ಐಜಾಲ್: ಮಿಜೋರಾಂನ ಅನೇಕ ಭಾಗಗಳಲ್ಲಿ ಕಾಡ್ಗಿಚ್ಚು ಹಬ್ಬಿದ್ದು, ಅಪಾರ ಪ್ರಮಾಣದ ಹಾನಿ ಉಂಟುಮಾಡಿದೆ. ಹಲವು ಎಕರೆಗಳಷ್ಟು ಪ್ರದೇಶದಲ್ಲಿದ್ದ ಮರಗಿಡಗ, ಸಸ್ಯಗಳು ಸುಟ್ಟಿವೆ. ಭೂಮಿಯೆಲ್ಲ ಕಪ್ಪಾಗಿದೆ. ಮುಖ್ಯಮಂತ್ರಿ ಜೋರಮಥಂಗಾ ಅವರು ಕೇಂದ್ರದಿಂದ ನೆರವು ಕೇಳಿದ್ದಾರೆ ಎಂದು ಮಿಜೋರಾಂನ ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು ಪುನರ್ವಸತಿ ವಿಭಾಗ ತಿಳಿಸಿದೆ.
ಸದ್ಯದ ಮಟ್ಟಿಗೆ ಯಾವುದೇ ಜೀವ ಹಾನಿಯಾಗಿಲ್ಲ. ಹೆಚ್ಚಿನ ವರದಿ ಇನ್ನಷ್ಟೇ ಬರಬೇಕಿದೆ. ಮುಖ್ಯಮಂತ್ರಿ ಜೋರ್ಮಥಂಗಾ ಅವರು ಸಹಾಯ ಕೇಳಿದ ಹಿನ್ನೆಲೆಯಲ್ಲಿ ಭಾರತೀಯ ವಾಯುಸೇನೆ, ಲುಂಗ್ಲೇಯಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಬೆಂಕಿ ನಂದಿಸಲು ಎರಡು ಹೆಲಿಕಾಪ್ಟರ್ಗಳನ್ನು ಸ್ಥಳದಲ್ಲಿ ನಿಯೋಜಿಸಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ಇನ್ನು ರಾಜ್ಯ ಪರಿಸರ, ಅರಣ್ಯ ಸಚಿವ ಟಿ.ಜೆ.ಲಾಲ್ನುಟ್ಲುಂಗಾ ಮತ್ತು ಸೆರ್ಲುಯಿ ವಿಧಾನಸಭಾ ಕ್ಷೇತ್ರದ ಶಾಸಕ ಲಾಲ್ರಿನ್ಸಂಗ ರಾಲ್ಟೆ ಅವರು ಲುಂಗ್ಲೇಯಿ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದ್ದಾರೆ.
ಅತಿಹೆಚ್ಚು ಬೆಂಕಿಯ ತೀವ್ರತೆಗೆ ಒಳಗಾದ ಪ್ರದೇಶವೆಂದರೆ ಲುಂಗ್ಲೇಯಿ. ಈ ಲುಂಗ್ಲೇಯಿ ಹೊರತುಪಡಿಸಿದರೆ ಸರ್ಚಿಪ್, ಲಾಂಗ್ಟ್ಲೈ, ಹ್ನಾಥಿಯಲ್ ಜಿಲ್ಲೆಗಳಲ್ಲೂ ಕೂಡ ಅಪಾರ ಪ್ರಮಾಣದಲ್ಲಿ ಕಾಡ್ಗಿಚ್ಚು ಹಬ್ಬಿದೆ.
ಈ ಮೂರು ಜಿಲ್ಲೆಗಳ ಒಟ್ಟು 8 ಪ್ರದೇಶಗಳಲ್ಲಿ ಕಾಡ್ಗುಚ್ಚು ಕಾಣಿಸಿಕೊಂಡಿದೆ. ಅಲ್ಲದೆ, ಡಾರ್ಜೋ, ದಕ್ಷಿಣ ವನ್ಲೈಫೈ ಜಿಲ್ಲೆಗಳಲ್ಲೂ ಬೆಂಕಿ ಕಾಣಿಸಿಕೊಂಡಿದ್ದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ಕಡೆಗಳಲ್ಲೂ ಅಗ್ನಿಶಾಮಕದಳದ ಸಿಬ್ಬಂದಿ, ಅಸ್ಸಾಂ ರೈಫಲ್ಸ್ ಮತ್ತು ಗಡಿ ಭದ್ರತಾ ಪಡೆ, ಸ್ಥಳೀಯ ಸ್ವಯಂಸೇವಕರು ಸೇರಿಕೊಂಡು ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.
ಲುಂಗ್ಲೇಯಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು ಶನಿವಾರ ಮುಂಜಾನೆ 6-7ಗಂಟೆ ಹೊತ್ತಿಗೆ ಎಂದು ಅಲ್ಲಿನ ಡಿಸಿ ಎಂ. ಮಿಸೆಲ್ ತಿಳಿಸಿದ್ದಾರೆ. ಸದ್ಯ ಕೆಲವು ಪ್ರದೇಶಗಳಲ್ಲಿ ಬೆಂಕಿ ಪ್ರಮಾಣ ಸ್ವಲ್ಪಮಟ್ಟಿಗೆ ನಿಯಂತ್ರಣವಾಗಿದೆ ಎಂದೂ ಮಾಹಿತಿ ನೀಡಿದ್ದಾರೆ. ಇದು ಯಾರೋ ಬೇಕೆಂದೇ ಮಾಡಿದ ಕೆಲಸ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಮನೆಯಿಂದ ರಾಜೀವ್ ಹೊರ ಹೋಗಿದ್ದು ಎಷ್ಟು ಸರಿ? ಸಾಮಾಜಿಕ ಜಾಲತಾಣದಲ್ಲಿ ಜೋರಾಯ್ತು ಚರ್ಚೆ
ಲಾಕ್ಡೌನ್ನಲ್ಲೂ ಮನೆಯಿಂದ ಹೊರಬಂದ ಸಲ್ಮಾನ್ ಖಾನ್; ಆದ್ರೂ ಇದು ಮೆಚ್ಚುವ ಕೆಲಸ