ಕಾಂಗ್ರೆಸ್ ಪುನಃಶ್ಚೇತನಕ್ಕೆ G-23 ಶಾಂತಿ ಸಮ್ಮೇಳನ; ಪಕ್ಷ ದುರ್ಬಲವಾಗುತ್ತಿದೆ ಎಂದ ನಾಯಕರ ಆತ್ಮಾವಲೋಕನ

| Updated By: ganapathi bhat

Updated on: Apr 06, 2022 | 7:40 PM

Congress G-23 | ಕಾಂಗ್ರೆಸ್ ಪಕ್ಷ ದುರ್ಬಲವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅದಕ್ಕಾಗಿಯೇ ನಾವಿಲ್ಲಿ ಸೇರಿದ್ದೇವೆ. ಈ ಮೊದಲು ಕೂಡ ನಾವು ಹೀಗೆ ಸೇರಬಹುದಾಗಿತ್ತು. ಈಗ ನಾವೆಲ್ಲರೂ ಒಟ್ಟಾಗಿ ಪಕ್ಷವನ್ನು ಬಲಪಡಿಸಬೇಕಿದೆ: ಕಪಿಲ್ ಸಿಬಲ್.

ಕಾಂಗ್ರೆಸ್ ಪುನಃಶ್ಚೇತನಕ್ಕೆ G-23 ಶಾಂತಿ ಸಮ್ಮೇಳನ; ಪಕ್ಷ ದುರ್ಬಲವಾಗುತ್ತಿದೆ ಎಂದ ನಾಯಕರ ಆತ್ಮಾವಲೋಕನ
ಕಾಂಗ್ರೆಸ್ ಪಕ್ಷದ G23 ನಾಯಕರು
Follow us on

ಜಮ್ಮು: ಕಾಂಗ್ರೆಸ್​ನ ಪ್ರಮುಖ ನಾಯಕರ G23 ಒಕ್ಕೂಟವು ಇಂದು (ಫೆ.27) ಜಮ್ಮು ಕಾಶ್ಮೀರದಲ್ಲಿ ಶಾಂತಿ ಸಮ್ಮೇಳನ ನಡೆಸಿದೆ. ಕಾಂಗ್ರೆಸ್​ನ ಹಿರಿಯ ಮತ್ತು ಪ್ರಮುಖ ನಾಯಕರ G23, ರಾಷ್ಟ್ರಾದ್ಯಂತ ‘ಭಾರತದ ಪರಿಕಲ್ಪನೆಯನ್ನು ಉಳಿಸಿ’ (Save the Idea of India) ಚಳುವಳಿಯನ್ನು ಆರಂಭಿಸಲು ಉದ್ದೇಶಿಸಿದೆ. ಇತ್ತೀಚೆಗೆ ರಾಜ್ಯಸಭೆಯಿಂದ ನಿವೃತ್ತಿ ಹೊಂದಿದ, ರಾಜ್ಯಸಭಾ ಸದಸ್ಯ ಗುಲಾಮ್ ನಬಿ ಆಜಾದ್​ಗೆ ಮತ್ತೊಂದು ಅವಧಿಯ ಸದಸ್ಯತ್ವ ನೀಡಲು ಕಾಂಗ್ರೆಸ್ ನಿರಾಸಕ್ತಿ ತೋರಿತ್ತು. ಕಾಂಗ್ರೆಸ್​ನ ಇಂಥಾ ನಿರ್ಧಾರಗಳ ಬಗ್ಗೆ G23 ಅಸಮಾಧಾನ ತೋರಿತ್ತು. ಕಾಂಗ್ರೆಸ್ ಕಳೆಗುಂದುತ್ತಿದ್ದು, ಪಕ್ಷ ಬಲಪಡಿಸುವುದು ಈಗ ಅನಿವಾರ್ಯ ಎಂದು G23 ಅಭಿಪ್ರಾಯಪಟ್ಟಿತ್ತು. ಹೀಗಾಗಿ, ಪಕ್ಷ ಪುನಃಶ್ಚೇತನಗೊಳಿಸುವ ಆಶಯದಿಂದ ಕಾಂಗ್ರೆಸ್​ನ G23 ನಾಯಕರು ಇಂದು ಜಮ್ಮುವಿನಲ್ಲಿ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿದರು.

