ದೆಹಲಿ: ಭಾರತ ಸರ್ಕಾರದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಜಾರಿಗೆ ತಂದಿರುವ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮ 2021 (ಡಿಜಿಟಲ್ ಮೀಡಿಯಾ ನೀತಿಸಂಹಿತೆ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಮಾರ್ಗದರ್ಶಿ ಸೂತ್ರಗಳು) ಅಡಿಯಲ್ಲಿ ಗೂಗಲ್ ತನ್ನ ಮೊದಲ ಪಾರದರ್ಶಕ ವರದಿಯನ್ನು ಪ್ರಕಟಿಸಿದೆ. ವರದಿಯ ಅನ್ವಯ ಏಪ್ರಿಲ್ ತಿಂಗಳಲ್ಲಿ ಒಟ್ಟು 27,762 ದೂರುಗಳು ದಾಖಲಾಗಿವೆ. ಒಟ್ಟು 59,350 ಕಂಟೆಂಟ್ ತೆಗೆದುಹಾಕಲಾಗಿದೆ. ಗೂಗಲ್ ತನ್ನ ಸಮುದಾಯ ನಿಯಮಗಳು, ಉತ್ಪನ್ನ ನೀತಿಗಳು ಅಥವಾ ಇತರ ಯಾವುದೇ ಸ್ಥಳೀಯ ನಿಯಮಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ತೆಗೆದುಹಾಕುತ್ತದೆ.
ಭಾರತ ಸರ್ಕಾರ ಜಾರಿಗೆ ತಂದಿರುವ ಹೊಸ ಐಟಿ ನಿಯಮಗಳು ಅನ್ವಯ ಗೂಗಲ್, ಫೇಸ್ಬುಕ್ನಂಥ ಸಾಮಾಜಿಕ ಮಾಧ್ಯಮಗಳು (ಹುಡುಕು ತಾಣಗಳು) ಪ್ರತಿ ತಿಂಗಳು ದಾಖಲಾದ ಬಳಕೆದಾರರ ದೂರುಗಳ ಮೇಲೆ ಜರುಗಿಸಿದ ಕ್ರಮಗಳ ಮಾಹಿತಿಯನ್ನು ಪ್ರಕಟಿಸಬೇಕಿದೆ. ಈ ನಿಯಮಗಳನ್ನು ಕಳೆದ ಫೆಬ್ರುವರಿ ತಿಂಗಳಲ್ಲಿ ಪ್ರಕಟಿಸಲಾಗಿತ್ತು. ಈ ನಿಯಮಗಳು ಮೇ ತಿಂಗಳಿನಿಂದ ಜಾರಿಗೆ ಬಂದಿವೆ. ಈ ವರದಿಯಲ್ಲಿ ಪ್ರಕಟವಾಗಿರುವ ಕಂಟೆಂಟ್ ತೆಗೆದುಹಾಕಲು ಬಂದಿರುವ ಕೋರಿಕೆಗಳಲ್ಲಿ ಸರ್ಕಾರದಿಂದ ಬಂದಿರುವ ಸೂಚನೆಗಳು ಸೇರಿಲ್ಲ. ಇಂಥ ಕೋರಿಕೆಗಳನ್ನು ಗೂಗಲ್ 2009ರಿಂದ ಪ್ರತ್ಯೇಕವಾಗಿ ಪ್ರಕಟಿಸುತ್ತಿದೆ.
ಬರುವ ಕೋರಿಗಳನ್ನು ಪರಿಶೀಲಿಸಿ, ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿದ ನಂತರವೇ ಈ ವರದಿ ಪ್ರಕಟಿಸಲಾಗಿದೆ. ಹೀಗಾಗಿಯೇ ವರದಿ ಪ್ರಕಟವಾಗುವುದು ಎರಡು ತಿಂಗಳು ತಡವಾಯಿತು ಎಂದು ಗೂಗಲ್ ಹೇಳಿದೆ. ಸ್ವಯಂಚಾಲಿತ ವ್ಯವಸ್ಥೆಯಡಿ ಪತ್ತೆಯಾಗುವ ಆಕ್ಷೇಪಾರ್ಹ ಕಂಟೆಂಟ್ ಮತ್ತು ತನ್ನಿಂತಾನೆ ಡಿಲೀಟ್ ಆಗುವ ವ್ಯವಸ್ಥೆಯು ತೆಗೆದುಹಾಕಿರುವ ಕಂಟೆಂಟ್ನ ಮಾಹಿತಿ ಈ ವರದಿಯಲ್ಲಿ ಸೇರಿಲ್ಲ. ತೆಗೆದುಹಾಕಿರುವ ಲೈಂಗಿಕ ದೌರ್ಜನ್ಯ, ಲೈಂಗಿಕತೆಗೆ ಸಂಬಂಧಿಸಿದ ಆಕ್ಷೇಪಾರ್ಹ ಕಂಟೆಂಟ್ ಮಾಹಿತಿಯೂ ಈ ವರದಿಯಲ್ಲಿ ಸೇರಿಲ್ಲ. ಮುಂದಿನ ವರದಿಗಳಲ್ಲಿ ಈ ಮಾಹಿತಿ ಸೇರಿಸಲಾಗುವುದು ಎಂದು ಗೂಗಲ್ ಹೇಳಿದೆ.
