ದೆಹಲಿ: 2022 ಡಿಸೆಂಬರ್1 ರ ನಂತರ ತಯಾರಿಸಲಾಗುವ ತಂಬಾಕು (Tobacco) ಉತ್ಪನ್ನಗಳು, ಆಮದು ಮಾಡುವ ಅಥವಾ ಪ್ಯಾಕ್ ಮಾಡಲಾಗುವ ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಹೊಸ ಚಿತ್ರ ಮತ್ತು ತಂಬಾಕು ಸೇವನೆಯಿಂದ ನರಳಿ ಸಾಯುತ್ತೀರಿ ಎಂಬ ಎಚ್ಚರಿಕೆಯ ಸಾಲು ಇರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ಹೇಳಿದೆ. ಡಿಸೆಂಬರ್ 1ರಿಂದ ಜಾರಿಗೆ ಬರುವ ಈ ಚಿತ್ರ ಮತ್ತು ಎಚ್ಚರಿಕೆ ಸಾಲು ಒಂದು ವರ್ಷದವರೆಗೆ ಚಾಲ್ತಿಯಲ್ಲಿರಲಿದೆ. 2023 ಡಿಸೆಂಬರ್ 1ರ ನಂತರ ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಚಿತ್ರ ಮತ್ತು ಎಚ್ಚರಿಕೆಯ ಸಾಲು ತಂಬಾಕು ಬಳಕೆದಾದರರು ಬೇಗನೆ ಸಾಯುತ್ತಾರೆ ಎಂಬುದಾಗಿರುತ್ತದೆ ಎಂದು ಸಚಿವಾಲಯ ಹೊರಡಿಸಿದ ಪ್ರಕಟಣೆ ತಿಳಿಸಿದೆ. ಸಿಗರೇಟ್ಸ್ ಆಂಡ್ ಟೊಬಾಕೋ ಪ್ರಾಡೆಕ್ಟ್ಸ್ (ಪ್ಯಾಕೇಜಿಂಗ್ ಆಂಡ್ ಲೇಬಲಿಂಗ್) ರೂಲ್ಸ್ 2008, ಎಂಬ ನಿಯಮಕ್ಕೆ 2022 ಜುಲೈ 21ಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ಈ ತಿದ್ದುಪಡಿ 2022 ಡಿಸೆಂಬರ್ 1ರಿಂದ ಅನ್ವಯವಾಗಲಿದೆ. ಈ ಅಧಿಸೂಚನೆಯು http://www.mohfw.gov.in”www.mohfw.gov.in ಮತ್ತು http://ntcp.nhp.gov.in”ntcp.nhp.gov.in ವೆಬ್ಸೈಟ್ಗಳಲ್ಲಿ 19 ಭಾಷೆಗಳಲ್ಲಿ ಲಭ್ಯವಾಗಲಿದೆ. ಯಾವುದೇ ವ್ಯಕ್ತಿ ನೇರ ಅಥವಾ ಪರೋಕ್ಷವಾಗಿ ತಂಬಾಕು ಉತ್ಪನ್ನಗಳನ್ನು ತಯಾರಿಸುಸುವುದು, ಉತ್ಪಾದನೆ, ಸರಬರಾಜು, ಆಮದು ಅಥವಾ ಸಿಗರೇಟು ಅಥವಾ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದಾದರೆ ಎಲ್ಲ ತಂಬಾಕು ಉತ್ಪನ್ನಗಳ ಪ್ಯಾಕೆಟ್ ಗಳ ಮೇಲೆ ಸಚಿವಾಲಯ ನಿರ್ದೇಶಿಸಿದಂತೆ ಆರೋಗ್ಯ ಬಗ್ಗೆ ಎಚ್ಚರಿಕೆಯ ಸಾಲು ಹೊಂದಿರ ಬೇಕು ಎಂದಿದ್ದಾರೆ.
ಈ ಮಾರ್ಗಸೂಚಿಗಳ ಉಲ್ಲಂಘನೆಯು ಶಿಕ್ಷಾರ್ಹ ಅಪರಾಧವಾಗಿದ್ದು ಜೈಲು ಅಥವಾ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ನಿಯಂತ್ರಣ, ಉತ್ಪಾದನೆ, ಸರಬರಾಜು ಮತ್ತು ವಿತರಣೆ) ಕಾಯಿದೆ, 2003ರಡಿಯಲ್ಲಿ ಸೆಕ್ಷನ್ 20ರಲ್ಲಿ ಸೂಚಿಸಿರುವಂತೆ ದಂಡ ಪಾವತಿಸಬೇಕಾಗಿದೆ ಎಂದು ಸರ್ಕಾರ ಹೇಳಿದೆ.