ಕಾಂಗ್ರೆಸ್ ಪಕ್ಷ ದುರ್ಬಲವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅದಕ್ಕಾಗಿಯೇ ನಾವಿಲ್ಲಿ ಸೇರಿದ್ದೇವೆ. ಈ ಮೊದಲು ಕೂಡ ನಾವು ಹೀಗೆ ಸೇರಬಹುದಾಗಿತ್ತು. ಈಗ ನಾವೆಲ್ಲರೂ ಒಟ್ಟಾಗಿ ಪಕ್ಷವನ್ನು ಬಲಪಡಿಸಬೇಕಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದರು. ಜಮ್ಮುವಿನಲ್ಲಿ ಇಂದು (ಫೆ.27) ನಡೆದ ಶಾಂತಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ವಿಮಾನವನ್ನು ಚಲಾಯಿಸುವ ಮತ್ತು ಅದರಲ್ಲಿನ ಸಮಸ್ಯೆ ಗುರುತಿಸಿ, ಪರಿಹಾರ ಸೂಚಿಸುವವನು ಒಬ್ಬ ಅನುಭವಿ ಆಗಿರುತ್ತಾನೆ. ಅಂಥಾ ಅನುಭವ ಗುಲಾಮ್ ನಬಿ ಆಜಾದ್​ಗಿದೆ ಎಂದು ಕಪಿಲ್ ಸಿಬಲ್ ಹೇಳಿದರು. ಜಮ್ಮು ಕಾಶ್ಮೀರದ ಒಬ್ಬನೇ ಒಬ್ಬ ಪ್ರತಿನಿಧಿ ಕೂಡ ರಾಜ್ಯ ಸಭೆಯಲ್ಲಿ ಇಲ್ಲ. 1950ರ ಬಳಿಕ ಇಂಥಾ ಸನ್ನಿವೇಷ ಒಂದು ಬಾರಿಯೂ ಬಂದಿರಲಿಲ್ಲ. ಇದು ಶೀಘ್ರವೇ ಸರಿಯಾಗುತ್ತದೆ ಎಂದು ಆನಂದ್ ಶರ್ಮಾ ತಿಳಿಸಿದರು.

ಕಳೆದ ಒಂದು ದಶಕದಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲವಾಗಿದೆ. ಪಕ್ಷದ ಒಳಿತಿಗಾಗಿ ನಾವು ಧ್ವನಿ ಎತ್ತುತ್ತಿದ್ದೇವೆ. ದೇಶದ ಎಲ್ಲೆಡೆಯೂ ಪಕ್ಷ ಮತ್ತೊಮ್ಮೆ ಬಲಗೊಳ್ಳಬೇಕು. ಯುವ ಸಮುದಾಯವು ಪಕ್ಷದೊಂದಿಗೆ ಉತ್ತಮ ಸಂಬಂಧ, ಸಂಪರ್ಕ ಹೊಂದಬೇಕು. ನಾವು ಪಕ್ಷದ ಉನ್ನತಿಯ ದಿನಗಳನ್ನು ನೋಡಿದ್ದೇವೆ. ಈಗ ನಮಗೆ ವಯಸ್ಸಾಗುತ್ತಿರುವಂತೆ ಪಕ್ಷ ಕಳಾಹೀನವಾಗುವುದನ್ನು ನಾವು ನೋಡಬಯಸುವುದಿಲ್ಲ ಎಂದು ಆನಂದ್ ಶರ್ಮಾ ಬೇಸರ ವ್ಯಕ್ತಪಡಿಸಿದರು.

