ವಾರಾಣಸಿಯಲ್ಲಿ ಅಪಾಯದ ಮಟ್ಟ ಮೀರಿದ ಗಂಗಾ ನದಿ; 84 ಘಾಟ್​​ಗಳು ಜಲಾವೃತ

ಉತ್ತರ ಪ್ರದೇಶದ ಜನಪ್ರಿಯ ಧಾರ್ಮಿಕ ನಗರಿ ವಾರಾಣಸಿಯಲ್ಲಿ ಗಂಗಾ ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ನದಿ ತೀರದ ಪ್ರಸಿದ್ಧ ಘಾಟ್‌ಗಳು ಜಲಾವೃತಗೊಂಡಿವೆ. ಮೇಲ್ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಗಂಗಾ ನದಿಯ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ವಾರಾಣಸಿಯ ಐತಿಹಾಸಿಕ ಘಾಟ್‌ಗಳು ನೀರಿನಲ್ಲಿ ಮುಳುಗಡೆಯಾಗಿವೆ.

ವಾರಾಣಸಿಯಲ್ಲಿ ಅಪಾಯದ ಮಟ್ಟ ಮೀರಿದ ಗಂಗಾ ನದಿ; 84 ಘಾಟ್​​ಗಳು ಜಲಾವೃತ
Varanasi Ghat
Image Credit source: x

Updated on: Aug 31, 2026 | 5:31 PM

ವಾರಾಣಸಿ, ಆಗಸ್ಟ್ 31: ಉತ್ತರ ಪ್ರದೇಶದ ವಾರಾಣಸಿಯಲ್ಲಿ (Varanasi) ಗಂಗಾ ನದಿಯ ನೀರಿನ ಮಟ್ಟ ತೀವ್ರ ಗತಿಯಲ್ಲಿ ಏರಿಕೆಯಾಗಿದ್ದು, ನಗರದ ಎಲ್ಲಾ 84 ಘಾಟ್‌ಗಳು ನೀರಿನಲ್ಲಿ ಮುಳುಗಡೆಯಾಗಿವೆ. ನದಿ ತೀರದ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಪ್ರವಾಹ ಭೀತಿ ಎದುರಾಗಿದೆ.ಇಂದು ಗಂಗಾ ನದಿಯು 69.40 ಮೀಟರ್ ಮಟ್ಟದಲ್ಲಿ ಹರಿಯುತ್ತಿದ್ದು, ಎಚ್ಚರಿಕೆಯ ಮಟ್ಟ 70.262 ಮೀಟರ್ ಹಾಗೂ ಅಪಾಯದ ಮಟ್ಟ 71.26 ಮೀಟರ್ ಆಗಿದೆ. ಗಂಗಾ ನದಿಯ ನೀರು ಗಂಟೆಗೆ ಸುಮಾರು 4 ಸೆಂ.ಮೀ.ನಷ್ಟು ಏರಿಕೆಯಾಗುತ್ತಿದ್ದು, ನಮೋ ಘಾಟ್‌ನಲ್ಲಿರುವ ‘ನಮಸ್ತೆ’ ವಿಗ್ರಹವು ನೀರಿನಲ್ಲಿ ಮುಳುಗಿದೆ.

ದೋಣಿ ಸಂಚಾರ ನಿಷೇಧ:

ಗಂಗಾ ನದಿಯಲ್ಲಿ ನೀರಿನ ಹರಿವು ಮತ್ತು ರಭಸ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಗಂಗಾ ನದಿಯಲ್ಲಿ ದೋಣಿ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ

ಗಂಗಾ ನದಿಯ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ವರುಣಾ ನದಿಯಲ್ಲೂ ಹಿಮ್ಮುಖ ಹರಿವು ಉಂಟಾಗಿ, ದಂಡೆಯ ಮೇಲಿರುವ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಆರಂಭಿಸಿದ್ದಾರೆ.


61 ಪರಿಹಾರ ಶಿಬಿರಗಳ ಸ್ಥಾಪನೆ:

ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ವಾರಾಣಸಿ ಜಿಲ್ಲಾಡಳಿತವು 61 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, ಅಲ್ಲಿ ವಸತಿ, ಆಹಾರ, ಕುಡಿಯುವ ನೀರು, ನೈರ್ಮಲ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸದ್ಯದ ಸ್ಥಿತಿಗತಿಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು 21 ಪ್ರವಾಹ ಕಾವಲು ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ತುರ್ತು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ 198 ದೋಣಿಗಳನ್ನು ಕಾಯ್ದಿರಿಸಲಾಗಿದೆ. NDRF, ವಾಟರ್ ಪೊಲೀಸ್ ಮತ್ತು ಬಿಎಸ್‌ಎಫ್ ಪಡೆಯ ತಂಡಗಳನ್ನು ಸನ್ನದ್ಧವಾಗಿರಿಸಲಾಗಿದೆ. ದನಕರುಗಳಿಗೆ ಮೇವು, ನೀರು ಮತ್ತು ಆಶ್ರಯ ತಾಣಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇದನ್ನೂ ಓದಿ: ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಜನ ಕನ್ನಡಿಗರು, ಸಿಎಂ ಡಿಕೆಶಿ ಹೇಳಿದ್ದೇನು ನೋಡಿ

ಪ್ರಸಿದ್ಧ ದಶಾಶ್ವಮೇಧ ಘಾಟ್ ಸೇರಿದಂತೆ ಪ್ರಮುಖ ಘಾಟ್‌ಗಳಲ್ಲಿ ನಡೆಯುವ ಸಾಯಂಕಾಲದ ‘ಗಂಗಾ ಆರತಿ’ಯನ್ನು ನದಿಯ ಮೆಟ್ಟಿಲುಗಳ ಬದಲಿಗೆ ಮೇಲ್ಭಾಗದ ಸುರಕ್ಷಿತ ಸ್ಥಳಗಳಲ್ಲಿ ನೆರವೇರಿಸಲಾಗುತ್ತಿದೆ. ಗಂಗಾ ನದಿಯ ದಂಡೆಯ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ನದಿಯ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿರುವುದರಿಂದ ನದಿ ತೀರಕ್ಕೆ ತೆರಳದಂತೆ ಆಡಳಿತ ಮಂಡಳಿಯು ಪ್ರವಾಸಿಗರಿಗೆ ಮತ್ತು ಭಕ್ತಾದಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us