ನನ್ನ ವಿರುದ್ಧ ಸಂಚು ಮಾಡಲಾಗಿದೆ: ಶಿಕ್ಷಕರ ನೇಮಕಾತಿ ಹಗರಣ ಆರೋಪ ಬಗ್ಗೆ ಪಾರ್ಥ ಚಟರ್ಜಿ
ಶಿಕ್ಷಕರ ನೇಮಕಾತಿ ಹಗರಣ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಚಟರ್ಜಿಯನ್ನು ಗುರುವಾರ ಮಮತಾ ಬ್ಯಾನರ್ಜಿ ಸರ್ಕಾರ ಸಚಿವ ಸಂಪುಟದಿಂದ ವಜಾ ಮಾಡಿತ್ತು
ಕೊಲ್ಕತ್ತಾ: ನನ್ನ ವಿರುದ್ಧ ಸಂಚು ಮಾಡಿ ಸಿಲುಕಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ (Partha Chatterjee) ಹೇಳಿದ್ದಾರೆ. ಶಿಕ್ಷಕರ ನೇಮಕಾತಿ ಹಗರಣ ಆರೋಪದಲ್ಲಿ (SSC Scam) ಬಂಧನಕ್ಕೊಳಗಾಗಿದ್ದ ಚಟರ್ಜಿಯನ್ನು ಗುರುವಾರ ಮಮತಾ ಬ್ಯಾನರ್ಜಿ ಸರ್ಕಾರ ಸಚಿವ ಸಂಪುಟದಿಂದ ವಜಾ ಮಾಡಿತ್ತು . 6 ದಿನಗಳ ಹಿಂದೆ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿ (Arpita Mukherjee) ನಿವಾಸದಿಂದ ಜಾರಿ ನಿರ್ದೇಶನಾಲಯ ಸುಮಾರು 50 ಕೋಟಿ ನಗದು ವಶಪಡಿಸಿಕೊಂಡ ನಂತರ ಇಬ್ಬರನ್ನೂ ಬಂಧಿಸಿತ್ತು. 69ರ ಹರೆಯದ ಚಟರ್ಜಿ ಇಡಿ ಕಸ್ಟಡಿಯಲ್ಲಿದ್ದು, ಇಂದು ವೈದ್ಯಕೀಯ ತಪಾಸಣೆಗಾಗಿ ಇಎಸ್ಐ ಆಸ್ಪತ್ರೆಗೆ ಕರೆತರಲಾಗಿತ್ತು. ಈ ಹೊತ್ತಲ್ಲಿ ಮಾಧ್ಯಮದವರು ಪ್ರಶ್ನೆ ಕೇಳಿದಾಗ ನಾನು ಸಂಚಿನ ಬಲಿಪಶು ಎಂದಿದ್ದಾರೆ. ಪಾರ್ಥ ಚಟರ್ಜಿ ಅವರ ಆಪ್ತೆ, ನಟಿ, ಇನ್ ಸ್ಟಾಗ್ರಾಮರ್ ಅರ್ಪಿತಾ ಮುಖರ್ಜಿ ಅವರ ಫ್ಲಾಟ್ ನಿಂದ ಲೆಕ್ಕಕ್ಕೆ ಸಿಗದ 29 ಕೋಟಿ ನಗದು, ಐದು ಕೆಜಿ ಬಂಗಾರವನ್ನು ಇಡಿ ವಶಪಡಿಸಿಕೊಂಡಿದೆ. ಕೊಲ್ಕತ್ತಾದ ಟಾಲಿಗಂಜ್ ನಲ್ಲಿರುವ ಅರ್ಪಿತಾ ಮನೆಯಿಂದ ಜುಲೈ 23ರಂದು ಜಾರಿ ನಿರ್ದೇಶನಾಲಯ 21 ಕೋಟಿ ನಗದು ವಶ ಪಡಿಸಿದ ನಂತರ ಚಟರ್ಜಿ ಮತ್ತು ಮುಖರ್ಜಿಯನ್ನು ವಶಕ್ಕೆ ತೆಗೆದುಕೊಂಡಿತ್ತು.
ಪಾರ್ಥ ಚಟರ್ಜಿ ಅವರಲ್ಲಿ ಪಕ್ಷದ ನಿರ್ಧಾರ ಸರಿಯಾಗಿತ್ತೇ ಎಂದು ಕೇಳಿದಾಗ, ಅದರ ಸಮಯ ಸರಿಯಾಗಿರಲಿಲ್ಲ. ಇದು ನ್ಯಾಯಯುತ ತನಿಖೆಯ ಮೇಲೆ ಪ್ರಭಾವ ಬೀರುತ್ತದೆ ಎಂದಿದ್ದಾರೆ. ಚಟರ್ಜಿ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಕಾಮರ್ಸ್ ಆಂಡ್ ಎಂಟರ್ ಪ್ರೈಸ್, ಇಂಡಸ್ಟ್ರಿ, ಮಾಹಿತಿ ತಂತ್ರಜ್ಞಾನ ಮಚತ್ತು ಎಲೆಕ್ಟ್ರಾನಿಕ್ಸ್ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹೊಂದಿದ್ದರು.
ಇಂದು 30ರ ಹರೆಯದ ಅರ್ಪಿತಾ ಮುಖರ್ಜಿ ಅವರನ್ನು ಇಂದು ಬೆಳಗ್ಗೆ ವೈದ್ಯಕೀಯ ತಪಾಸಣೆಗಾಗಿ ಕರೆದುಕೊಂಡು ಬಂದಾಗ ಅವರು ಕಾರಿನಿಂದ ಇಳಿಯಲೊಪ್ಪದೆ ಅತ್ತು ರಚ್ಚೆ ಹಿಡಿದಿದ್ದು, ಕೊನೆಗೆ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅರ್ಪಿತಾ ಕೂಡಾ ತಾನು ಸಂಚಿನ ಬಲಿಪಶು ಎಂದು ಹೇಳಿದ್ದಾರೆ.
ಪಾರ್ಥ ಚಟರ್ಜಿ ಅವರು 2016 ರಲ್ಲಿ ಶಿಕ್ಷಣ ಸಚಿವರಾಗಿದ್ದಾಗ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳ ಅಕ್ರಮ ನೇಮಕಾತಿಯಲ್ಲಿ ಪಾತ್ರವನ್ನು ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರು ವರ್ಗಾವಣೆಗಾಗಿ ಮತ್ತು ಕಾಲೇಜುಗಳಿಗೆ ಮಾನ್ಯತೆ ಪಡೆಯಲು ಸಹಾಯಕ್ಕಾಗಿ ಪಡೆದ ಕಿಕ್‌ಬ್ಯಾಕ್ ಹಣ ಅದು ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.
Published On - 4:44 pm, Fri, 29 July 22