ನಾವು ಕಾಂಗ್ರೆಸ್​ನ ಸದಸ್ಯರು ಹೌದೋ ಅಲ್ಲವೋ ಎಂದು ನಿರ್ಧರಿಸಲು ಯಾರಿಗೂ ಹಕ್ಕಿಲ್ಲ. ನಾವು ಪಕ್ಷವನ್ನು ಕಟ್ಟುತ್ತೇವೆ. ಬಲಪಡಿಸುತ್ತೇವೆ. ಕಾಂಗ್ರೆಸ್​ನ ಶಕ್ತಿ ಮತ್ತು ಒಗ್ಗಟ್ಟನ್ನು ನಾವು ನಂಬುತ್ತೇವೆ. ಇಂದು ನಾವಿರುವ ಸ್ಥಾನಕ್ಕೆ ಬರಲು ಬಹಳ ದೂರ ಪ್ರಯಾಣ ಮಾಡಿದ್ದೇವೆ. ನಮ್ಮಲ್ಲಿ ಯಾರೂ ಕಿಟಕಿಯಿಂದ ನುಸುಳಿ ಬಂದಿಲ್ಲ. ಬಾಗಿಲ ಮೂಲಕವೇ ನಡೆದು ಬಂದಿದ್ದೇವೆ. ವಿದ್ಯಾರ್ಥಿ ಚಳುವಳಿ, ಯುವಸಮುದಾಯದ ಹೋರಾಟದಿಂದ ತೊಡಗಿ ಇಲ್ಲಿಯವರೆಗೆ ಬಂದಿದ್ದೇವೆ ಎಂದು ಆನಂದ್ ಶರ್ಮಾ ವಿವರಿಸಿದರು.

ಮಹಾತ್ಮ ಗಾಂಧಿ ಚಿಂತನೆ ಮುಂದುವರಿಸಲು ಕಾಂಗ್ರೆಸ್ ಬದ್ಧವಾಗಿದೆ
ಜನರು G23 ಎನ್ನುತ್ತಾರೆ. ನಾನು ಈ ಗುಂಪನ್ನು ಗಾಂಧಿ 23 ಎಂದು ಕರೆಯುತ್ತೇನೆ. ಮಹಾತ್ಮ ಗಾಂಧಿಯವರ ನಂಬಿಕೆ, ಚಿಂತನೆ ಹಾಗೂ ಪರಿಹಾರ ಕ್ರಮಗಳನ್ನು ಆಧರಿಸಿ ಈ ದೇಶದ ಕಾನೂನು ಮತ್ತು ಸಂವಿಧಾನ ರಚನೆಯಾಯಿತು. ಈ ವಿಚಾರಗಳನ್ನು ಮುಂದುವರಿಸಲು ಕಾಂಗ್ರೆಸ್ ಬದ್ಧವಾಗಿದೆ. ಕಾಂಗ್ರೆಸ್ ಶಕ್ತಿಯುತವಾಗಿರುವುದನ್ನು G23 ಬಯಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಜ್ ಬಾಬ್ಬರ್ ಆಶಯ ವ್ಯಕ್ತಪಡಿಸಿದರು.

ಅದು ಜಮ್ಮು ಕಾಶ್ಮೀರ ಆಗಿರಲಿ ಅಥವಾ ಲಡಾಖ್ ಆಗಿರಲಿ. ನಾವು ಎಲ್ಲಾ ಧರ್ಮಗಳನ್ನು, ಜನರನ್ನು ಮತ್ತು ಜಾತಿಗಳನ್ನು ಗೌರವಿಸುತ್ತೇವೆ. ನಾವು ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ. ಅದೇ ನಮ್ಮ ಶಕ್ತಿ ಮತ್ತು ಇದೇ ರೀತಿ ಮುಂದುವರಿಯುತ್ತೇವೆ ಎಂದು ಗುಲಾಮ್ ನಬಿ ಆಜಾದ್ ಹೇಳಿದರು.

