ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಆಯ್ಕೆ

Vice President Election: ಈ ಬಾರಿ ಬಿಜೆಪಿ ನೇತೃತ್ವದ ಎನ್​ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯ ಬಣಗಳೆರಡೂ ದಕ್ಷಿಣ ಭಾರತದ ಅಭ್ಯರ್ಥಿಯನ್ನು ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿರುವುದು ವಿಶೇಷ. ಎನ್​ಡಿಎ ಬಣದಿಂದ ತಮಿಳುನಾಡಿನ ಸಿ.ಪಿ. ರಾಧಾಕೃಷ್ಣನ್ ಅವರನ್ನು ಆಯ್ಕೆ ಮಾಡಲಾಗಿದೆ. ಇದೀಗ ಇಂಡಿಯ ಬಣದ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಂಧ್ರಪ್ರದೇಶದ ಬಿ. ಸುದರ್ಶನ್ ರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ.

ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಆಯ್ಕೆ
Sudershan Reddy

Updated on: Aug 19, 2025 | 3:13 PM

ನವದೆಹಲಿ, ಆಗಸ್ಟ್ 19: ಸೆಪ್ಟೆಂಬರ್ 9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ (Vice Presidential Election) ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ (B Sudershan Reddy) ಅವರನ್ನು ವಿಪಕ್ಷಗಳ ಇಂಡಿಯ ಬ್ಲಾಕ್‌ನ ಅಭ್ಯರ್ಥಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು (ಆಗಸ್ಟ್ 19) ಘೋಷಿಸಿದ್ದಾರೆ. ಈಗಾಗಲೇ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ (CP Radhakrishnan) ಅವರನ್ನು ಎನ್​ಡಿಎ ಬಣದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ಅವರನ್ನು ಬೆಂಬಲಿಸುವಂತೆ ಪ್ರತಿಪಕ್ಷಗಳನ್ನು ಒತ್ತಾಯಿಸಿದರೂ ಇಂಡಿಯ ಬ್ಲಾಕ್ ಇಂದು ತನ್ನದೇ ಆದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಇಂದು ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯನ್ನು ಘೋಷಿಸಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಮುಂಬರುವ ಉಪರಾಷ್ಟ್ರಪತಿ ಚುನಾವಣೆಯು ಸೈದ್ಧಾಂತಿಕ ಯುದ್ಧವಾಗಿದೆ ಎಂದು ಹೇಳಿದ್ದಾರೆ. “ಎಲ್ಲಾ ವಿರೋಧ ಪಕ್ಷಗಳು ಒಂದಾಗಿವೆ. ಪ್ರಜಾಪ್ರಭುತ್ವದ ಮೌಲ್ಯಗಳು ದಾಳಿಗೆ ಒಳಗಾಗಿವೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.


“ಇಂಡಿಯ ಬಣ ಅವಿರೋಧವಾಗಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ. ಎಲ್ಲಾ ವಿರೋಧ ಪಕ್ಷಗಳು ಸುದರ್ಶನ್ ರೆಡ್ಡಿ ಅವರ ಹೆಸರಿಗೆ ಒಪ್ಪಿಕೊಂಡಿವೆ ಎಂಬುದು ಸಂತೋಷದ ವಿಷಯ. ಇದು ಪ್ರಜಾಪ್ರಭುತ್ವದ ಒಂದು ದೊಡ್ಡ ಸಾಧನೆಯಾಗಿದೆ” ಎಂದು ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: CP Radhakrishnan: ಎನ್​​ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಯಾರು?

ಮೂಲಗಳ ಪ್ರಕಾರ, ಆಂಧ್ರಪ್ರದೇಶದಲ್ಲಿ ಎನ್‌ಡಿಎ ಮಿತ್ರಪಕ್ಷಗಳಾದ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ಪವನ್ ಕಲ್ಯಾಣ್ ಅವರ ಜನಸೇನಾ ಮೇಲೆ ಒತ್ತಡ ಹೇರಲು ವಿರೋಧ ಪಕ್ಷವು ಆಂಧ್ರಪ್ರದೇಶ ಮೂಲದ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರನ್ನು ಆಯ್ಕೆ ಮಾಡಿದೆ. ಎನ್‌ಡಿಎ ಅಭ್ಯರ್ಥಿಯ ಆಯ್ಕೆಯ ವಿಷಯದಲ್ಲಿ ಈಗಾಗಲೇ ತಮ್ಮ ಆಯ್ಕೆಗೂ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದ ಬಿಆರ್‌ಎಸ್ ಮತ್ತು ವೈಎಸ್‌ಆರ್‌ಸಿಪಿಯಂತಹ ಇತರ ತೆಲುಗು ಪಕ್ಷಗಳು ಇಂಡಿಯ ಬ್ಲಾಕ್​​ನ ಈ ಅಭ್ಯರ್ಥಿಯ ಘೋಷಣೆಯಿಂದ ತಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಬಹುದು ಎಂಬ ನಿರೀಕ್ಷೆ ವಿಪಕ್ಷಗಳದ್ದು ಎನ್ನಲಾಗಿದೆ.

