ರಾಜಕೀಯಕ್ಕೆ ಗುಡ್​​ ಬೈ ಹೇಳಿ, ಟೀಚರ್​ ಉದ್ಯೋಗಕ್ಕೆ ಸೇರಿಕೊಂಡ ಮಹಿಳೆ! ಹೀಗೂ ಉಂಟೆ?

Madanapalle: ಆಂಧ್ರಪ್ರದೇಶದಲ್ಲಿ ಮುನ್ಸಿಪಲ್ ಕೌನ್ಸಿಲರ್ ಆಗಿದ್ದ ಈ ಮಹಿಳೆ ಕೆಲಸಕ್ಕೆ ರಾಜೀನಾಮೆ ನೀಡಿ, ಅದೂ ಗುತ್ತಿಗೆ ಆಧಾರದ ಮೇಲೆ ಶಿಕ್ಷಕಿ ಕೆಲಸವನ್ನು ಅಪ್ಪಿಕೊಂಡಿದ್ದಾರೆ.

ರಾಜಕೀಯಕ್ಕೆ ಗುಡ್​​ ಬೈ ಹೇಳಿ, ಟೀಚರ್​ ಉದ್ಯೋಗಕ್ಕೆ ಸೇರಿಕೊಂಡ ಮಹಿಳೆ! ಹೀಗೂ ಉಂಟೆ?
ರಾಜಕೀಯ ಬಿಟ್ಟು, ಟೀಚರ್​ ಉದ್ಯೋಗ ಸೇರಿಕೊಂಡ ಮಹಿಳೆ!
Follow us
ಸಾಧು ಶ್ರೀನಾಥ್​
|

Updated on:Apr 27, 2023 | 1:55 PM

ದೊಡ್ಡ ದೊಡ್ಡ ಉದ್ಯೋಗಗಳಿಗೆ ರಾಜೀನಾಮೆ ನೀಡಿ ಜನ ನಾ ಮುಂದು ತಾ ಮುಂದು ಎಂದು ತಮ್ಮ ಅದೃಷ್ಟವನ್ನು ಪರೀಕ್ಷಿಸಲು ರಾಜಕೀಯಕ್ಕೆ ಧುಮುಕುವುದನ್ನು ನಾವು ನೋಡಿದ್ದೇವೆ. ಈಗಂತೂ ನಮ್ಮದೇ ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಅದರಲ್ಲಿ ಅನೇಕ ಮಂದಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ವೊಗಾಯಿಸಿ ಎಂಎಲ್ಎ ಆಗುವ ಕನಸು ಕಾಣುತ್ತಿದ್ದಾರೆ. ರಾಜಕೀಯದ ಸೆಳೆತವೇ ಹಾಗೆ. ಎಂಎಲ್​ಎ, ಎಂಪಿ ಆಗದಿದ್ದರೂ ಕನಿಷ್ಠ ವಾರ್ಡ್ ಸದಸ್ಯನೋ ಅಥವಾ ಗ್ರಾಮ ಪಂಚಾಯಿತಿ ಸದಸ್ಯನಾಗಿ ಉದ್ಧಾರವಾಗಿಬಿಡೋಣ (ಸಾರಿ, ಜನ ಸೇವೆ ಮಾಡೋಣ) ಎಂದೇ ಲೆಕ್ಕಾಚಾರ ಹಾಕುವ, ಕನಸು ಕಾಣುವ ಮಂದಿ ಇದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ತೀರಾ ವಿಭಿನ್ನವಾಗಿ, ತಮ್ಮ ನಗರಸಭೆ ಸದಸ್ಯತ್ವಕ್ಕೆ (Municipal Councillor) ರಾಜೀನಾಮೆ (Resignation) ನೀಡಿ, ಶಿಕ್ಷಕಿ ಹುದ್ದೆಯನ್ನು (Teacher) ಆಯ್ಕೆ ಮಾಡಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಅದೂ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ಕೆಲಸಕ್ಕಾಗಿ (Job) ಅವರು ಆಯ್ಕೆಗೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿಯಲ್ಲಿ (Madanapalle) ಈ ಅಚ್ಚರಿ ನಡೆದಿದೆ. ಮದನಪಲ್ಲಿ ಪುರಸಭೆಯ 8ನೇ ವಾರ್ಡ್‌ನಿಂದ ಟಿಡಿಪಿ ಪರವಾಗಿ ಗೀತಾಶ್ರೀ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. 1998ರಲ್ಲಿಯೇ ಶಿಕ್ಷಕಿ ಹುದ್ದೆಗಾಗಿ ಡಿಎಸ್‌ಸಿ ಪರೀಕ್ಷೆ ಬರೆದಿದ್ದರು. ಆಗ ಅವರು ಆಯ್ಕೆಯೂ ಆಗಿದ್ದರು. ಆದರೆ ಕಾರಣಾಂತರಗಳಿಂದ ಆಕೆ ನೇಮಕಾತಿ ಆಗಿರಲಿಲ್ಲ. ಆದರೆ ಇದೇ ತಿಂಗಳ ಏಪ್ರಿಲ್​​ 13ರಂದು ಚಿತ್ತೂರು ಡಿಇಒ ಗೀತಾಶ್ರೀ ಅವರನ್ನು ಶಿಕ್ಷಕಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಗೀತಾಶ್ರೀ ಅವರು ಒಂದು ಕ್ಷಣವೂ ವ್ಯರ್ಥ ಮಾಡದೆ ಶಿಕ್ಷಕಿ ಹುದ್ದೆಯನ್ನು ಅಪ್ಪಿಕೊಂಡಿದ್ದಾರೆ. ಸೆಕೆಂಡ್​ ಥಾಟ್​​ಗೆ ಅವಕಾಶವೂ ನೀಡದೆ ಕೌನ್ಸಿಲರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಕೆಯ ರಾಜೀನಾಮೆಯನ್ನು ಮದನಪಲ್ಲಿ ಮುನ್ಸಿಪಲ್ ಕಮಿಷನರ್ ತಕ್ಷಣವೇ ಅಂಗೀಕರಿಸಿದ್ದೂ ಆಗಿದೆ.

