ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿಗೆ ಮೊದಲ ಸಾವು: ಮೂರು ಹಂತದ ನಿರ್ಬಂಧಗಳು ಜಾರಿ

|

Updated on: Jun 25, 2021 | 10:55 PM

ಡೆಲ್ಟಾ ಮತ್ತು ಡೆಲ್ಟಾ ಪ್ಲಸ್​ ರೂಪಾಂತರಗಳು ಕೊರೊನಾ ಸೋಂಕಿನ ಮೂರನೇ ಅಲೆಯ ಭೀತಿಯನ್ನು ತೀವ್ರಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಕಠಿಣ ನಿರ್ಬಂಧ ವಿಧಿಸಲು ಮುಂದಾಗಿದೆ.

ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿಗೆ ಮೊದಲ ಸಾವು: ಮೂರು ಹಂತದ ನಿರ್ಬಂಧಗಳು ಜಾರಿ
ಪ್ರಾತಿನಿಧಿಕ ಚಿತ್ರ
Follow us on

ಮುಂಬೈ: ಮಹಾರಾಷ್ಟ್ರದಲ್ಲಿ ಶುಕ್ರವಾರ ಕೊರೊನಾ ವೈರಸ್​ನ ಡೆಲ್ಟಾ ಪ್ಲಸ್​ ರೂಪಾಂತರದಿಂದ ಮೊದಲ ಸಾವು ಸಂಭವಿಸಿದೆ. ಕೊರೊನಾ ಸೋಂಕಿನ ಹಲವು ಲಕ್ಷಣಗಳಿಂದ ಬಳಲುತ್ತಿದ್ದ ರತ್ನಗಿರಿ ಜಿಲ್ಲೆಯ 80 ವರ್ಷದ ಮಹಿಳೆ ಡೆಲ್ಟಾ ಪ್ಲಸ್​ ಸೋಂಕಿನಿಂದ ಮೃತರಾದ ಮೊದಲ ವ್ಯಕ್ತಿ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್​ ತೊಪೆ ಹೇಳಿದ್ದಾರೆ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್​ ರೂಪಾಂತರಗಳು ಕೊರೊನಾ ಸೋಂಕಿನ ಮೂರನೇ ಅಲೆಯ ಭೀತಿಯನ್ನು ತೀವ್ರಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಕಠಿಣ ನಿರ್ಬಂಧ ವಿಧಿಸಲು ಮುಂದಾಗಿದೆ.

ಡೆಲ್ಟಾ ಪ್ಲಸ್ ರೂಪಾಂತರವು ಗಂಭೀರ ಕಾಳಜಿಯ ರೂಪಾಂತರಿಯಾಗಿದೆ (Variant of Concern – VOC) ಎಂದು ಮಹಾರಾಷ್ಟ್ರ ಸರ್ಕಾರವು ಹೇಳಿಕೆಯೊಂದರಲ್ಲಿ ತಿಳಿಸಿತ್ತು. ವೇಗವಾಗಿ ಹರಡುವ ಗುಣ, ಸ್ವೀಕೃತ ದೇಹದ ಶ್ವಾಸಕೋಶದ ಜೀವಕೋಶಗಳನ್ನು ತೀವ್ರಗತಿಯಲ್ಲಿ ಹಾನಿಪಡಿಸುವುದು ಮತ್ತು ಮೊನೊಕ್ಲೊನಲ್ ಪ್ರತಿಕಾಯಗಳ ಸ್ಪಂದನೆಯನ್ನೂ ಕಡಿಮೆ ಮಾಡುವ ಮೂಲಕ ಡೆಲ್ಟಾ ರೂಪಾಂತರಿಯು ಅತ್ಯಂತ ಅಪಾಯಕಾರಿಯಾಗಿ ಮಾರ್ಪಟ್ಟಿದೆ.