ದ್ರಾವಿಡ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಗುರಿಯನ್ನು ಹೊಂದಿರುವ ತಮಿಳುನಾಡು ಮೂಲದ ರಾಧಾಕೃಷ್ಣನ್ ಅವರನ್ನು ಎನ್‌ಡಿಎ ಆಯ್ಕೆ ಮಾಡಿದ್ದಕ್ಕೆ ಪ್ರತಿಕ್ರಿಯೆಯಾಗಿ ವಿಪಕ್ಷಗಳು ಕೂಡ ಆಂಧ್ರಪ್ರದೇಶದ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Video: ಎನ್​​ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರನ್ನು ಸನ್ಮಾನಿಸಿದ ಪ್ರಧಾನಿ ಮೋದಿ

ಕಳೆದ ತಿಂಗಳು ಜಗದೀಪ್ ಧಂಖರ್ ಅವರ ರಾಜೀನಾಮೆಯ ನಂತರ ಅನಿವಾರ್ಯವಾಗಿ ಉಪರಾಷ್ಟ್ರಪತಿ ಚುನಾವಣೆಯನ್ನು ಸೆಪ್ಟೆಂಬರ್ 9ರಂದು ನಡೆಸಲಾಗುವುದು. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವನ್ನು ಆಗಸ್ಟ್ 22ಕ್ಕೆ ನಿಗದಿಪಡಿಸಲಾಗಿದೆ.

ಎನ್‌ಡಿಎಯ ಅಭ್ಯರ್ಥಿ ಯಾರು?:

ಭಾರತದಲ್ಲಿ ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ಅಥವಾ ಸಿ.ಪಿ ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ. 2026ಕ್ಕೆ ತಮಿಳುನಾಡಿನ ಮುಂದಿನ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಧಾಕೃಷ್ಣನ್ ಅವರನ್ನು ರಾಷ್ಟ್ರೀಯ ವೇದಿಕೆಗೆ ಏರಿಸುವುದು ರಾಜ್ಯದಲ್ಲಿ ಬಿಜೆಪಿಯ ಕಾರ್ಯತಂತ್ರದ ಮೇಲೆ ಪ್ರಭಾವ ಬೀರಬಹುದು.

ತಮಿಳುನಾಡಿನಲ್ಲಿ ಬಿಜೆಪಿಯನ್ನು ಮುನ್ನಡೆಸುವುದರಿಂದ ಹಿಡಿದು ಮಹಾರಾಷ್ಟ್ರವನ್ನು ಆಳುವವರೆಗೆ ಮತ್ತು ಈಗ ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳಲ್ಲಿ ಒಂದಕ್ಕೆ ಸಜ್ಜಾಗಿರುವ ಸಿ.ಪಿ ರಾಧಾಕೃಷ್ಣನ್ ಅವರ ಪ್ರಯಾಣವು ಸಮರ್ಪಣೆ ಮತ್ತು ವರ್ಷಗಳ ದೀರ್ಘಕಾಲೀನ ರಾಜಕೀಯ ಸೇವೆಯ ಮೂಲಕ ಸ್ಥಿರವಾದ ಏರಿಕೆಯ ಸಂಕೇತವಾಗಿದೆ. ಅವರು ಆರ್​ಎಸ್​ಎಸ್​ ಹಿನ್ನೆಲೆಯವರಾಗಿರುವುದು ಕೂಡ ಅವರ ಆಯ್ಕೆಗೆ ಒಂದು ಮುಖ್ಯ ಕಾರಣ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:10 pm, Tue, 19 August 25