ನವದೆಹಲಿ, ಸೆಪ್ಟೆಂಬರ್ 8: ಜಾಗತಿಕ ಒಳಿತಿನಲ್ಲಿ ಭಾರತ ಹಾಗೂ ಅಮೆರಿಕ ಸ್ನೇಹದ ಪಾತ್ರ ಮಹತ್ವದ್ದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ರಾತ್ರಿ ಹೇಳಿದರು. ಅಮೆರಿಕದ ಅಧ್ಯಕ್ಷ ಜೋ ಬೈಡನ್ (Joe Biden) ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮಿಬ್ಬರ ನಡುವೆ ಫಲಪ್ರದ ಚರ್ಚೆ ನಡೆಯಿತು ಎಂದು ಉಲ್ಲೇಖಿಸಿದ್ದಾರೆ. ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಬೈಡನ್ ಅವರು ನವದೆಹಲಿಗೆ ಆಗಮಿಸಿದ್ದಾರೆ. ದೆಹಲಿ ತಲುಪಿದ ನಂತರ ಬೈಡನ್ ಅವರು ನೇರವಾಗಿ ಪ್ರಧಾನಿ ಮೋದಿ ನಿವಾಸಕ್ಕೆ ತಲುಪಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.
‘ಜೋ ಬೈಡನ್ ಅವರನ್ನು 7, ಲೋಕ ಕಲ್ಯಾಣ್ ಮಾರ್ಗಕ್ಕೆ ಸ್ವಾಗತಿಸಿದ್ದಕ್ಕೆ ಸಂತೋಷವಾಗಿದೆ. ನಮ್ಮ ಸಭೆಯು ಬಹಳ ಫಲಪ್ರದವಾಗಿತ್ತು. ಭಾರತ ಮತ್ತು ಅಮೆರಿಕ ನಡುವಿನ ಆರ್ಥಿಕ ಮತ್ತು ಜನರಿಂದ ಜನರ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಹಲವಾರು ವಿಷಯಗಳನ್ನು ನಾವು ಚರ್ಚಿಸಲು ಸಾಧ್ಯವಾಯಿತು. ಉಭಯ ರಾಷ್ಟ್ರಗಳ ನಡುವಿನ ಸ್ನೇಹವು ಜಾಗತಿಕ ಒಳಿತನ್ನು ಹೆಚ್ಚಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದು ಮೋದಿ ಎಕ್ಸ್ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
Happy to have welcomed @POTUS @JoeBiden to 7, Lok Kalyan Marg. Our meeting was very productive. We were able to discuss numerous topics which will further economic and people-to-people linkages between India and USA. The friendship between our nations will continue to play a… pic.twitter.com/Yg1tz9kGwQ
— Narendra Modi (@narendramodi) September 8, 2023
ಉಭಯ ರಾಷ್ಟ್ರಗಳ ಮುಖ್ಯಸ್ಥರ ನಡುವಿನ ದ್ವಿಪಕ್ಷೀಯ ಮಾತುಕತೆ ಒಟ್ಟು ನಲವತ್ತೈದು ನಿಮಿಷಗಳ ಕಾಲ ನಡೆಯಿತು. ದ್ವಿಪಕ್ಷೀಯ ಮಾತುಕತೆ ಮುಗಿದ ನಂತರ, ಅಮೆರಿಕದ ಅಧ್ಯಕ್ಷರು ಈಗ ಐಟಿಸಿ ಮೌರ್ಯ ಹೋಟೆಲ್‌ಗೆ ತಲುಪಿದ್ದಾರೆ. ಅಲ್ಲಿ ಅವರು ರಾತ್ರಿ ವಿಶ್ರಾಂತಿ ಪಡೆಯಲಿದ್ದಾರೆ.
ಇದನ್ನೂ ಓದಿ: ಚಂದ್ರಯಾನ-3ರ ಯಶಸ್ಸಿಗೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಮತ್ತು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಉಭಯ ನಾಯಕರನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಸ್ವಾಗತಿಸಿದರು. ಈ ಅವಧಿಯಲ್ಲಿ ಭಾರತದ ಪ್ರಗತಿ ಮತ್ತು ಅಭಿವೃದ್ಧಿಯನ್ನು ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಶ್ಲಾಘಿಸಿದ್ದಾರೆ.
ಈ ಮಧ್ಯೆ, ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಕೂಡ ಜಿ20 ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದಾರೆ. ಅಜಯ್ ಬಂಗಾ ಅವರಿಗೆ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು.
ಇದನ್ನೂ ಓದಿ: ನಾನು ಹೆಮ್ಮೆಯ ಹಿಂದೂ, ನಾನು ಬೆಳೆದದ್ದು ಹೀಗೆ: ಬ್ರಿಟನ್ ಪ್ರಧಾನಿ ರಿಷಿ ಸುನಕ್
ಜಿ 20 ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಅತಿಥಿಗಳು ದೆಹಲಿಗೆ ಶುಕ್ರವಾರ ಮಧ್ಯಾಹ್ನವೇ ಆಗಮಿಸಲು ಆರಂಭಿಸಿದ್ದಾರೆ. ಬೈಡನ್ ಸೇರಿದಂತೆ ಹಲವು ದೇಶಗಳ ಮುಖ್ಯಸ್ಥರು ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿಯು ಜಿ-20 ಭದ್ರ ಕೋಟೆಯಾಗಿ ಮಾರ್ಪಟ್ಟಿದೆ. ಜಿ 20 ಶೃಂಗಸಭೆಯಲ್ಲಿ 40 ದೇಶಗಳ ರಾಷ್ಟ್ರಗಳ ಮುಖ್ಯಸ್ಥರು ಅಥವಾ ಅವರ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:47 pm, Fri, 8 September 23