ಗೋಲ್ಡನ್ ಚಾರಿಯೆಟ್ ಐಷಾರಾಮಿ ರೈಲು ಸಂಚಾರ ಮಾರ್ಚ್ 14ರಿಂದ ಪ್ರಾರಂಭ; ಈ ಬಾರಿ ಇದೆ ವಿಶೇಷ ಆಫರ್
ಗೋಲ್ಡನ್ ಚಾರಿಯೆಟ್ ರೈಲು ರಾಜ್ಯದಲ್ಲಿ ಶುರುವಾಗಿದ್ದು 2008ರಲ್ಲಿ. ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಪ್ರಾರಂಭ ಮಾಡಲಾಗಿದ್ದು ಇದರ ಉಸ್ತುವಾರಿಯನ್ನು ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ವಹಿಸಿಕೊಂಡಿದೆ.
ಕೊವಿಡ್ 19 ಕಾರಣದಿಂದ ಸ್ಥಗಿತಗೊಂಡಿದ್ದ ಗೋಲ್ಡನ್ ಚಾರಿಯೆಟ್ ಐಷಾರಾಮಿ ಪ್ರವಾಸಿ ರೈಲು ಸಂಚಾರ ಮಾರ್ಚ್ 14ರಿಂದ ಪುನರಾರಂಭಗೊಳ್ಳಲಿದೆ. ಮಾರ್ಚ್ 14ಮತ್ತು 21ರಿಂದ ಸುಂದರತಾಣಗಳ ಪ್ರವಾಸ ಮಾಡಲು http://goldenchariot.org ವೆಬ್ಸೈಟ್ಗೆ ಹೋಗಿ ಟಿಕೆಟ್ ಬುಕ್ ಮಾಡಬಹುದು. ಈ ಬಾರಿ ಗೋಲ್ಡನ್ ಚಾರಿಯೆಟ್ ರೈಲಿನಲ್ಲಿ ಪ್ರವಾಸ ಮಾಡುವವರಿಗೆ ಬೆಂಗಳೂರು-ಚಂಡೀಗಢ್ ವಿಮಾನಯಾನಕ್ಕೆ ಉಚಿತವಾಗಿ ಟಿಕೆಟ್ ಕೂಡ ನೀಡಲಾಗುವುದು.
ಭಾನುವಾರದಿಂದ ಗೋಲ್ಡನ್ ಚಾರಿಯಟ್ ಪ್ರವಾಸಿ ರೈಲುಗಳ ಸಂಚಾರ ಪ್ರಾರಂಭವಾಗಲಿದ್ದು, ಒಟ್ಟು ಮೂರು ಪ್ಯಾಕೇಜ್ ಇರಲಿದೆ. ಯಾವ್ಯಾವ ಪ್ಯಾಕೇಜ್ನಲ್ಲಿ ಎಲ್ಲೆಲ್ಲಿಗೆ ಟೂರ್ ಎಂಬ ಮಾಹಿತಿ ಇಲ್ಲಿದೆ ನೋಡಿ..
ಪ್ರೈಡ್ ಆಫ್ ಕರ್ನಾಟಕ ಪ್ಯಾಕೇಜ್ ಮೊದಲ ದಿನ ಅಂದರೆ ಭಾನುವಾರ ಬೆಳಗ್ಗೆ ಬೆಂಗಳೂರು ಯಶವಂತಪುರ ರೈಲ್ವೆ ನಿಲ್ದಾಣದಿಂದ ಗೋಲ್ಡನ್ ಚಾರಿಯೆಟ್ ಹೊರಡಲಿದ್ದು, ಬಂಡೀಪುರಕ್ಕೆ ತೆರಳಲಿದೆ. ಸಂಜೆ 4.30ರಿಂದ 6.30ರವರೆಗೆ ಅಲ್ಲಿ ಸಫಾರಿ ಮುಗಿದ ಬಳಿಕ ಡಿನ್ನರ್. ಅಲ್ಲಿಂದ ಹೊರಟ ರೈಲು ಮಧ್ಯರಾತ್ರಿ ಹೊತ್ತಿಗೆ ಮೈಸೂರು ತಲುಪಲಿದೆ. ಅದಾದ ಬಳಿಕ ಸೋಮವಾರ ಬೆಳಗ್ಗಿನ ತಿಂಡಿಯ ಬಳಿಕ ಪ್ರವಾಸಿಗರಿಗೆ ಮೈಸೂರು ಅರಮನೆ ದರ್ಶನ ಮಾಡಿಸಲಿದ್ದು, ಅಲ್ಲಿಂದ ಸಂಜೆ ಹೊತ್ತಿಗೆ ಶ್ರೀರಂಗಪಟ್ಟಣಕ್ಕೆ ತೆರಳಲಿದೆ.
