ದೆಹಲಿ: ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕೊವಿಡ್ ದೃಢಪಟ್ಟಿದ್ದು ಸೋಮವಾರ ದೆಹಲಿಯ ಏಮ್ಸ್ಗೆ ದಾಖಲಾಗಿದ್ದಾರೆ.ಸಿಂಗ್ ಅವರಿಗೆ ಸಣ್ಣ ಪ್ರಮಾಣದಲ್ಲಿ ಜ್ವರ ಇತ್ತು ಎಂದು ಏಮ್ಸ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಭಾರತದಲ್ಲಿ ಕೊವಿಡ್ ಎರಡನೇ ಅಲೆಯನ್ನು ನಿಯಂತ್ರಿಸಲು 5 ಸಲಹೆಗಳನ್ನು ನೀಡಿ ಮನಮೋಹನ್ ಸಿಂಗ್ ಅವರು ಭಾನುವಾರ ಪ್ರಧಾನ ಮೋದಿಯವರಿಗೆ ಪತ್ರ ಬರೆದಿದ್ದರು. ಎರಡು ಪುಟದ ಈ ಪತ್ರದಲ್ಲಿ ಸಿಂಗ್ ಅವರು, ಕೊವಿಡ್ ಲಸಿಕೆ ಎಷ್ಟು ಪ್ರತಿಶತ ಜನರಿಗೆ ನೀಡಲಾಗಿದೆ ಎಂಬುದನ್ನು ಗಮನಿಸಬೇಕು ಎಂದಿದ್ದರು.
ಕೊರೊನಾವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಲಸಿಕೆ ವಿತರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದ ಸಿಂಗ್, ಎಚ್ಐವಿ / ಏಡ್ಸ್ ಔಷಧಿಗಳಂತೆ ಕಡ್ಡಾಯ ಪರವಾನಗಿ ನಿಬಂಧನೆಗಳನ್ನು ಒಳಗೊಂಡಂತೆ ಸರಬರಾಜನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.
ಕೊವಿಡ್ ವಿರುದ್ಧದ ನಮ್ಮ ಹೋರಾಟಕ್ಕಾಗಿ ಲಸಿಕೆ ನೀಡುವುದನ್ನು ಹೆಚ್ಚಿಸಬೇಕು. ನಾವು ಲಸಿಕೆ ಹಾಕಿದ ಜನಸಂಖ್ಯೆಯ ಶೇಕಡಾವಾರು ಪ್ರಮಾಣದತ್ತ ಗಮನ ಹರಿಸಬೇಕು ಎಂದು ಸಿಂಗ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಭಾರತವು ಪ್ರಸ್ತುತ ತನ್ನ ಜನಸಂಖ್ಯೆಯ ಒಂದು ಸಣ್ಣ ಭಾಗಕ್ಕೆ ಮಾತ್ರ ಲಸಿಕೆ ನೀಡಿದೆ ಎಂದು ಹೇಳಿರುವ ಸಿಂಗ್ ವ್ಯವಸ್ಥಿತ ಕಾರ್ಯಸೂಚಿಯೊಂದಿಗೆ ಇದನ್ನು ಉತ್ತಮವಾಗಿ ಮತ್ತು ತ್ವರಿತವಾಗಿ ಮಾಡಬಹುದು ಎಂದಿದ್ದಾರೆ.
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಾವು ಅನೇಕ ಕೆಲಸಗಳನ್ನು ಮಾಡಬೇಕು ಆದರೆ ಈ ಪ್ರಯತ್ನದ ಒಂದು ದೊಡ್ಡ ಭಾಗವು ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಹೆಚ್ಚಿಸಬೇಕು. 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೂ ಲಸಿಕೆ ಹಾಕಬಹುದಾದ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರನ್ನು ವ್ಯಾಖ್ಯಾನಿಸಲು ರಾಜ್ಯಗಳಿಗೆ ಹೊಂದಿಕೆಯಾಗುವ ಅನುಕೂಲ ಕಲ್ಪಿಸಬೇಕು ಎಂದು ಮಾಜಿ ಪ್ರಧಾನಿ ಸಲಹೆ ನೀಡಿದ್ದಾರೆ. ಪ್ರಸ್ತುತ 45ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಭಾರತದಲ್ಲಿ ಲಸಿಕೆ ನೀಡಲಾಗುತ್ತಿದೆ.
