಎಂದು ಗುರುತಿಸಲಾಗಿದೆ
ದೆಹಲಿ ಡಿಸೆಂಬರ್ 09: ರಜಪೂತ (Rajput)ನಾಯಕ ಮತ್ತು ಕರ್ಣಿ ಸೇನಾ (Karni Sena) ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ (Sukhdev Singh Gogamedi) ಅವರನ್ನು ಜೈಪುರದ (Jaipur) ಮನೆಯಲ್ಲಿ “ಮನೆಗೆ ಬಂದ ಅತಿಥಿಗಳು” ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿನ ಮೊದಲ ಬಂಧನ ಇದಾಗಿದೆ. ಶೂಟರ್‌ಗಳಾದ ರೋಹಿತ್ ಮತ್ತು ನಿತಿನ್ ಅವರನ್ನು ಬೈಕ್‌ನಲ್ಲಿ ಪರಾರಿಯಾಗಲು, ಅವರನ್ನು ಅಜ್ಮೇರ್ ರಸ್ತೆಯಲ್ಲಿ ಡ್ರಾಪ್ ಮಾಡಲ ಸಹಾಯ ಮಾಡಿದ ರಾಮ್‌ವೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಈತ ನಿತಿನ್ ಇದ್ದ ಅದೇ ಹಳ್ಳಿಯಲ್ಲಿ ವಾಸಿಸುತ್ತಿದ್ದ ಎಂದಿದ್ದಾರೆ ಪೊಲೀಸ್.
ಸುಖದೇವ್ ಸಿಂಗ್ ಗೊಗಮೆಡಿ ಅವರು ಡಿಸೆಂಬರ್ 5 ರಂದು ಮಧ್ಯಾಹ್ನ ಜೈಪುರದ ತಮ್ಮ ಮನೆಯಲ್ಲಿ ನಾಲ್ಕು ಜನರೊಂದಿಗೆ ಚಹಾ ಕುಡಿಯುತ್ತಿದ್ದರು. ಇದ್ದಕ್ಕಿದ್ದಂತೆ, ಸಂಭಾಷಣೆಯ ಮಧ್ಯದಲ್ಲಿ, ಇಬ್ಬರು ಪುರುಷರು ತಮ್ಮ ಕುರ್ಚಿಗಳಿಂದ ಎದ್ದು ಗೊಗಮೆಡಿ ಅವರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ರಜಪೂತ ನಾಯಕನ ಹತ್ಯೆಯು ರಾಜಸ್ಥಾನದಲ್ಲಿ ಭಾರಿ ಪ್ರತಿಭಟನೆಗಳನ್ನು ಹುಟ್ಟುಹಾಕಿತು. ಗೊಗಮೆಡಿ ಅವರ ಮನೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ, ಮೂವರು ಶೂಟರ್‌ಗಳಲ್ಲಿ ಒಬ್ಬನನ್ನು ನವೀನ್ ಸಿಂಗ್ ಶೇಖಾವತ್ ಎಂದು ಗುರುತಿಸಲಾಗಿದೆ. ಈತ ಕ್ರಾಸ್‌ಫೈರ್‌ನಲ್ಲಿ ಸಾವಿಗೀಡಾಗಿದ್ದಾನೆ. ಗೊಗಮೆಡಿ ಅವರ ಭದ್ರತಾ ಸಿಬ್ಬಂದಿಯೊಬ್ಬರು ಕೂಡ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಗ್ಯಾಂಗ್ ಸ್ಟರ್ ರೋಹಿತ್ ಗೋಡಾರಾ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದರು. ಹತ್ಯೆಯ ನಂತರ ನಾಯಕನ ಬೆಂಬಲಿಗರು ರಾಜಸ್ಥಾನ ಬಂದ್‌ಗೆ ಕರೆ ನೀಡಿದ್ದಾರೆ. ಅವರ ಬೆಂಬಲಿಗರು ಆಸ್ಪತ್ರೆಯ ಹೊರಭಾಗದಲ್ಲಿರುವ ಶಿಪ್ರಾ ಪಥ್ ರಸ್ತೆಯನ್ನು ತಡೆದು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಜೈಪುರದ ಜೊತೆಗೆ ರಾಜ್ಯದ ಚುರು, ಉದಯಪುರ, ಅಲ್ವಾರ್ ಮತ್ತು ಜೋಧಪುರ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯ ನಂತರ ಅಧಿಕಾರಕ್ಕೆ ಬಂದಿರುವ ಬಿಜೆಪಿ, ರಾಜ್ಯದಲ್ಲಿ ಇನ್ನೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸದಿದ್ದು, ಈ ಹತ್ಯೆಯ ಕುರಿತು ಭಯೋತ್ಪಾದನಾ ನಿಗ್ರಹ ಸಂಸ್ಥೆ ಎನ್‌ಐಎಯಿಂದ ತನಿಖೆ ನಡೆಸುವಂತೆ ಕೋರಿದೆ. ಇಬ್ಬರು ಪೊಲೀಸ್ ಸಿಬ್ಬಂದಿ – ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಮತ್ತು ಬೀಟ್ ಕಾನ್‌ಸ್ಟೆಬಲ್ – ನಿರ್ಲಕ್ಷ್ಯಕ್ಕಾಗಿ ಅಮಾನತುಗೊಂಡಿದ್ದಾರೆ ಎಂದು ನಾಯಕನ ಪತ್ನಿ ಶೀಲಾ ಶೇಖಾವತ್ ಡಿಸೆಂಬರ್ 7 ರಂದು ಸುದ್ದಿಗಾರರಿಗೆ ತಿಳಿಸಿದರು. ಆರೋಪಿಗಳನ್ನು 72 ರೊಳಗೆ ಬಂಧಿಸಲಾಗುವುದು ಎಂದು ನಮಗೆ ಭರವಸೆ ನೀಡಲಾಗಿದೆ ಎಂದಿದ್ದಾರೆ ಅವರು.
ಇದನ್ನೂ ಓದಿ: ಜೈಪುರದಲ್ಲಿ ಹಾಡಹಗಲೇ ಗುಂಡಿಕ್ಕಿ ಕರ್ಣಿ ಸೇನಾ ಅಧ್ಯಕ್ಷ ಸುಖದೇವ್ ಸಿಂಗ್ ಹತ್ಯೆ
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಹಲವು ಬಾರಿ ಪತ್ರ ಬರೆದಿದ್ದರೂ ತನ್ನ ಪತಿಗೆ ಭದ್ರತೆಯನ್ನು ಒದಗಿಸಿಲ್ಲ ಎಂದು ಶೇಖಾವತ್ ಈ ಹಿಂದೆ ಹೇಳಿಕೊಂಡಿದ್ದರು.
ಗೊಗಮೆಡಿ ಹತ್ಯೆಯ ನಂತರ ದಾಖಲಾದ ಎಫ್‌ಐಆರ್‌ನಲ್ಲಿ, ಪಂಜಾಬ್ ಪೊಲೀಸರು ಫೆಬ್ರವರಿಯಲ್ಲಿ ರಾಜಸ್ಥಾನದ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ಅವರಿಗೆ ತನ್ನ ಪತಿಯನ್ನು ಹತ್ಯೆ ಮಾಡುವ ಸಂಚಿನ ಬಗ್ಗೆ ಪತ್ರ ಬರೆದಿದ್ದಾರೆ ಎಂದು ಶೇಖಾವತ್ ಹೇಳಿದ್ದಾರೆ. ಜೈಪುರ ಭಯೋತ್ಪಾದನಾ ನಿಗ್ರಹ ದಳದಿಂದಲೂ ಇದೇ ರೀತಿಯ ಇನ್ಪುಟ್ ಬಂದಿದ್ದು, ಅಶೋಕ್ ಗೆಹ್ಲೋಟ್ ಮತ್ತು ಮಿಶ್ರಾ ಅವರು ಬೆದರಿಕೆಗಳ ಹೊರತಾಗಿಯೂ ಗೊಗಮೆಡಿಗೆ ಭದ್ರತೆಯನ್ನು ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