CP Radhakrishnan: ಎನ್ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಯಾರು?
Who is CP Radhakrishnan: ಭಾರತೀಯ ಜನತಾ ಪಕ್ಷ (ಬಿಜೆಪಿ) ಮಹಾರಾಷ್ಟ್ರ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ದ ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ಘೋಷಿಸಿತು . ಉಪರಾಷ್ಟ್ರಪತಿ ಚುನಾವಣೆಗೆ ಪಕ್ಷದ ಆಯ್ಕೆಯನ್ನು ಅಂತಿಮಗೊಳಿಸಲು ಕರೆಯಲಾಗಿದ್ದ ಬಿಜೆಪಿ ಸಂಸದೀಯ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಚಂದ್ರಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ಅವರು ಪ್ರಸ್ತುತ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾರೆ. ಅವರು ಜುಲೈ 31, 2024 ರಂದು ಮಹಾರಾಷ್ಟ್ರದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನೇಮಕಗೊಳ್ಳುವ ಮೊದಲು, ಅವರು ಸುಮಾರು ಒಂದೂವರೆ ವರ್ಷಗಳ ಕಾಲ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ಜಾರ್ಖಂಡ್ ರಾಜ್ಯಪಾಲರಾಗಿ, ರಾಧಾಕೃಷ್ಣನ್ ಅವರನ್ನು ಭಾರತದ ರಾಷ್ಟ್ರಪತಿಗಳು ತೆಲಂಗಾಣದ ರಾಜ್ಯಪಾಲರಾಗಿ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಅಧಿಕಾರ ವಹಿಸಿಕೊಳ್ಳಲು ನೇಮಿಸಿದರು.

ನವದೆಹಲಿ, ಆಗಸ್ಟ್ 18: ಭಾರತೀಯ ಜನತಾ ಪಕ್ಷ(BJP) ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್(CP Radhakrishnan) ಅವರನ್ನು ಉಪರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ನಿರ್ಧಾರವನ್ನು ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದ್ದು, ಪಕ್ಷದ ಅದ್ಯಕ್ಷ ಜೆಪಿ ನಡ್ಡಾ ಅವರು ಹೆಸರನ್ನು ಪ್ರಕಟಿಸಿದ್ದಾರೆ.
ಮಂಗಳವಾರ ನಡೆಯಲಿರುವ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಸಿಪಿ ರಾಧಾಕೃಷ್ಣನ್ ಕೂಡ ಭಾಗವಹಿಸುವ ಸಾಧ್ಯತೆ ಇದೆ. ತಮಿಳುನಾಡು ಮೂಲದ ಸಿಪಿ ರಾಧಾಕೃಷ್ಣನ್ ಅವರನ್ನು ಬಿಜೆಪಿಯ ಹಿರಿಯ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.
ತಮಿಳುನಾಡಿನ ತಿರುಪ್ಪೂರಿನಲ್ಲಿ 1957 ರ ಅಕ್ಟೋಬರ್ 20 ರಂದು ಜನಿಸಿದ ರಾಧಾಕೃಷ್ಣನ್ ಅವರ ರಾಜಕೀಯ ಜೀವನವು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ಮತ್ತು ಜನಸಂಘದೊಂದಿಗೆ ಆರಂಭವಾಯಿತು. ಸಿಪಿ ರಾಧಾಕೃಷ್ಣನ್ 70ರ ದಶಕದಲ್ಲಿ ಆರ್ಎಸ್ಎಸ್ನಲ್ಲಿ ಸಕ್ರಿಯರಾಗಿದ್ದರು.
ಇದಾದ ನಂತರ, ಅವರು ಭಾರತೀಯ ಜನ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದರು ಮತ್ತು ಸಂಘಟನಾ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸಿದರು. ದೀರ್ಘಕಾಲ ಕಾರ್ಯಕರ್ತರಾಗಿ ಕೆಲಸ ಮಾಡಿದ ನಂತರ, 1994 ರಲ್ಲಿ ಅವರನ್ನು ತಮಿಳುನಾಡು ಬಿಜೆಪಿಯ ಕಾರ್ಯದರ್ಶಿಯಾಗಿಯೂ ನೇಮಿಸಲಾಯಿತು.
ಟೇಬಲ್ ಟೆನಿಸ್ ಚಾಂಪಿಯನ್ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಹೇಳುವುದಾದರೆ ಅವರು ಕೊಯಮತ್ತೂರಿನ ವಿಒ ಚಿದಂಬರಂ ಕಾಲೇಜಿನಲ್ಲಿ ಬಿಬಿಎ ಪದವಿ ಪಡೆದಿದ್ದಾರೆ. ರಾಧಾಕೃಷ್ಣನ್ ತಮ್ಮ ಕಾಲೇಜಿನಲ್ಲಿ ಟೇಬಲ್ ಟೆನಿಸ್ ಚಾಂಪಿಯನ್ ಹಾಗೂ ಅತ್ಯುತ್ತಮ ರನ್ನರ್ ಕೂಡ ಆಗಿದ್ದರು. ಅವರಿಗೆ ಕ್ರಿಕೆಟ್ ಹಾಗೂ ವಾಲಿಬಾಲ್ ಕೂಡ ಇಷ್ಟವಂತೆ.