ಗೂಗಲ್ ಪ್ರಕಟಿಸಿರುವ ವರದಿಯ ಪ್ರಕಾರ ಶೇ 96ರಷ್ಟು ದೂರುಗಳು (26,707) ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದ್ದು. ಶೇ 1.3ರಷ್ಟು (357) ಟ್ರೇಡ್ಮಾರ್ಕ್ಗೆ, ಶೇ 1ರಷ್ಟು (275) ಮಾನಹಾನಿಗೆ, ಶೇ 0.4 (114) ಕೃತಿಚೌರ್ಯ, ಶೇ 0.1 (37) ಸರ್ಕಮ್ವೆನ್ಷನ್ಗೆ ಸಂಬಂಧಿಸಿದದ್ದಾಗಿದೆ. ಬೌದ್ಧಿಕ ಕೃತಿಸ್ವಾಮ್ಯಕ್ಕೆ ಸಂಬಂಧಿಸಿದ ಕೆಲ ಕೋರಿಕೆಗಳೂ ಬಂದಿವೆ. ಬೌದ್ಧಿಕ ಕೃತಿಸ್ವಾಮ್ಯ ಮತ್ತು ಮಾನಹಾನಿಗೆ ಸಂಬಂಧಿಸಿದ ಕಾನೂನುಗಳ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿದ ಹಲವು ಕೋರಿಕೆಗಳು ಬಂದಿವೆ ಎಂದು ಗೂಗಲ್ ಹೇಳಿದೆ.
ಪ್ರತಿಯೊಂದು ಯುಆರ್ಎಲ್ ಅನ್ನೂ ಪ್ರತ್ಯೇಕ ಕಂಟೆಂಟ್ ಎಂದು ಪರಿಗಣಿಸಲಾಗಿದೆ. ಹೀಗಾಗಿ ಒಟ್ಟಾರೆ ದೂರುಗಳ ಸಂಖ್ಯೆಗಿಂತಲೂ ತೆಗೆದುಹಾಕಿರುವ ಕಂಟೆಂಟ್ ಸಂಖ್ಯೆ ಹೆಚ್ಚು ಎಂದು ಗೂಗಲ್ ತಿಳಿಸಿದೆ. ಒಂದು ನಿರ್ದಿಷ್ಟ ದೂರಿನಲ್ಲಿ ಹಲವು ವಿಚಾರಗಳು ಪ್ರಸ್ತಾಪವಾಗಿರಬಹುದು. ಇದು ಕಂಟೆಂಟ್ನ ಒಂದು ಅಥವಾ ಹಲವು ತುಣುಕುಗಳಿಗೆ ಸಂಬಂಧಿಸಿದ್ದು ಆಗಿರಬಹುದು ಎಂದು ಗೂಗಲ್ ಹೇಳಿದೆ. ಕೃತಿಚೌರ್ಯದ ದೂರು ಆಧರಿಸಿ ಅತಿಹೆಚ್ಚು ಅಂದರೆ, 58,391 ಕಂಟೆಂಟ್ ತೆಗೆದುಹಾಕಲಾಗಿದೆ. ಇದು ಒಟ್ಟಾರೆ ಕಂಟೆಂಟ್ ತೆಗೆದುಹಾಕಿರುವುದರ ಲೆಕ್ಕದಲ್ಲಿ ಶೇ 98ರಷ್ಟಾಗುತ್ತದೆ.
(first transparency report from google under the new IT rules of Indian Government)
ಇದನ್ನೂ ಓದಿ: ಪ್ಲಾಟ್‌ಫಾರ್ಮ್‌ಗಳ ದುರುಪಯೋಗದ ಬಗ್ಗೆ ಗೂಗಲ್, ಫೇಸ್‌ಬುಕ್ ಅಧಿಕಾರಿಗಳಿಗೆ ಸಂಸದೀಯ ಸಮಿತಿಯಿಂದ ಸಮನ್ಸ್
ಇದನ್ನೂ ಓದಿ: ಗೂಗಲ್ನಿಂದ ಮತ್ತೊಂದು ಎಡವಟ್ಟು; ತಮಿಳು ಚಿತ್ರದಲ್ಲಿ ರಾಜ್ಕುಮಾರ್ ಹೆಸರು