ಕೆಲವು ರಾಜ್ಯಗಳು ಶಾಲಾ ಶಿಕ್ಷಕರು, ಬಸ್ ಮತ್ತು ಟ್ಯಾಕ್ಸಿ ಚಾಲಕರು, ಪುರಸಭೆ ಮತ್ತು ಪಂಚಾಯತ್ ಸಿಬ್ಬಂದಿ ಮತ್ತು ನ್ಯಾಯಾಲಯಗಳಲ್ಲಿ ಕೆಲಸ ಮಾಡುವ ವಕೀಲರನ್ನು ಮುಂಚೂಣಿಯ ಕಾರ್ಯಕರ್ತರು ಎಂದು ಪರಿಗಣಿಸುತ್ತವೆ. ಹೀಗಿರುವಾಗ ಅವರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೂ ಲಸಿಕೆ ನೀಡಬಹುದು ಎಂದು ಸಿಂಗ್ ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೇರಿ ಕೊವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬೇಕಾದ ಪ್ರಯತ್ನಗಳ ಬಗ್ಗೆ ಚರ್ಚಿಸಿದ ಒಂದು ದಿನದ ನಂತರ ಸಿಂಗ್ ಆ ಸಲಹೆಗಳನ್ನು ನೀಡಿದ್ದಾರೆ.
ಮುಂದಿನ ಆರು ತಿಂಗಳಲ್ಲಿ ಲಸಿಕೆ ಡೋಸ್ ಬಗ್ಗೆ ಆದೇಶಗಳನ್ನು ಕೇಂದ್ರ ಪ್ರಕಟಿಸಬೇಕು ಮತ್ತು ವಿತರಿಸಲು ಒಪ್ಪಿಕೊಳ್ಳಬೇಕು ಎಂದು ಸಿಂಗ್ ಹೇಳಿದ್ದಾರೆ . ಲಸಿಕೆಗಳನ್ನು ರಾಜ್ಯಗಳಿಗೆ ಹೇಗೆ ವಿತರಿಸಬೇಕೆಂದು ಸರ್ಕಾರ ಸೂಚಿಸಬೇಕು. ಈ ಅವಧಿಯಲ್ಲಿ ನಾವು ನಿರ್ದಿಷ್ಟ ಸಂಖ್ಯೆಯ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದರೆ, ನಾವು ಸಾಕಷ್ಟು ಮುಂಚಿತವಾಗಿ ಆದೇಶಗಳನ್ನು ನೀಡಬೇಕು. ಉತ್ಪಾದಕರು ಸರಿಯಾದ ಸಮಯಕ್ಕೆ ಲಸಿಕೆ ಪೂರೈಸಲು ಇದು ಸಹಾಯವಾಗುತ್ತದೆ. ಪಾರದರ್ಶಕ ಸೂತ್ರದ ಆಧಾರದ ಮೇಲೆ ಈ ನಿರೀಕ್ಷಿತ ಲಸಿಕೆ ಸರಬರಾಜನ್ನು ರಾಜ್ಯಗಳಲ್ಲಿ ಹೇಗೆ ವಿತರಿಸಲಾಗುವುದು ಎಂಬುದನ್ನು ಸರ್ಕಾರ ಸೂಚಿಸಬೇಕು. ತುರ್ತು ಅಗತ್ಯಗಳ ಆಧಾರದ ಮೇಲೆ ವಿತರಣೆಗೆ ಕೇಂದ್ರ ಸರ್ಕಾರವು 10 ಪ್ರತಿಶತವನ್ನು ಉಳಿಸಿಕೊಳ್ಳಬಹುದು ಮತ್ತು ರಾಜ್ಯಗಳು ಲಭ್ಯತೆ ಎಷ್ಟಿದೆ ಎಂಬುದರ ಬಗ್ಗೆ ಅರಿತಿರಬೇಕು ಎಂದು ಸಿಂಗ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
I wish former Prime Minister of India Dr. Manmohan Singh avaru a speedy recovery from COVID-19.
— H D Devegowda (@H_D_Devegowda) April 19, 2021
ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಅವರು ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ವಿಶ್ ಮಾಡಿದ್ದಾರೆ.
ಇದನ್ನೂ ಓದಿ: ನಾನಲ್ಲ, ಕೊರೊನಾ ಬಳಲುತ್ತಿದೆ; ಅಚ್ಚರಿಯ ಟ್ವೀಟ್ ಮಾಡಿದ ಸೋನು ಸೂದ್
(Former Prime Minister Manmohan Singh admitted to AIIMS Delhi after he has tested positive for coronavirus)
Published On - 6:39 pm, Mon, 19 April 21