ಮಹಾರಾಷ್ಟ್ರ ರಾಜ್ಯಪಾಲರು ರಾಧಾಕೃಷ್ಣನ್ 2024ರ ಜುಲೈ 31ರಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾರೆ. ಇದಕ್ಕೂ ಮೊದಲು ಫೆಬ್ರವರಿ 18, 2023 ರಿಂದ ಜುಲೈ 30, 2024 ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಅವರು ತೆಲಂಗಾಣ ಮತ್ತು ಪುದುಚೇರಿಯಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದರು.
ಮತ್ತಷ್ಟು ಓದಿ: ಉಪರಾಷ್ಟ್ರಪತಿ ಚುನಾವಣೆಗೆ ಸಿಪಿ ರಾಧಾಕೃಷ್ಣನ್ ಎನ್‌ಡಿಎ ಅಭ್ಯರ್ಥಿ
ಫೆಬ್ರವರಿ 18, 2023 ರಂದು ಅವರನ್ನು ಜಾರ್ಖಂಡ್ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ತಮ್ಮ ಮೊದಲ ನಾಲ್ಕು ತಿಂಗಳಲ್ಲಿ, ಅವರು ಜಾರ್ಖಂಡ್‌ನ ಎಲ್ಲಾ 24 ಜಿಲ್ಲೆಗಳಿಗೆ ಭೇಟಿ ನೀಡಿ ನಾಗರಿಕರು ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದರು.
ಸಂಸದ ಕೂಡ ಆಗಿದ್ದರು ರಾಧಾಕೃಷ್ಣನ್ ಅವರು 1998 ಮತ್ತು 1999 ರಲ್ಲಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾದರು. ಸಂಸದರಾಗಿದ್ದ ಅವಧಿಯಲ್ಲಿ, ಅವರು ಜವಳಿ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್‌ಯು) ಸಂಸದೀಯ ಸಮಿತಿ ಮತ್ತು ಹಣಕಾಸಿನ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಇದಲ್ಲದೆ, ಅವರು ಷೇರು ವಿನಿಮಯ ಹಗರಣದ ತನಿಖೆ ನಡೆಸಿದ ಸಂಸದೀಯ ವಿಶೇಷ ಸಮಿತಿಯ ಸದಸ್ಯರೂ ಆಗಿದ್ದಾರೆ.
ಬಿಜೆಪಿಯಲ್ಲಿ ರಾಧಾಕೃಷ್ಣನ್ ಪಾತ್ರ ಅವರು 2003 ರಿಂದ 2006 ರವರೆಗೆ ತಮಿಳುನಾಡು ಬಿಜೆಪಿಯ ಅಧ್ಯಕ್ಷರಾಗಿದ್ದರು. ಇದಲ್ಲದೆ, ಅವರು ಕೇರಳ ಬಿಜೆಪಿಯ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದಾರೆ. 2004 ರಲ್ಲಿ, ರಾಧಾಕೃಷ್ಣನ್ ಅವರು ಸಂಸದೀಯ ನಿಯೋಗದ ಸದಸ್ಯರಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅವರು ತೈವಾನ್‌ಗೆ ಭೇಟಿ ನೀಡಿದ ಮೊದಲ ಸಂಸದೀಯ ನಿಯೋಗದ ಸದಸ್ಯರಾಗಿದ್ದರು.
2004-2007ರ ಅವಧಿಯಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ, ನದಿಗಳ ಜೋಡಣೆ, ಭಯೋತ್ಪಾದನೆ ವಿರೋಧಿ ಮತ್ತು ಅಸ್ಪೃಶ್ಯತಾ ನಿರ್ಮೂಲನೆ ಮುಂತಾದ ವಿಷಯಗಳ ಕುರಿತು 93 ದಿನಗಳ ರಥಯಾತ್ರೆಯನ್ನು ನಡೆಸಿದರು. ಸಂಸತ್ತಿನಲ್ಲಿ ಜವಳಿ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಆಗಿದ್ದರು ಮತ್ತು ಹಣಕಾಸು ಮತ್ತು ಸಾರ್ವಜನಿಕ ಉದ್ಯಮಗಳಿಗೆ ಸಂಬಂಧಿಸಿದ ಹಲವಾರು ಸಮಿತಿಗಳಿಗೆ ಕೊಡುಗೆ ನೀಡಿದ್ದರು.
ಸೆಪ್ಟೆಂಬರ್ 9 ರಂದು ಚುನಾವಣೆ
ಜುಲೈನಲ್ಲಿ ಜಗದೀಪ್ ಧನ್ಖರ್ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ನಂತರ ಚುನಾವಣಾ ಆಯೋಗವು ಉಪರಾಷ್ಟ್ರಪತಿ ಸ್ಥಾನದ ಚುನಾವಣೆಗೆ ಚುನಾವಣಾ ವೇಳಾಪಟ್ಟಿಯನ್ನು ಸ್ವಲ್ಪ ಸಮಯದ ಹಿಂದೆ ನಿರ್ಧರಿಸಿತ್ತು. ಈ ಚುನಾವಣೆ ಸೆಪ್ಟೆಂಬರ್ 9 ರಂದು ನಡೆಯಲಿದೆ. ಚುನಾವಣಾ ಆಯೋಗದ ಅಧಿಸೂಚನೆಯ ಪ್ರಕಾರ, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 21 ಆಗಿದ್ದು, ಆಗಸ್ಟ್ 22 ರಂದು ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:46 am, Mon, 18 August 25




