ಹರ್ಯಾಣದ ಕರ್ನಲ್ನಲ್ಲಿ ನಾಲ್ವರು ಖಲಿಸ್ತಾನಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಇವರಿಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿತ್ತು ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ. ಶಂಕಿತರನ್ನು ಗುರ್ಪ್ರೀತ್, ಅಮಂದೀಪ್, ಪರ್ಮಿಂದರ್ ಮತ್ತು ಭೂಪಿಂದರ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಪಂಜಾಬ್ನವರು ಎನ್ನಲಾಗಿದೆ. ಬಂಧಿತರಿಂದ ಪಿಸ್ತೂಲ್, 21 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಗೆಲ್ಲ ಪಾಕಿಸ್ತಾನದ ಫೀರೋಜ್ಪುರ ಜಿಲ್ಲೆಯಿಂದ ಖಲಿಸ್ತಾನಿ ಉಗ್ರ ಹರ್ಜಿಂದರ್ ಸಿಂಗ್ ರಿಂಡಾ ಶಸ್ತ್ರಾಸ್ತ್ರ ಒದಗಿಸುತ್ತಿದ್ದ. ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ತಂದು ಕೊಡಲಾಗುತ್ತಿತ್ತು ಎಂದೂ ಅಧಿಕಾರಿಯೊಬ್ಬರು ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಕರ್ನಲ್ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಆರೋಪಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಹರ್ಜಿಂದರ್ ಸಿಂಗ್, ಮೂಲತಃ ಪಂಜಾಬ್ನ ತರ್ನ್ ತಾರನ್ ಜಿಲ್ಲೆಯವನು. 11ನೇ ವರ್ಷದಲ್ಲಿದ್ದಾಗ ತನ್ನ ಕುಟುಂಬದ ಜತೆ ಮಹಾರಾಷ್ಟ್ರದ ನಂದೇಡ್ ಸಾಹೀಬ್ಗೆ ಸ್ಥಳಾಂತರಗೊಂಡಿದ್ದಾನೆ. 18ನೇ ವರ್ಷದಲ್ಲಿಯೇ ತರ್ನ್ ತಾರನ್ನಲ್ಲಿ ತನ್ನ ಸಂಬಂಧಿಯೊಬ್ಬರನ್ನು ಕೊಲ್ಲುವ ಮೂಲಕ ಪೊಲೀಸರ ವಾಂಟೆಡ್ ಪಟ್ಟಿಯಲ್ಲಿ ಸೇರಿಕೊಂಡಿದ್ದ. ನಾಂದೇಡ್ ಸಾಹೀಬ್ನಲ್ಲಿ ಸ್ಥಳೀಯ ವ್ಯಾಪಾರಿಗಳಿಂದ ಹಣ ಸುಲಿಗೆ ಮಾಡುತ್ತಿದ್ದ. ಈ ವೇಳೆ ಇಬ್ಬರನ್ನು ಹತ್ಯೆ ಗೈದಿದ್ದ. ನಂತರ ಪಾಕಿಸ್ತಾನಕ್ಕೆ ಹೋಗಿ ಅಡಗಿದ್ದಾನೆ. ಈಗಲೂ ಕೂಡ ಆತ ಅಲ್ಲಿಯೇ ಇದ್ದಾನೆ. ಆದರೆ ಈತ ಪಾಕಿಸ್ತಾನಕ್ಕೆ ನುಸುಳಿದ್ದೂ ಕೂಡ ಅಕ್ರಮವಾಗಿಯೇ. ನಕಲಿ ಪಾಸ್ಪೋರ್ಟ್ ಮೂಲಕ ನೇಪಾಳಕ್ಕೆ ಹೋಗಿ, ಅಲ್ಲಿಂದ ಪಾಕಿಸ್ತಾನಕ್ಕೆ ಹೋಗಿದ್ದಾನೆ ಎಂದೂ ಹೇಳಲಾಗಿದೆ.
ರಿಂಡಾ ಈಗ ಲಾಹೋರ್ನಲ್ಲಿ ಇದ್ದರೂ ಪಂಜಾಬ್ ಮೂಲದ ಖಲಿಸ್ತಾನಿ ಉಗ್ರರರಿಗೆ ಸಹಾಯ ಮಾಡುತ್ತಿದ್ದಾನೆ. ಅವರನ್ನು ಪ್ರಚೋದಿಸುವ ಪ್ರಯತ್ನದಲ್ಲಿದ್ದಾನೆ. ಈ ಮೂಲಕ ಪಂಜಾಬ್ನಲ್ಲಿ ಖಲಿಸ್ತಾನಿ ಹೋರಾಟವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ತೊಡಗಿದ್ದಾನೆ. ಈಗ ಇವರಿಗೂ ಆತನೇ ಶಸ್ತ್ರಾಸ್ತ್ರ ಪೂರೈಸುತ್ತಿರುವ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ.
ಇದನ್ನೂ ಓದಿ: Viral Video: ನಡುರಸ್ತೆಯಲ್ಲಿ ಮಹಿಳೆಗೆ ಥಳಿಸಿ, ಚಲಿಸುತ್ತಿದ್ದ ಕಾರಲ್ಲಿ ಎಳೆದೊಯ್ದ ಯುವಕರು; ಶಾಕಿಂಗ್ ವಿಡಿಯೋ ವೈರಲ್
Published On - 2:32 pm, Thu, 5 May 22