ಜಿ20 ಶೃಂಗಸಭೆ; ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ಸಹಭಾಗಿತ್ವದ ಬಗ್ಗೆ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಬೈಡನ್ ಚರ್ಚೆ ಸಾಧ್ಯತೆ

ಈ ದ್ವಿಪಕ್ಷೀಯ ಸಭೆ ಬಹಳ ಮಹತ್ವದ್ದಾಗಿದೆ. ಬೈಡನ್ ಜಿ20 ಗಾಗಿ ಬರುತ್ತಿದ್ದಾರೆ. ಆದರೆ ಅವರು ಮತ್ತು ಭಾರತದ ಪ್ರಧಾನ ಮಂತ್ರಿ ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ಚರ್ಚಿಸಲು ಎದುರುನೋಡುತ್ತಿದ್ದಾರೆ ಎಂಬ ಅಂಶವು ಗಮನಾರ್ಹವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಜಿ20 ಶೃಂಗಸಭೆ; ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ಸಹಭಾಗಿತ್ವದ ಬಗ್ಗೆ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಬೈಡನ್ ಚರ್ಚೆ ಸಾಧ್ಯತೆ
ಪ್ರಧಾನಿ ಮೋದಿ ಮತ್ತು ಜೋ ಬೈಡನ್ (ಸಂಗ್ರಹ ಚಿತ್ರ)
Follow us
|

Updated on: Sep 08, 2023 | 7:57 PM

ನವದೆಹಲಿ, ಸೆಪ್ಟೆಂಬರ್ 8: ಜಿ20 ನಾಯಕರ ಶೃಂಗಸಭೆಗೂ (G20 Summit) ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡನ್ (Joe Biden) ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಅವರು ರಕ್ಷಣಾ ತಂತ್ರಜ್ಞಾನ ಪಾಲುದಾರಿಕೆಯ ವಿಷಯದಲ್ಲಿ ನಿಕಟ ಸಹಕಾರದ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಜತೆಗೆ, ಈಗಾಗಲೇ ಮಾಡಿಕೊಂಡಿರುವ ಒಪ್ಪಂದಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ. ಜೂನ್‌ನಲ್ಲಿ ಮೋದಿಯವರು ಅಮೆರಿಕಕ್ಕೆ ಭೇಟಿ ನೀಡಿದ ನಂತರದ ಮೊದಲ ದ್ವಿಪಕ್ಷೀಯ ಸಭೆ ಇದಾಗಿದ್ದು, ಮಹತ್ವದ್ದಾಗಿದೆ ಎಂದು ಮೂಲಗಳು ಹೇಳಿವೆ.

ಜೂನ್​ನಲ್ಲಿ ನಡೆದಿದ್ದ ದ್ವಿಪಕ್ಷೀಯ ಸಭೆಯಲ್ಲಿ ಜೆಟ್ ಎಂಜಿನ್ ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸುವಂತಹ ನಿರ್ಣಾಯಕ ನಿರ್ಧಾರ ಕೈಗೊಳ್ಳಲಾಗಿತ್ತು. ಜತೆಗೆ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಪಾಲುದಾರಿಕೆಗೆ ಸಂಬಂಧಿಸಿದಂತೆ ಅನೇಕ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು. ಅವುಗಳಿಗೆ ಸಂಬಂಧಿಸಿ ಈವರೆಗೆ ಏನೇನು ಪ್ರಗತಿಯಾಗಿದೆ ಎಂಬ ಬಗ್ಗೆ ಉಭಯ ನಾಯಕರು ಈಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಚರ್ಚಿಸುವ ನಿರೀಕ್ಷೆ ಇದೆ. ಜತೆಗೆ, ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಪಾಲುದಾರಿಕೆ ಸೇರಿದಂತೆ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಮುಂದುವರಿಸುವುದು ಹೇಗೆಂಬ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಭಾರತೀಯ ಮಾಜಿ ರಾಜತಾಂತ್ರಿಕ ಅರುಣ್ ಸಿಂಗ್ ತಿಳಿಸಿರುವುದಾಗಿ ‘ಮನಿ ಕಂಟ್ರೋಲ್’ ವರದಿ ಮಾಡಿದೆ. ಸಿಂಗ್ ಅವರು 2015-16ರ ಅವಧಿಯಲ್ಲಿ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.

ಈ ದ್ವಿಪಕ್ಷೀಯ ಸಭೆ ಬಹಳ ಮಹತ್ವದ್ದಾಗಿದೆ. ಬೈಡನ್ ಜಿ20 ಗಾಗಿ ಬರುತ್ತಿದ್ದಾರೆ. ಆದರೆ ಅವರು ಮತ್ತು ಭಾರತದ ಪ್ರಧಾನ ಮಂತ್ರಿ ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ಚರ್ಚಿಸಲು ಎದುರುನೋಡುತ್ತಿದ್ದಾರೆ ಎಂಬ ಅಂಶವು ಗಮನಾರ್ಹವಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಡಿಜಿಟಲ್ ಕ್ರಾಂತಿಯನ್ನು ಎದುರಿಸುವ ನಿಟ್ಟಿನಲ್ಲಿ ಒಗ್ಗೂಡಿದ ವಿಶ್ವದ ಎರಡು ಅತ್ಯಂತ ದೊಡ್ಡ ಮತ್ತು ಶಕ್ತಿಶಾಲಿ ಪ್ರಜಾಪ್ರಭುತ್ವ ದೇಶಗಳಾಗಿವೆ ಅಮೆರಿಕ ಮತ್ತು ಭಾರತ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಾನು ಹೆಮ್ಮೆಯ ಹಿಂದೂ, ನಾನು ಬೆಳೆದದ್ದು ಹೀಗೆ: ಬ್ರಿಟನ್ ಪ್ರಧಾನಿ ರಿಷಿ ಸುನಕ್

ಪ್ರಸ್ತುತ ಜಿ20 ಮತ್ತು ಬೈಡನ್ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯು ಸಂಬಂಧವನ್ನು ಭದ್ರಪಡಿಸಲು, ವಿಚಾರ ವಿನಿಮಯ ಮಾಡಿಕೊಳ್ಳಲು, ಭದ್ರತಾ ಪಾಲುದಾರಿಕೆಯನ್ನು ಹೆಚ್ಚಿಸಲು ಮತ್ತು ಒಟ್ಟಿಗೆ ಕೆಲಸ ಮಾಡಲು ಬಹಳ ಮುಖ್ಯವಾಗಿದೆ. ಡಿಜಿಟಲ್ ಕ್ರಾಂತಿಯ ಈ ಸಂದರ್ಭದಲ್ಲಿ ಚೀನಾ ವಿರುದ್ಧ ಅಮೆರಿಕ ಮತ್ತು ಭಾರತ ಒಟ್ಟಿಗೆ ಇರುವುದು ಬಹು ಮುಖ್ಯ. ಭಾರತದ ಡಿಜಿಟಲ್ ಕ್ರಾಂತಿಯ ಜೊತೆ ಪಾಲುದಾರಿಕೆಗೆ ಅಮೆರಿಕ ಬಿಟ್ಟರೆ ಅಷ್ಟೊಂದು ಉತ್ತಮವಾದ ಬೇರೆ ದೇಶವಿಲ್ಲ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಶನ್‌ನ ಅಧ್ಯಕ್ಷ ಟಿವಿ ಮೋಹನ್‌ದಾಸ್ ಪೈ ಅಭಿಪ್ರಾಯಪಟ್ಟಿರುವುದಾಗಿ ವರದಿ ಉಲ್ಲೇಖಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