ಮೂರನೇ ದಿನ ಮಂಗಳವಾರ ಹಳೇಬೀಡು, ಬುಧವಾರ ಹಂಪಿ, 5ನೇ ದಿನ ಬಾದಾಮಿ ಗುಹೆಗಳಿಗೆ ಪ್ರಯಾಣ ಮಾಡಲಿದ್ದು, ಪಟ್ಟದಕಲ್ಲು, ಐಹೊಳೆಯನ್ನು ವೀಕ್ಷಿಸಬಹುದಾಗಿದೆ. ಹಾಗೇ 6ನೇ ದಿನ ಅಂದರೆ ಶುಕ್ರವಾರ ರೈಲು ಗೋವಾಕ್ಕೆ ಸಾಗಲಿದೆ. ಅಲ್ಲಿ ಉತ್ತರ ಗೋವಾದ ಚರ್ಚ್ಗಳು, ಮ್ಯೂಸಿಯಂಗಳು ಪ್ರವಾಸಿಗರ ವೀಕ್ಷಣಾ ಸ್ಥಳಗಳಾಗಿದ್ದು ಅಲ್ಲಿಂದ ಏಳನೇ ದಿನ ಅಂದರೆ ಶನಿವಾರ ಬೆಂಗಳೂರಿಗೆ ಹಿಂದಿರುಗಲಿದೆ.
ಜ್ಯುವೆಲ್ಸ್ ಆಫ್ ಸೌತ್ ಭಾನುವಾರ ಬೆಂಗಳೂರಿನಿಂದ ಹೊರಟ ರೈಲು ಮೈಸೂರಿಗೆ ತಲುಪಲಿದೆ. ಅಲ್ಲಿಂದ ಸೋಮವಾರ ಹಂಪಿ, ಮಂಗಳವಾರ ತಮಿಳುನಾಡಿನ ಮಹಾಬಲಿಪುರಂ, ಬುಧವಾರ ತಂಜಾವೂರು, ಚೆಟ್ಟಿನಾಡ್, ಗುರುವಾರ ಕೊಚ್ಚಿನ್, ಶುಕ್ರವಾರ ಕುಮಾರ್ಕೋಮ್ಗೆ ತೆರಳಿ, ಶನಿವಾರ ಬೆಂಗಳೂರಿಗೆ ವಾಪಸ್ ಬರಲಿದೆ.
ಗ್ಲಿಮ್ಸಸ್ ಆಫ್ ಕರ್ನಾಟಕ ಇದು 3ರಾತ್ರಿ/4 ಹಗಲುಗಳ ಪ್ರಯಾಣ. ಇದರಲ್ಲಿ ಮೊದಲ ದಿನ ಅಂದರೆ ಭಾನುವಾರ ಬೆಂಗಳೂರಿನಿಂದ ಹೊರಟ ರೈಲು ಬಂಡೀಪುರಕ್ಕೆ ತೆರಳಲಿದೆ. ಸೋಮವಾರ ಮೈಸೂರು, ಮಂಗಳವಾರ ಹಂಪಿಗೆ ಹೋಗಿ ಅಲ್ಲಿಂದ ಬುಧವಾರ ವಾಪಸ್ ಬೆಂಗಳೂರಿಗೆ ಬರಲಿದೆ. ಗೋಲ್ಡನ್ ಚಾರಿಯೆಟ್ ರೈಲು ರಾಜ್ಯದಲ್ಲಿ ಶುರುವಾಗಿದ್ದು 2008ರಲ್ಲಿ. ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಪ್ರಾರಂಭ ಮಾಡಲಾಗಿದ್ದು, ಇದರ ಉಸ್ತುವಾರಿಯನ್ನು ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ವಹಿಸಿಕೊಂಡಿದೆ.
ಇದನ್ನೂ ಓದಿ: Modi in Assam: ಈಶಾನ್ಯ ಭಾರತದಲ್ಲಿ ಪ್ರವಾಸೋದ್ಯಮದ ಹೊಸ ಶಕೆ: ನರೇಂದ್ರ ಮೋದಿ
ಮದುವೆಗೆ ಅಡ್ಡಿಯಾದ ಕೊರೊನಾ ರೂಲ್ಸ್: ವಧು ಮಡಿಕೇರಿಯಲ್ಲಿ.. ವರ ಕೇರಳದಲ್ಲಿ ಲಾಕ್!
Published On - 6:04 pm, Sat, 27 February 21