ಇದನ್ನೂ ಓದಿ: ಆದಾಯಕ್ಕಿಂತಲೂ ಅಧಿಕ ಸಂಪತ್ತು ಬೆಳೆದಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿ ಮತ್ತು ಆತನ ಪತ್ನಿಗೂ ಶಿಕ್ಷೆ- ಅಪರೂಪದ ಪ್ರಕರಣ!

ಕೌನ್ಸಿಲರ್ ಹುದ್ದೆಗೆ ರಾಜೀನಾಮೆ ನೀಡಿದ ಗೀತಾಶ್ರೀ ಅವರು ಕೂಡಲೇ ಶಿಕ್ಷಕಿಯಾಗಿ ಶಾಲೆ ಸೇರಿಕೊಂಡು ಮಕ್ಕಳಿಗೆ ಪಾಠ ಮಾಡತೊಡಗಿದ್ದಾರೆ. ತಮ್ಮ ಮೇಲೆ ನಂಬಿಕೆ ಇಟ್ಟು ಕೌನ್ಸಿಲರ್ ಆಗಿ ಗೆಲ್ಲಿಸಿದ ತಮ್ಮ ವಾರ್ಡಿನ ಜನತೆಗೆ ಪೂರ್ಣ ನ್ಯಾಯ ಕೊಡಿಸಲು ಸಾಧ್ಯವಾಗಲಿಲ್ಲ, ಕ್ಷಮಿಸಬೇಕು ಎಂದು ಗೀತಾಶ್ರೀ ತಮ್ಮ ವಾರ್ಡ್ ಜನರನ್ನು ಕೋರಿದ್ದಾರೆ. ರಾಜಕೀಯದಿಂದ ಹಿಂದೆ ಸರಿಯುತ್ತಿದ್ದರೂ ಜನತೆಗೆ ಸದಾ ಲಭ್ಯವಿರುವುದಾಗಿ ಭರವಸೆ ನೀಡಿದ್ದಾರೆ.

ಒಂದು ಗಮನಿಸಿ, ಗೀತಾಶ್ರೀಗೆ ಸಿಕ್ಕಿದ್ದು ಕಾಯಂ ಶಿಕ್ಷಕಿ ಕೆಲಸವಲ್ಲ. ಸರಕಾರ ಅವರನ್ನು ಗುತ್ತಿಗೆ ಆಧಾರದ ಮೇಲೆ ಶಿಕ್ಷಕಿಯಾಗಿ ನೇಮಿಸಿದೆ. ಮಾಸಿಕ ವೇತನ ಕೇವಲ 32,670 ರೂಪಾಯಿ. ಈ ನೇಮಕಾತಿಯು ಹೈಕೋರ್ಟ್ ಆದೇಶಕ್ಕೆ ಒಳಪಟ್ಟಿದೆ ಎಂದು ಡಿಇಒ ನೇಮಕಾತಿ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:53 pm, Thu, 27 April 23