ಡೆಲ್ಟಾ ರೂಪಾಂತರಿಯಿಂದ ಸೋಂಕು ತೀವ್ರಗತಿಯಲ್ಲಿ ಹರಡುವ ಅಪಾಯವಿರುವ ಕಾರಣ ರಾಜ್ಯ ಸರ್ಕಾರದ ಎಲ್ಲ ಹಂತಗಳ ಆಡಳಿತ ಘಟಕಗಳೂ ಚುರುಕಾಗಿ ಸ್ಪಂದಿಸಬೇಕಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಪ್ರತಿವಾರದ ಪಾಸಿಟಿವಿಟಿ ಪ್ರಮಾಣ ಮತ್ತು ಆಕ್ಸಿಜನ್ ಬೆಡ್​ ಆಕ್ಯುಪೆನ್ಸಿ ಲೆಕ್ಕಾಚಾರಗಳನ್ನು ಬದಿಗಿಟ್ಟು ಕನಿಷ್ಠ 3 ಹಂತದ ನಿರ್ಬಂಧಗಳನ್ನು ಜಾರಿಗೊಳಿಸಬೇಕಿದೆ ಎಂದು ಸರ್ಕಾರದ ಪ್ರಕಟಣೆ ಹೇಳಿದೆ.

ಮೂರು ಹಂತದ ನಿರ್ಬಂಧಗಳಲ್ಲಿ ಎಲ್ಲ ಅಂಗಡಿಗಳು ಮತ್ತು ವ್ಯಾಪಾರಿ ಸ್ಥಳಗಳು ಸಂಜೆ 4 ಗಂಟೆಯವರೆಗೆ ತೆರೆಯಬಹುದಾಗಿದೆ. ಮಾಲ್​, ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್​ಗಳಿಗೆ ನಿರ್ಬಂಧ ಮುಂದುವರಿಯಲಿದೆ. ರೆಸ್ಟೊರೆಂಟ್​ಗಳಲ್ಲಿ ಸಂಜೆ 4 ಗಂಟೆಯವರೆಗೆ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಗ್ರಾಹಕರಿಗೆ ಮಾತ್ರ ಪ್ರವೇಶ ನೀಡಬಹುದಾಗಿದೆ. ಸಂಜೆ 4 ಗಂಟೆಯ ನಂತರ ಕೇವಲ ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶವಿರುತ್ತದೆ.

ಹಲವು ಹಂತಗಳ ನಿರ್ಬಂಧದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಟ್ವೀಟ್ ಮಾಡಿದ್ದಾರೆ. ಎಲ್ಲಿ ಯಾವ ಹಂತದ ನಿರ್ಬಂಧ ಜಾರಿ ಮಾಡಬೇಕು ಎನ್ನುವುದರ ಬಗ್ಗೆ ಆರ್​ಟಿ-ಪಿಸಿಆರ್ ಪರೀಕ್ಷೆಗಳನ್ನೇ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಕೊವಿಡ್ ಲಸಿಕೆ ವಿತರಣೆಯ ವೇಗವನ್ನೂ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ದೇಶದ ವಿವಿಧ ರಾಜ್ಯಗಳಲ್ಲಿ ಈಚೆಗೆ ತಪಾಸಣೆಗೆ ಒಳಪಡಿಸಿದ 45 ಸಾವಿರ ಮಾದರಿಗಳ ಪೈಕಿ 48 ಮಂದಿಯಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿಯಿಂದ ಸೋಂಕು ಇರುವುದು ಖಚಿತವಾಗಿತ್ತು. ಮಹಾರಾಷ್ಟ್ರ ಸೇರಿದಂತೆ ಇತರ 10 ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಪತ್ತೆಯಾಗಿತ್ತು. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಅಂದರೆ 20 ಪ್ರಕರಣಗಳು ಪತ್ತೆಯಾಗಿದ್ದವು.

(First Death in Maharashtra from Delta Plus Variant of Coronavirus Strict Restrictions Implemented)

ಇದನ್ನೂ ಓದಿ: Delta Plus variant ದೇಶದಲ್ಲಿ 50 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆ, ಮಹಾರಾಷ್ಟ್ರದಲ್ಲಿ ಅತೀ  ಹೆಚ್ಚು: ಕೇಂದ್ರ ಸರ್ಕಾರ

ಇದನ್ನೂ ಓದಿ: Delta Plus ದೂರವಾದ ಆತಂಕ, ಮಹಾರಾಷ್ಟ್ರದಲ್ಲಿ ಈಗಾಗಲೇ ಡೆಲ್ಟಾ ಪ್ಲಸ್ ಕೊರೊನಾದಿಂದ ಬಹುತೇಕರು ಗುಣಮುಖ!!