ಫೆ. 7ರಂದು ಸರಳವಾಗಿ ಅದಾನಿ ಮಗ ಜೀತ್ ಮದುವೆ; ಯಾವ ಸೆಲೆಬ್ರಿಟಿಗಳಿಗೂ ಆಹ್ವಾನವಿಲ್ಲ!

|

Updated on: Jan 21, 2025 | 10:54 PM

ಭಾರತದ ಅತ್ಯಂತ ಶ್ರೀಮಂತರಲ್ಲೊಬ್ಬರಾಗಿರುವ ಗೌತಮ್ ಅದಾನಿಯ ಕಿರಿಯ ಮಗ ಜೀತ್ ಅದಾನಿ ವಜ್ರದ ವ್ಯಾಪಾರಿಯ ಮಗಳು ದಿವಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ವಿವಾಹ ಫೆಬ್ರವರಿ 7ರಂದು ನಡೆಯಲಿದೆ. ಅಂಬಾನಿಯಂತೆ ಅದಾನಿ ಭಾರೀ ಅದ್ದೂರಿಯಾಗಿ ಈ ಮದುವೆ ಮಾಡದೆ ಸರಳವಾಗಿ ಮಾಡಲು ನಿರ್ಧರಿಸಿದ್ದಾರೆ. ಈ ಮದುವೆಗೆ ಯಾವುದೇ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿಲ್ಲ ಎನ್ನಲಾಗಿದೆ.

ಫೆ. 7ರಂದು ಸರಳವಾಗಿ ಅದಾನಿ ಮಗ ಜೀತ್ ಮದುವೆ; ಯಾವ ಸೆಲೆಬ್ರಿಟಿಗಳಿಗೂ ಆಹ್ವಾನವಿಲ್ಲ!
Jeet Adani
Follow us on

ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಇಂದು ಪ್ರಯಾಗ್‌ರಾಜ್‌ನಲ್ಲಿ ತಮ್ಮ ಪತ್ನಿ ಪ್ರೀತಿ ಅದಾನಿ ಮತ್ತು ಹಿರಿಯ ಪುತ್ರ ಕರಣ್ ಅದಾನಿ ಅವರೊಂದಿಗೆ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಗೌತಮ್ ಅದಾನಿ ಅವರು ತಮ್ಮ ಕಿರಿಯ ಪುತ್ರ ಜೀತ್ ಅದಾನಿ ಫೆಬ್ರವರಿ 7ರಂದು ವಿವಾಹವಾಗಲಿದ್ದಾರೆ ಎಂದು ಘೋಷಿಸಿದ್ದಾರೆ.

“ನನ್ನ ಮಗ ಜೀತ್ ಮದುವೆ ಫೆಬ್ರವರಿ 7ರಂದು ನಡೆಯಲಿದೆ. ನಮ್ಮ ಆಚರಣೆಗಳು ಸಾಮಾನ್ಯ ಜನರಂತೆಯೇ ಇರುತ್ತವೆ. ಆತನ ವಿವಾಹವು ತುಂಬಾ ಸರಳ ಮತ್ತು ಸಂಪೂರ್ಣವಾಗಿ ಸಾಂಪ್ರದಾಯಿಕ ರೀತಿಯಲ್ಲಿ ನಡೆಯಲಿದೆ” ಎಂದು ಗೌತಮ್ ಅದಾನಿ ತಮ್ಮ ಮಗನ ವಿವಾಹದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಇದನ್ನೂ ಓದಿ: ಮಹಾ ಕುಂಭದಲ್ಲಿ ಅದಾನಿ ಗ್ರೂಪ್ ಮತ್ತು ಇಸ್ಕಾನ್​ನಿಂದ ಮಹಾಪ್ರಸಾದ ಸೇವೆ ಆರಂಭ

ಈ ಮೂಲಕ ಬಿಲಿಯನೇರ್ ಗೌತಮ್ ಅದಾನಿಯವರ ಕಿರಿಯ ಪುತ್ರ ಜೀತ್ ಮುಂದಿನ ತಿಂಗಳು ಯಾವುದೇ ಆಡಂಬರ ಮತ್ತು ಪ್ರದರ್ಶನ ಮತ್ತು ಸೆಲೆಬ್ರಿಟಿ ತಾರೆಯರಿಲ್ಲದೆ ಸರಳ ಮತ್ತು ಸಾಂಪ್ರದಾಯಿಕ ಸಮಾರಂಭದಲ್ಲಿ ವಿವಾಹವಾಗಲಿದ್ದಾರೆ. ಅದಾನಿ ಮಗನ ಮದುವೆ ಕೂಡ ಅವರ ಪ್ರತಿಸ್ಪರ್ಧಿ ಬಿಲಿಯನೇರ್ ಆಗಿರುವ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅವರ ವಿವಾಹದಂತೆ ಮತ್ತೊಂದು ಅದ್ದೂರಿ ವಿವಾಹವಾಗಿರಲಿದೆ ಎಂದು ಊಹಿಸಲಾಗಿತ್ತು.


ನಿಮ್ಮ ಮಗನ ವಿವಾಹವು “ಸೆಲೆಬ್ರಿಟಿಗಳ ಮಹಾ ಕುಂಭ”ವಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಲಿಯನೇರ್ ಅದಾನಿ, “ಖಂಡಿತವಾಗಿಯೂ ಇಲ್ಲ!” ಎಂದು ಹೇಳಿದ್ದಾರೆ. 28 ವರ್ಷದ ಜೀತ್ ಮಾರ್ಚ್ 2023ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಜ್ರದ ವ್ಯಾಪಾರಿಯ ಮಗಳು ದಿವಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರಿಬ್ಬರ ವಿವಾಹ ಅಹಮದಾಬಾದ್‌ನಲ್ಲಿ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