ದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ (Amarinder Singh) ಸೋಮವಾರ ಬಿಜೆಪಿ (BJP) ಸೇರಿದ್ದಾರೆ. ಇಂದು ಬೆಳಗ್ಗೆ ಅವರು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಬಿಜೆಪಿ ಸೇರಿದ 80 ವರ್ಷದ ಅಮರಿಂದರ್ ಸಿಂಗ್ ತಮ್ಮ ಪಂಜಾಬ್ ಲೋಕ ಕಾಂಗ್ರೆಸ್ (Punjab Lok Congress) ಅನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು. ಐದು ದಶಕಗಳ ಕಾಲ ಕಾಂಗ್ರೆಸ್ನಲ್ಲಿದ್ದ ಸಿಂಗ್, ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದು ಹೊಸ ಪಕ್ಷ ಸ್ಥಾಪಿಸಿದ್ದರು.ಪಂಜಾಬ್ ವಿಧಾನಸಭೆಗೆ ಮುನ್ನ ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಬದಲಿಸಿದ್ದಕ್ಕಾಗಿ ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆದಿದ್ದರು. ಅಮರಿಂದರ್ ಸಿಂಗ್ ಅವರೊಂದಿಗೆ ಏಳು ಮಾಜಿ ಶಾಸಕರು ಮತ್ತು ಒಬ್ಬ ಮಾಜಿ ಸಂಸದರು ಕೂಡಾ ಬಿಜೆಪಿ ಸೇರಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿಂಗ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಅಲ್ಲಿ ಅವರಿಗೆ ಯಾವುದೇ ಲಾಭವುಂಟಾಗಿಲ್ಲ. ಅವರು ತಮ್ಮ ತವರು ಪಟಿಯಾಲ ಅರ್ಬನ್‌ನಲ್ಲಿ ಸ್ಪರ್ಧಿಸಿ ಸೋತರು. ಅವರ ಪಕ್ಷದ ಯಾವೊಬ್ಬ ಅಭ್ಯರ್ಥಿಯೂ ಚುನಾವಣೆಯಲ್ಲಿ ಗೆದ್ದಿಲ್ಲ.
Former Punjab CM @capt_amarinder joins BJP in the presence of senior BJP leaders and Union Ministers @nstomar and @KirenRijiju.
Captain #AmarinderSingh‘s party Punjab Lok Congress merges with BJP. pic.twitter.com/AoxPa8XaCe
— All India Radio News (@airnewsalerts) September 19, 2022
5
“ಕ್ಯಾಪ್ಟನ್” ಎಂದು ಜನಪ್ರಿಯವಾಗಿರುವ ಸಿಂಗ್ ಅವರು ಇತ್ತೀಚೆಗೆ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯ ನಂತರ ಲಂಡನ್‌ನಿಂದ ಹಿಂದಿರುಗಿದ್ದರು. ಕಳೆದ ವಾರ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು.
ಸೆಪ್ಟೆಂಬರ್ 12 ರಂದು ಅಮಿತ್ ಶಾ ಅವರೊಂದಿಗಿನ ಭೇಟಿಯ ನಂತರ, ಸಿಂಗ್ ಅವರು “ರಾಷ್ಟ್ರೀಯ ಭದ್ರತೆ, ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ-ಭಯೋತ್ಪಾದನೆಯ ಪ್ರಕರಣಗಳು ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗೆ ಭವಿಷ್ಯದ ಮಾರ್ಗಸೂಚಿ” ಮುಂತಾದ ವಿಷಯಗಳ ಕುರಿತು ಬಹಳ ಉತ್ಪಾದಕ ಚರ್ಚೆಯನ್ನು ನಡೆಸಿರುವುದಾಗಿ ಹೇಳಿದ್ದರು.
ಪಂಜಾಬ್ ನಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಸಿಂಗ್ ಅವರು ಮಾಜಿ ಪಟಿಯಾಲ ರಾಜಮನೆತನಕ್ಕೆ ಸೇರಿದವರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಕಾಂಗ್ರೆಸ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಿ ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಆಯ್ಕೆ ಮಾಡಿತು. ಆದರೆ ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಪಕ್ಷ ಪಂಜಾಬ್ ನಲ್ಲಿ ಚುನಾವಣೆ ಗೆದ್ದು ಅಧಿಕಾರಕ್ಕೇರಿತು.
Published On - 5:50 pm, Mon, 19 September 22