ಸರಣಿ ಯಾತ್ರೆಗಳು ಹಾಗೂ ಸಾರ್ವಜನಿಕ ಸಭೆಗಳಿಗೆ ಇಂದು, ಜಮ್ಮು-ಕಾಶ್ಮೀರದಲ್ಲಿ ಚಾಲನೆ ದೊರಕಲಿದೆ. G23 ಗುಂಪಿನ ಓರ್ವ ನಾಯಕ, ಮಾಜಿ ರಾಜ್ಯಸಭಾ ಸದಸ್ಯ ಗುಲಾಮ್ ನಬಿ ಆಜಾದ್ G23ಯ ಇತರರನ್ನು ಜಮ್ಮು ಕಾಶ್ಮೀರಕ್ಕೆ ಆಹ್ವಾನಿಸಿದ್ದಾರೆ. ಗುಲಾಮ್ ನಬಿ ಆಜಾದ್, ಕಪಿಲ್ ಸಿಬಲ್, ಆನಂದ್ ಶರ್ಮಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಮ್ಮು ತಲುಪಿದ್ದಾರೆ. ಗುಲಾಮ್ ನಬಿ ಆಜಾದ್ ಅಧ್ಯಕ್ಷರಾಗಿರುವ NGO, ಗಾಂಧಿ ಗ್ಲೋಬಲ್ ಫ್ಯಾಮಿಲಿ ಫೌಂಡೇಷನ್ ಆಯೋಜಿಸಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ G23 ಸದಸ್ಯರು ಭಾಗವಹಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಪುನಃಶ್ಚೇತನಗೊಳಿಸಬೇಕು
ಗುಲಾಮ್ ನಬಿ ಆಜಾದ್ ನಮ್ಮನ್ನು ಆಹ್ವಾನಿಸಿದ್ದಾರೆ. ಹೀಗಾಗಿ ನಾವು ಅಲ್ಲಿಗೆ ತೆರಳಿ ಒಗ್ಗಟ್ಟು ಪ್ರದರ್ಶನ ಮಾಡುತ್ತೇವೆ ಎಂದು G23 ಸದಸ್ಯರೊಬ್ಬರು ಈ ಮೊದಲು ಹೇಳಿಕೆ ನೀಡಿದ್ದರು. ಶನಿವಾರ ಎರಡು ಸಾರ್ವಜನಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯೋಜನೆಯಿದೆ. ಜತೆಗೆ, ಭಾನುವಾರ ಕೂಡ ಒಂದು ಸಭೆ ನಡೆಸುವ ಉದ್ದೇಶವಿದೆ. ಇದೇ ರೀತಿಯ ಕಾರ್ಯಕ್ರಮಗಳನ್ನು ದೇಶಾದ್ಯಂತ ನಡೆಸುತ್ತೇವೆ. ಜಮ್ಮು ಬಳಿಕ, ಲುಧಿಯಾನ ಹಾಗೂ ಕುರುಕ್ಷೇತ್ರದಲ್ಲಿ ಸಭೆ ನಡೆಸಲು ಚಿಂತಿಸಲಾಗಿದೆ ಎಂದೂ ಸದಸ್ಯರು ಮಾಹಿತಿ ಹಂಚಿಕೊಂಡಿದ್ದರು.

ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನಗೊಳಿಸುವ, ಎಲ್ಲಾ ಹಂತದಲ್ಲೂ ಬಲಗೊಳಿಸುವ, ಪ್ರಾತಿನಿಧ್ಯ ಗಳಿಸುವ ಬಗ್ಗೆ G23 ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ. ಬ್ಲಾಕ್ ಮಟ್ಟದಿಂದ, ಜಿಲ್ಲಾ ಮಟ್ಟದವರೆಗೆ ಮತ್ತು ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ತನಕ (CWC), ಅಷ್ಟೇ ಅಲ್ಲದೆ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕೇಂದ್ರ ಚುನಾವಣಾ ಸಮಿತಿಯವರೆಗೆ ಪಕ್ಷವನ್ನು ಪುನಃಶ್ಚೇತನಗೊಳಿಸಬೇಕು ಎಂಬ ವಿಚಾರವನ್ನು G23 ನಾಯಕರೊಬ್ಬರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Narendra Modi: ವಿಪಕ್ಷ ನಾಯಕ ಗುಲಾಂ​ ನಬೀ ಆಜಾದ್​​ಗೆ ವಿದಾಯ: ಭಾಷಣದ ವೇಳೆ ಕಣ್ಣೀರಿಟ್ಟ ಪ್ರಧಾನಿ ನರೇಂದ್ರ ಮೋದಿ

Ghulam Nabi Azad: ಹಿಂದೂಸ್ತಾನಿ ಮುಸ್ಲಿಂ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ; ಗುಲಾಂ ನಬಿ ಆಜಾದ್

Published On - 4:05 pm, Sat, 27 February 21